ಬುಧವಾರ, ನವೆಂಬರ್ 13, 2019
28 °C
ಪ್ರವಾಹಕ್ಕೆ 279 ಹೆಕ್ಟೇರ್ ಬೆಳೆನಾಶ: ಕಂಪ್ಲಿ ಸೇತುವೆ ಬಿರುಕು

ಕೊಪ್ಪಳ: ಮಳೆ, ನೆರೆಗೆ ₹ 20 ಕೋಟಿ ಹಾನಿ ಅಂದಾಜು

Published:
Updated:
Prajavani

ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದರೂ ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರು, ಸ್ಲೂಸ್ ಕಾಲುವೆ ಗೇಟ್ ದುರಂತ ಮತ್ತು ಈಚೆಗೆ ಸುರಿದ ಮಳೆಯಿಂದ ಮನೆಗಳಿಗೆ ಅಪಾರ ಹಾನಿಯಾಗಿದೆ.

ಆಗಸ್ಟ್‌ ತಿಂಗಳಲ್ಲಿನಲ್ಲಿ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಆನೆಗೊಂದಿ, ಮುನಿರಾಬಾದ್, ಕಾರಟಗಿ, ಗಂಗಾವತಿ ತಾಲ್ಲೂಕಿನ 200 ಹೆಕ್ಟೇರ್‌ ಬೆಳೆ ನಾಶವಾಗಿದೆ. ಅಲ್ಲದೆ ವಿರೂಪಾಪುರ ಗಡ್ಡೆಯಲ್ಲಿ ಸಿಲುಕಿದ್ದ 650 ಜನರ ರಕ್ಷಣೆ ಮಾಡಲಾಗಿದೆ. ಜಲಾಶಯದ ಸ್ಲೂಸ್ ಕಾಲುವೆ ಗೇಟ್ ಒಡೆದ ಪರಿಣಾಮ ಐತಿಹಾಸಿಕ ಪಂಪಾವನಕ್ಕೆ 80 ಲಕ್ಷ ವೆಚ್ಚದ ಹಾನಿಯಾಗಿದೆ. 150 ಮನೆಗಳಿಗೆ ನೀರು ನುಗ್ಗಿದೆ. 

145 ಜನರಿಗೆ ಅವಶ್ಯಕ ವಸ್ತು ಖರೀದಿಗೆ ಸ್ಥಳದಲ್ಲಿಯೇ ₹ 10 ಸಾವಿರದಂತೆ ₹ 14.50 ಲಕ್ಷ ಪರಿಹಾರಧನವನ್ನು ಆರ್‌ಟಿಜಿಎಸ್‌ ಮೂಲಕ ಸಂಬಂಧಸಿದವರ ಖಾತೆಗೆ ಜಮಾ ಮಾಡಲಾಗಿದೆ. ಇನ್ನುಳಿದ 5 ಮನೆಗಳು ಭಾಗಶಃ ಹಾನಿಯಾದ ಪರಿಣಾಮ ₹25 ಸಾವಿರದಂತೆ ಒಟ್ಟು ₹ 1.25 ಲಕ್ಷ ಪರಿಹಾರ ನೀಡಲಾಗಿದೆ.

ಈಚೆಗೆ ಸುರಿದ ಮಳೆಯಿಂದ ₹20 ಕೋಟಿ ಹಾನಿ ಅಂದಾಜಿಸಲಾಗಿದೆ. 100ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಜಿಲ್ಲೆಯಲ್ಲಿ ಒಟ್ಟು 477 ಮನೆಗಳು ಭಾಗಶಃ ಹಾನಿಯಾಗಿವೆ.

ಬಾರದ ಹಣ: ಈಚೆಗೆ ಸುರಿದ ಮಳೆಯಿಂದ ಅನೇಕ ಗ್ರಾಮಗಳಲ್ಲಿ ಭಾಗಶಃ ಮನೆಗಳಿಗೆ ಹಾನಿಯಾಗಿವೆ. ಅಲ್ಲದೆ ಈಚೆಗೆ ಯಲಮಗೇರಾದಲ್ಲಿ ಮನೆ ಕುಸಿದು 3 ಮಕ್ಕಳು ಮೃತರಾಗಿದ್ದನ್ನು ಸ್ಮರಿಸಬಹುದು. ಆ ಗ್ರಾಮದಲ್ಲಿಯೇ 10ಕ್ಕೂ ಮನೆಗಳು ಬೀಳುವ ಆತಂಕವಿದೆ. ಬಿದ್ದ ಮೇಲೆ ದುರಂತ ಸಂಭವಿಸಿ ಪರಿಹಾರ ನೀಡುವ ಬದಲು ಮಳೆಯಿಂದ ಹಾನಿಗೆ ಒಳಗಾದ ಮನೆಗಳನ್ನು ಸಮೀಕ್ಷೆ ಮಾಡಿ ಪರಿಹಾರಧನ ನೀಡಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಗ್ರಾಮೀಣ ಪ್ರದೇಶ ಮತ್ತು ತಾಂಡಾಗಳಲ್ಲಿ ಮಳೆಯಿಂದ ಛಾವಣಿ, ಶೀಟ್‌ಗಳು, ಗೋಡೆ ಬಿದ್ದು ಹೋಗಿವೆ. ಅವುಗಳ ಹಾನಿ ಅಂದಾಜು ಮಾಡಿ ಶೀಘ್ರ ಪರಿಹಾರ ಧನ ನೀಡಬೇಕು. ಬಡವರ ಮನೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕುಸಿದು ಬಿದ್ದಿದ್ದು, ಮನೆಕಟ್ಟಿಕೊಳ್ಳಲು ಆರ್ಥಿಕ ಸದೃಢತೆಯನ್ನು ಅವರು ಹೊಂದಿಲ್ಲ. ಕೂಲಿ, ನಾಲಿ ಮಾಡಿ ಜೀವಿಸುತ್ತಿರುವ ಅನೇಕ ಕುಟುಂಬಗಳು ಮನೆಗಳಿಲ್ಲದೇ ಗುಡಿ, ಗುಂಡಾರದಲ್ಲಿ ಮಲಗುವ ಪರಿಸ್ಥಿತಿ ಎದುರಿಸುವಂತಾಗಿದೆ.

ಮಳೆಯಿಂದ ಯಲಬುರ್ಗಾ, ಕುಷ್ಟಗಿ ತಾಲ್ಲೂಕಿನಲ್ಲಿ ಮನೆಗಳಿಗೆ ವ್ಯಾಪಕ ಹಾನಿಯಾಗಿದೆ. ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯಲ್ಲಿ ತೀವ್ರ ತೊಂದರೆಯಾಗಿದೆ. ಆದರೆ ಪರಿಹಾರ ಧನ ಮಾತ್ರ ಇನ್ನೂ ಯಾರಿಗೂ ಬಂದಿಲ್ಲ. ಸಂಭಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್‌ ಗ್ರಾಮಗಳಿಗೆ ಭೇಟಿ ನೀಡಿ ಶೀಘ್ರ ಪರಿಹಾಧನ ಕೊಡಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಪ್ರತಿಕ್ರಿಯೆ ನೀಡಿ ಈಚೆಗೆ ಬಂದ ನೆರೆಯಿಂದ ಹಾನಿಯಾಗಿದ್ದು, ಗಂಗಾವತಿ-ಕಂಪ್ಲಿ ಸೇತುವೆ ದುರಸ್ಥಿಗೆ ₹ 10 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಇನ್ನುಳಿದ ರಸ್ತೆ ದುರಸ್ಥಿಗೆ ₹ 3.98 ಕೋಟಿ, ಸಿಡಿ, ಸೇತುವೆ, ಚರಂಡಿ ದುರಸ್ಥಿಗೆ ₹ 1.36 ಕೋಟಿ, ಕುಡಿಯುವ ನೀರಿನ 2 ಕಾಮಗಾರಿಗೆ ₹ 45 ಲಕ್ಷ ಸೇರಿ ಮೂಲಸೌಕರ್ಯಕ್ಕಾಗಿ ₹ 6.64 ಕೋಟಿ ಅಂದಾಜಿಸಲಾಗಿದೆ ಎಂದು ಹೇಳಿದರು.

*
ಈಚೆಗೆ ಮಳೆಯಿಂದ ಜಿಲ್ಲೆಯ ಮನೆಗಳಿಗೆ ಹಾನಿಯಾಗಿದ್ದು, ಹಾನಿ ಮೌಲ್ಯ ಅಂದಾಜಿಸಲಾಗುವುದು. ಭಾಗಶಃ ಹಾನಿಯಾದ ಮನೆಗಳಿಗೆ ತಕ್ಷಣ ಪರಿಹಾರ ಧನ ನೀಡಲಾಗುವುದು.
-ಪಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ

ಪ್ರತಿಕ್ರಿಯಿಸಿ (+)