ಸೋಮವಾರ, ಜುಲೈ 4, 2022
21 °C

ಗಂಗಾವತಿ: ಗಾಳಿ ಸಹಿತ ಮಳೆ, ಸಾವಿರಾರು ಎಕರೆ ಭತ್ತದ ಬೆಳೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನ ನಾನಾ ಗ್ರಾಮಗಳಲ್ಲಿ ಮಂಗಳವಾರ ಗಂಟೆಗೂ ಅಧಿಕ ಗಾಳಿ ಸಹಿತ ಮಳೆ ಬಿದ್ದಿದ್ದರಿಂದ ಸಾವಿರಾರು ಎಕರೆ ಭತ್ತದ ಬೆಳೆಯು ನೆಲಕ್ಕುರುಳಿದ್ದು, ರೈತರಿಗೆ ಅಪಾರ ನಷ್ಟವಾಗಿದೆ.

ವೆಂಕಟಗಿರಿ, ಮರಳಿ, ಗಂಗಾವತಿ ಸೇರಿದಂತೆ ನಾನಾ ಹೋಬಳಿಗಳಲ್ಲಿ ಒಟ್ಟು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗಿದ್ದು, ಬೆಳೆಯು ಕಟಾವು ಹಂತಕ್ಕೆ ತಲುಪಿತ್ತು.ಮಂಗಳವಾರ ಸುರಿದ ಗಾಳಿ ಸಹಿತ ಮಳೆಯಿಂದಾಗಿ ವಡ್ಡರಹಟ್ಟಿ, ಆನೆಗೊಂದಿ, ಹಣವಾಳ, ಢಣಾಪೂರ, ಗುಳದಾಳ, ಹೊಸ್ಕೇರಾ, ಮಲ್ಲಾಪೂರ, ಮರಳಿ, ಮುಸ್ಟೂರು ಸೇರಿದಂತೆ ನಾನಾ ಗ್ರಾಮಗಳಲ್ಲಿ ಸಾವಿರಾರು ಎಕರೆ ಬೆಳೆಯು ಸಂಪೂರ್ಣ ನೆಲಕ್ಕೆ ಬಿದ್ದು ಹಾಳಾಗಿ ಹೋಗಿದೆ. ಸತತ ಮೂರು ತಿಂಗಳು ಆರೈಕೆ ಮಾಡಿ ಬೆಳೆಸಿದ್ದ ಭತ್ತದ ಬೆಳೆಯು ಕಟಾವು ಹಂತದಲ್ಲಿ ಹಾನಿಗೀಡಾಗಿದೆ.

ಸಂಸದರು, ಶಾಸಕರ ಭೇಟಿ: ಸಂಸದರು, ಶಾಸಕರು ಮತ್ತು  ಕೃಷಿ ಇಲಾಖೆಯ ಅಧಿಕಾರಿಗಳು ವಡ್ಡರಹಟ್ಟಿ, ಬಸಾಪಟ್ಟಣ, ಹೊಸ್ಕೇರಾ, ದಾಸನಾಳ, ಆರ್ಹಾಳ್, ಗುಳದಾಳ, ಕೇಸರಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ಗಂಟೆಗೂ ಅಧಿಕ ಸುರಿದ ಮಳೆಯಿಂದಾಗಿ ಗಂಗಾವತಿ ತಾಲ್ಲೂಕಿನ ಭತ್ತದ ಗದ್ದೆಗಳಿಗೆ ಹಾನಿಯಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಸರಿಸುಮಾರು 70 ಸಾವಿರ ಎಕರೆ ಭತ್ತದ ಬೆಳೆ ಹಾನಿಯಾಗಿದೆ. ರೈತರಿಗೆ ಶೇ 80 ರಷ್ಟು ನಷ್ಟವಾಗಿದೆ ಎಂದು ಆಂದಾಜಿಸಲಾಗಿದೆ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನಕ್ಕೆ ತಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ಪ್ಯಾಕೇಜ್ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಲಾಗುವುದು’
ಎಂದರು.

ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನ್ ಶೇಖ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ತಹಶೀಲ್ದಾರ್‌ ಎಲ್.ಡಿ.ಚಂದ್ರಕಾಂತ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ವೀರಭದ್ರಪ್ಪ ನಾಯಕ, ಚನ್ನಪ್ಪ ಮಳಗಿ, ಯಮನಪ್ಪ ವಿಠಲಾಪೂರ, ದೇವಾನಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು