ಗಂಗಾವತಿ: ನಗರದಲ್ಲಿ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ, ಜಯನಗರ, ಕಿಲ್ಲಾ ಪ್ರದೇಶ, ಹಿರೇಜಂತಕಲ್, ಮಹೆಬೂಬನಗರ, ಅಂಗಡಿಸಂಗಣ್ಣ ಕ್ಯಾಂಪ್, ನೀಲಕಂಠೇಶ್ವರ ಕ್ಯಾಂಪ್, ಎಚ್.ಆರ್.ಎಸ್ ಕಾಲೊನಿ ಸೇರಿ ನಗರದ ಎಲ್ಲ ವಾರ್ಡ್‌ಗಳ ಕೊಳಚೆ ಪ್ರದೇಶದ ಮನೆಗಳಿಗೆ ನೀರುನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ನಗರದ 35 ವಾರ್ಡ್‌ಗಳಲ್ಲಿ ಚರಂಡಿ ನಿರ್ವಹಣೆಯಾಗದ ಕಾರಣ ಮಳೆನೀರು ಹರಿದು ಹೋಗಲು ಸಾಧ್ಯವಾಗದೇ ಜನವಸತಿ ಪ್ರದೇಶಗಳಿಗೆ ನುಗ್ಗಿದೆ.
ಕೆಲ ಕಾಲೊನಿಗಳಲ್ಲಿ ರಾತ್ರಿಯೇ ಮಳೆನೀರು ನುಗ್ಗಿದ್ದು, ನಿವಾಸಿಗಳು ನೀರನ್ನು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ನೀರು ನುಗ್ಗಿದ ಮನೆಗಳಲ್ಲಿ ದವಸ-ಧಾನ್ಯಗಳು ಹಾಳಾಗಿವೆ. ಗುರುವಾರ ಬೆಳಿಗ್ಗೆ ನಿವಾಸಿಗಳು ನಿತ್ಯಕರ್ಮ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಮಳೆನೀರಿನಿಂದ ಆವೃತವಾಗಿದ್ದ ರಸ್ತೆಗಳಿಂದ ತೊಂದರೆ ಅನುಭವಿಸುವಂತಾಯಿತು.
ಜಮೀನುಗಳಲ್ಲಿ ಸಣ್ಣ-ಪುಟ್ಟ ಕಾಲುವೆಗಳಿಂದ ಅಪಾರ ನೀರು ಒಂದಡೆ ಸಂಗ್ರಹವಾಗಿ ಹಳ್ಳದ ರೂಪದಲ್ಲಿ ಹರಿದು, ಭತ್ತನಾಟಿ ಜಮೀನುಗಳು ಜಲಾವೃತವಾಗಿವೆ. ಇದೇ ನೀರು ರಭಸವಾಗಿ ನಗರದತ್ತ ಹರಿದಿದ್ದರಿಂದ ದುರ್ಗಮ್ಮನಹಳ್ಳ ಸೇರಿ ತಗ್ಗು ಪ್ರದೇಶಗಳಲ್ಲಿದ್ದ ರಸ್ತೆಗಳು ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯಾಗಿದೆ.
ನೀರಿನ ರಭಸಕ್ಕೆ ವಿಲೇವಾರಿ ಆಗದ ತ್ಯಾಜ್ಯವೆಲ್ಲ ಒಂದಡೇ ಸೇರಿ ಚರಂಡಿಗಳಲ್ಲಿ ಕಟ್ಟಿಕೊಂಡರೆ, ಇನ್ನೊಂದಡೆ ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ಚರಂಡಿ ಸ್ವಚ್ಛಗೊಳಿಸುವಂತೆ ನಗರಸಭೆ ಸಿಬ್ಬಂದಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು.
ಮಾಜಿ ಶಾಸಕ ಭೇಟಿ: ಬುಧವಾರ ರಾತ್ರಿ ಸುರಿದ ಮಳೆಯಿಂದ ಭಗತ್‌ಸಿಂಗ್ ನಗರ, ಹಿರೆಜಂತಕಲ್ ಭಾಗಕ್ಕೆ ಗುರವಾರ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮನೆ ನೀರು ನುಗ್ಗಿದ ನಿವಾಸಿಗಳ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿದರು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಿ, ಚರಂಡಿಗಳು ಕಟ್ಟಿಕೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ’ ಎಂದು ದೂರವಾಣಿ ಕರೆ ಮೂಲಕ ನಗರಸಭೆ ಪೌರಾಯುಕ್ತರಿಗೆ ಮಾಹಿತಿ ನೀಡಿದರು.
ನಗರಸಭೆ ಸದಸ್ಯ ನೀಲಕಂಠ ಕಟ್ಟಿಮನಿ, ವಾಸುದೇವ ನವಲಿ, ರಾಘವೇಂದ್ರ ಶ್ರೇಷ್ಠಿ, ನವೀನ್ ಮಾಲಿಪಾಟೀಲ, ರಮೇಶ ಚೌಡ್ಕಿ, ರಾಚಪ್ಪ ಸಿದ್ದಾಪುರ, ಸಂಗಯ್ಯ ಸ್ವಾಮಿ, ಶ್ರೀನಿವಾಸ್ ದೂಳ ಸೇರಿದಂತೆ ವಾರ್ಡ್‌ನ ನಿವಾಸಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.