ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆರಾಕ್ಸ್‌ ಅಂಗಡಿಗಳಲ್ಲಿ ಪ್ರಶ್ನೆಪತ್ರಿಕೆ ಬಿಕರಿ?

ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ, 8-9ನೇ ಸಂಕಲನಾತ್ಮಕ ಪರೀಕ್ಷೆ ಹೊಸ ವ್ಯವಸ್ಥೆಯಲ್ಲೇ ಅವ್ಯವಸ್ಥೆಯ ಆರೋಪ
Published : 29 ಸೆಪ್ಟೆಂಬರ್ 2024, 6:02 IST
Last Updated : 29 ಸೆಪ್ಟೆಂಬರ್ 2024, 6:02 IST
ಫಾಲೋ ಮಾಡಿ
Comments

ಕುಷ್ಟಗಿ: ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಮುಖ್ಯಪರೀಕ್ಷೆ ಮಾದರಿಯಲ್ಲಿಯೇ ಏಕರೂಪದ ಪ್ರಶ್ನೆಪತ್ರಿಕೆಗಳ ಮೂಲಕ ನಡೆಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸುವ ಮತ್ತು ಪರೀಕ್ಷೆ ಪಾವಿತ್ರ್ಯ ಕುರಿತು ಮಕ್ಕಳು, ಪಾಲಕರಿಗೆ ಜಾಗೃತಿ ಮೂಡಿಸಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಧ್ಯವಾರ್ಷಿಕ ಪರೀಕ್ಷೆ ನಡೆಸುತ್ತಿದೆ. ಆದರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮತ್ತು ಸುರಕ್ಷತೆಯೇ ಇಲ್ಲದೆ ಅವ್ಯವಸ್ಥೆಯಿಂದಾಗಿ ಪ್ರಶ್ನೆಪತ್ರಿಕೆಗಳು ಹಣಕ್ಕೆ ಬಿಕರಿಯಾಗುತ್ತಿರುವ ಆರೋಪಗಳು ಕೇಳಿ ಬಂದಿವೆ.

ಸೆ. 24ರಿಂದ ಆಯಾ ಶಾಲೆಗಳಲ್ಲಿ ಆರಂಭಗೊಂಡಿರುವ ಅರ್ಧವಾರ್ಷಿಕ ಪರೀಕ್ಷೆಗಳು ನಾಳೆಗೆ ಕೊನೆಗೊಳ್ಳಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಗಳನ್ನು ಮಂಡಳಿಯೇ ಸಿದ್ಧಪಡಿಸಿ ಕಳುಹಿಸುತ್ತಿದ್ದರೆ 8-9ನೇ ತರಗತಿಯ ಪ್ರಶ್ನೆಪತ್ರಿಕೆಗಳನ್ನು ಏಕರೂಪದಲ್ಲಿ ಜಿಲ್ಲಾ ಹಂತದಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ಕಳಿಸುವ ಬದಲು ವೆಬ್‌ಸೈಟ್‌ ಲಿಂಕ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ವ್ಯವಸ್ಥೆ ಮಾಡಿರುವುದು ಎಡವಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.

ಹೀಗಿದೆ ವ್ಯವಸ್ಥೆ:

ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆಗಳ ಲಿಂಕ್‌ಅನ್ನು ಮಂಡಳಿಯು ಉಪನಿರ್ದೇಶಕರಿಗೆ ಕಳಿಸಿದರೆ ನಂತರ ಉಪ ನಿರ್ದೇಶಕರು ಮಾನ್ಯತೆ ಹೊಂದಿದ, ಶಾಲಾ ಸಂಕೇತ ಪಡೆದಿರುವ ಪ್ರೌಢಶಾಲೆಗಳಿಗೆ ಒಂದು ದಿನ ಮುಂಚಿತವಾಗಿಯೇ ಶಾಲಾ ಲಾಗಿನ್‌ಗೆ ಅಥವಾ ವಾಟ್ಸ್‌ಆ್ಯುಪ್‌ ಮೂಲಕ ಪ್ರಶ್ನೆ ಪತ್ರಿಕೆಗಳ ವೆಬ್‌ಸೈಟ್‌ ಲಿಂಕ್ ಕಳಿಸುವ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೆ ಮುಖ್ಯಶಿಕ್ಷಕರು ಗೋಪ್ಯತೆ ಕಾಪಾಡಿಕೊಳ್ಳುವಂತೆ ಮುಖ್ಯಶಿಕ್ಷಕರಿಗೆ ಷರತ್ತು ಕೂಡ ಹಾಕಿದ್ದಾರೆ. ಇಷ್ಟಾದರೂ ಪರೀಕ್ಷೆಯ ಮೊದಲೇ ಪ್ರಶ್ನೆಪತ್ರಿಕೆಗಳು ವಿದ್ಯಾರ್ಥಿಗಳ ಕೈಗೆ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಅಷ್ಟೇ ಅಲ್ಲ ಪ್ರಶ್ನೆ ಪತ್ರಿಕೆಗಳು ಜೆರಾಕ್ಸ್ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಖಚಿತ ಮೂಲಗಳು 'ಪ್ರಜಾವಾಣಿ'ಗೆ ಮಾಹಿತಿ ನೀಡಿವೆ.

ದುರ್ಬಳಕೆ ಹೇಗೆ:

ಕೆಲ ಶಾಲೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿಕೊಳ್ಳಲು ಪ್ರಿಂಟರ್‌, ಅಗತ್ಯ ವ್ಯವಸ್ಥೆ ಇಲ್ಲ. ಹಾಗಾಗಿ ಕೆಲ ಮುಖ್ಯಶಿಕ್ಷಕರು ತಮಗೆ ಬೇಕಾದ ಮತ್ತು ಕಡಿಮೆ ದರದಲ್ಲಿ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿಕೊಡುವಂಥ ಇಂಟರ್‌ನೆಟ್‌ ಕೇಂದ್ರಗಳು, ಜೆರಾಕ್ಸ್‌ ಅಂಗಡಿಗಳಿಗೆ ಹೋಗಿ ತಮಗೆ ಬಂದಿರುವ ವೆಬ್‌ ಲಿಂಕ್‌ ನೀಡಿ ಮುದ್ರಿಸಿಕೊಂಡಿದ್ದಾರೆ. ಆಗ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ. ಈ ಅಕ್ರಮ ಬಹುತೇಕ ಮುಖ್ಯಶಿಕ್ಷಕರ ಗಮನಕ್ಕೆ ಬಂದಿಲ್ಲ, ಇನ್ನು ಕೆಲವರು ಗೊತ್ತಿದ್ದರೂ ಕುಮ್ಮಕ್ಕು ನೀಡಿದ್ದಾರೆ ಕೆಲ ಶಿಕ್ಷಕರು 'ಪ್ರಜಾವಾಣಿ' ಬಳಿ ಅಸಮಾಧಾನ ಹೊರಹಾಕಿದರು.

ಬದಲಾದ ವ್ಯವಸ್ಥೆ:

ಈ ಮಧ್ಯೆ ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಿತರಿಸುವುದು ಮಾನ್ಯತೆ ಹೊಂದಿದ, ಶಾಲಾ ಸಂಕೇತ ಪಡೆದಿರುವ ಪ್ರೌಢಶಾಲೆಗಳಿಗೆ ಒಂದು ದಿನ ಮುಂಚಿತವಾಗಿಯೇ ಶಾಲಾ ಲಾಗಿನ್‌ಗೆ ಪ್ರಶ್ನೆಪತ್ರಿಕೆಗಳನ್ನು ಕಳಿಸಿದ್ದರಿಂದಲೇ ಸೋರಿಕೆಯಾಗಿರುವ ಬಗ್ಗೆ ದೂರು ಬಂದ ನಂತರ ಲಿಂಕ್ ಕಳಿಸುವ ಸಮಯವನ್ನು ಬದಲಾಯಿಸಿದ ಮಂಡಳಿ ಒಂದು ದಿನ ಮುಂಚಿತವಾಗಿ ಬದಲು ಪರೀಕ್ಷೆ ದಿನದಂದೇ ಬೆಳಿಗ್ಗೆ 6 ಗಂಟೆಗೆ ಲಿಂಕ್‌ ಕಳಿಸುವ ವ್ಯವಸ್ಥೆ ಮಾಡಿದೆ. ಆದರೂ ಅವಧಿಗೆ ಮುನ್ನವೇ ಪ್ರಶ್ನೆಪತ್ರಿಕೆ ಬಹಿರಂಗವಾಗುವ ಘಟನೆಗಳು ನಿಂತಿಲ್ಲ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT