ಶನಿವಾರ, ಸೆಪ್ಟೆಂಬರ್ 26, 2020
26 °C
ಅವೈಜ್ಞಾನಿಕ ಚರಂಡಿ ನಿರ್ಮಾಣ: ಕುವೆಂಪು ನಗರದಲ್ಲಿ ಸಮಸ್ಯೆ ಹೆಚ್ಚು

ಮಳೆ ನೀರು: ಸಂಚಾರಕ್ಕೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳದಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಹಾಲವರ್ತಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು

ಕೊಪ್ಪಳ: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಮಳೆಗೆ ಹೊರವಲಯದ ಕುವೆಂಪು ನಗರದ ಮನೆಗಳಿಗೆ ನೀರುನುಗ್ಗಿ ನಿವಾಸಿಗಳು ತೊಂದರೆಪಡುವಂತೆ ಆಗಿದೆ.

ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಮೇಲಿಂದ ಮೇಲೆ ಇಲ್ಲಿ ಸಮಸ್ಯೆ ಆಗುತ್ತಿದೆ. ಹೆಚ್ಚಾಗಿ ಬಡವರು, ಕೂಲಿಕಾರ್ಮಿಕರೇ ವಾಸವಾಗಿರುವ ಈ ಬಡಾವಣೆಯಲ್ಲಿ ಅಲ್ಪಮಳೆ ಬಂದರೂ ಆತಂಕದಿಂದ ದಿನದೂಡುವಂತೆ ಆಗಿದೆ. ಈ ಕುರಿತು ಸ್ಥಳೀಯ ಶಾಸಕರು ಮತ್ತು ನಗರಸಭೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿ, ಅತಿಕ್ರಮಣವನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಿಕೊಡಬೇಕು. ಕುವೆಂಪು ನಗರದ ದುಃಸ್ಥಿತಿಯನ್ನು ಬರೀ ಪರಿಶೀಲಿಸಿ ಹೋದರೆ ಯಾವುದೇ ಪರಿಹಾರ ದೊರಕುವುದಿಲ್ಲ.

ಮಂಗಳವಾರ ಸುರಿದ ಭಾರಿ ಮಳೆಗೆ ಹಾಲವರ್ತಿ ರಸ್ತೆಯ ಜಿಲ್ಲಾ ಕಾರಾಗೃಹದ ಹಿಂದುಗಡೆ ಮೂರನೇ ವಾರ್ಡಿನಲ್ಲಿ ಸತತ ಮೂರು ತಾಸು ರಸ್ತೆ ಸಂಚಾರ ಬಂದ್ ಆಗಿತ್ತು. ಹೊಳೆಯಂತೆ ಹರಿದ ನೀರು ಮುಂದೆ ಹೋಗದೆ ಮನೆಗಳತ್ತ ನುಗ್ಗುತ್ತಿತ್ತು. ಇದು ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಲೇ ಆಗಿದೆ ಎಂದು ನಿವಾಸಿಗಳು ಆರೋಪಿಸಿದರು.

ನಗರಸಭೆಯ ಅಧಿಕಾರಿಗಳಿಗೆ ಈ ಸಮಸ್ಯೆ ಬಗ್ಗೆ ಅರಿವು ಇದೆ. ಈ ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬಡಾವಣೆಯಲ್ಲಿ ಅಗೆದಿರುವ ದೊಡ್ಡ ಚರಂಡಿ ಮುಚ್ಚಿಲ್ಲ. ರಸ್ತೆ ಮತ್ತು ನೀರು ಗೊತ್ತಾಗದೆ ಜನ ಬೀಳುವ ಸಂಭವ ಕೂಡಾ ಇದೆ.

'ನೀರು ಸರಾಗವಾಗಿ ಹೋಗಲು ಚರಂಡಿ ನಿರ್ಮಾಣ ಮಾಡುತ್ತಾರೆ. ಆದರೆ ಚರಂಡಿಯ ತ್ಯಾಜ್ಯ ನೀರು ರಸ್ತೆಯ ಮೇಲೆ ಬರುತ್ತದೆ. ಪಕ್ಕದಲ್ಲಿಯೇ ವಿದ್ಯುತ್ ಕಂಬಗಳು ಇವೆ. ಅವುಗಳು ಜನರ ಮೇಲೆ ಬಿದ್ದರೆ ಯಾರು ಹೊಣೆ' ಎಂದು ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಪ್ರಶ್ನಿಸುತ್ತಾರೆ.

ಒಮ್ಮೆ ಮಳೆ ಬಂದರೆ ಸಾಕು  ಒಂದು ಕಿಲೋಮೀಟರ್ ನೀರು ನಿಂತು ಮೂರು ತಾಸು ರಸ್ತೆ ಬಂದ್ ಆಗುತ್ತದೆ. ನೀರು ಎಲ್ಲ ಹರಿದು ಹೋದ ನಂತರ ಸಂಚಾರ ಆರಂಭವಾಗುತ್ತದೆ. ಆದ್ದರಿಂದ ನಗರಸಭೆಯವರು ಇತ್ತ ಕಡೆ ಗಮನ ಹರಿಸಿ ಶೀಘ್ರದಲ್ಲಿ ಕಾಮಗಾರಿ ಕೈಗೊಂಡು ನಿವಾಸಿಗಳಲ್ಲಿ ನೆಮ್ಮದಿ ಮೂಡಿಸಬೇಕು ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.