ಕೊಪ್ಪಳ/ಕುಕನೂರು: ಜಿಲ್ಲೆಯಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ ಮಂಗಳವಾರ ಬೆಳಿಗಿನ ಜಾವದಿಂದಲೇ ಸುರಿಯಿತು.
ಮುಂಗಾರು ಹಂಗಾಮಿನಲ್ಲಿ ಮಳೆಯ ನಿರೀಕ್ಷೆಯಲ್ಲಿರುವ ರೈತರಿಗೆ ಮಳೆ ಖುಷಿ ನೀಡಿದ್ದು, ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಅನುಕೂಲವಾಗಿದೆ. ನಿತ್ಯ ಮನೆ ಮನೆಗೆ ಪತ್ರಿಕೆಗಳನ್ನು ಹಂಚುವವರು, ಹೂವಿನ ವ್ಯಾಪಾರ ಮಾಡುವವರು, ಹಾಲು ಹಂಚುವವರು, ನೌಕರಿಗೆ ಹೋಗುವವರು ಮಳೆಯಲ್ಲಿ ನೆನೆದುಕೊಂಡು ಹೋಗಬೇಕಾಯಿತು. ನಗರಸಭೆಯ ಪೌರ ಕಾರ್ಮಿಕ ಸಿಬ್ಬಂದಿ ರೇನ್ ಕೋಟ್ ಧರಿಸಿ ನಗರದ ಕಸ ಸ್ವಚ್ಚಗೊಳಿಸಿದ ದೃಶ್ಯ ಕಂಡು ಬಂತು.
ದೇವಿಯ ವಾರವಾದ ಕಾರಣ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಲು ಬೆಳಿಗ್ಗೆಯೇ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಬಸ್ ನಿಲ್ದಾಣದಲ್ಲಿದ್ದರು. ಜಿಲ್ಲೆಯ ತಾವರಗೇರಾ, ಅಳವಂಡಿ, ಯಲಬುರ್ಗಾ, ಕನಕಗಿರಿ ಹಾಗೂ ಕುಷ್ಟಗಿಯಲ್ಲಿಯೂ ಜೋರು ಮಳೆಯಾಗಿದೆ. ಮಳೆಯ ಕಾರಣಕ್ಕಾಗಿ ಕನಕಗಿರಿಯಲ್ಲಿ ಮಂಗಳವಾರ ಶಾಲೆಗೆ ರಜೆ ಘೋಷಣೆ ಮಾಡಿದ್ದರಿಂದ ಅಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಳೆಯಲ್ಲಿಯೇ ವಸತಿ ನಿಲಯಕ್ಕೆ ವಾಪಸ್ ತೆರಳಿದರು.
ಮನೆಗಳಿಗೆ ಹಾನಿ: ಕುಕನೂರು ತಾಲ್ಲೂಕಿನ ಚಿಕೇನಕೊಪ್ಪದಲ್ಲಿ ಎರಡು, ಯರೇಹಂಚಿನಾಳದಲ್ಲಿ ಎರಡು, ತಳಬಾಳದಲ್ಲಿ ಒಂದು ಹಾಗೂ ನಿಂಗಾಪುರ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿಯಾಗಿವೆ.
ಇಂದು ವಿಶೇಷ ಸಭೆ: ಕೊಪ್ಪಳ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮುಂಗಾರು ಮಳೆಯಿಂದ ಆದ ತೊಂದರೆಗಳು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಬುಧವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.