ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಕ್ತರಾಂಪುರ ಸರ್ಕಾರಿ ಶಾಲೆಯ ಮೆಚ್ಚಿನ ಶಿಕ್ಷಕ ರಾಜು ರಾಠೋಡ

ನಾರಾಯಣರಾವ್ ಕುಲಕರ್ಣಿ
Published : 5 ಸೆಪ್ಟೆಂಬರ್ 2024, 7:21 IST
Last Updated : 5 ಸೆಪ್ಟೆಂಬರ್ 2024, 7:21 IST
ಫಾಲೋ ಮಾಡಿ
Comments

ಕುಷ್ಟಗಿ: ಮಧ್ಯಾಹ್ನ ಶಾಲೆಯ ಗಂಟೆ ಬಾರಿಸುತ್ತಲೆ ಮಕ್ಕಳು ಊಟದ ತಟ್ಟೆ ತರಲು ಮನೆಗೆ ಓಡುತ್ತಿದ್ದರು. ಈಗ ಅಂತಹ ಸ್ಥಿತಿ ಇಲ್ಲ. ವರ್ಗದ ಕೊಠಡಿಯಲ್ಲಿ 1-5ನೇ ತರಗತಿಯ ಎಲ್ಲ ಮಕ್ಕಳಿಗೂ ಪ್ರತ್ಯೇಕ ಸ್ಮಾರ್ಟ್ ಕ್ಲಾಸ್ ಭಾಗ್ಯ. ತಮ್ಮೂರಿನ ಶಾಲೆಯ ಬಗ್ಗೆ ಜನರಿಗೆ ಎಲ್ಲಿಲ್ಲದ ಅಭಿಮಾನ. ಅಷ್ಟೇ ಅಲ್ಲ ಶಾಲೆಯನ್ನು ಮಾದರಿಯನ್ನಾಗಿಸಲು ಟೊಂಕಕಟ್ಟಿರುವ ಸಮುದಾಯ.

ಹೌದು, ತಾಲ್ಲೂಕಿನ ಚಿಕ್ಕ ಗ್ರಾಮ ಮುಕ್ತರಾಂಪುರದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡುಬರುವ ಚಿತ್ರಣವಿದು. ಇದು ಏಕೋಪಾಧ್ಯಾಯ ಶಾಲೆಯಾಗಿದ್ದು, ಶಿಕ್ಷಕ ರಾಜು ರಾಠೋಡ ಕಾಯಂ ಶಿಕ್ಷಕರಾಗಿದ್ದಾರೆ. ಪ್ರಸ್ತುತ ಇಬ್ಬರು ಅತಿಥಿ ಶಿಕ್ಷಕರು ನಿಯೋಜನೆಗೊಂಡಿದ್ದಾರೆ. 72 ಮಕ್ಕಳು ಅಭ್ಯಸಿಸುತ್ತಿದ್ದು, ಶಿಕ್ಷಕ ರಾಜು ಅವರ ಪ್ರಯತ್ನದಿಂದಾಗಿ ಸರ್ಕಾರಿ ಶಾಲೆಯಂದರೆ ಮೂಗು ಮುರಿಯುವ ಕಾಲದಲ್ಲಿ ಇತರೆ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಈ ಶಾಲೆ ಗಮನಸೆಳೆಯುತ್ತಿದೆ. ಇಲ್ಲಿಯ ಮಕ್ಕಳ ಕಲಿಕಾ ಆಸಕ್ತಿ ಮತ್ತು ಹರಿದು ಬರುವ ಜನರ ಸಹಕಾರ ನೋಡಿದರೆ ಶಿಕ್ಷಕರಾದವರು ಮನಸ್ಸು ಮಾಡಿದರೆ ಶಾಲೆಯ ಬಾಹ್ಯ ಮತ್ತು ಆಂತರಿಕ ವ್ಯವಸ್ಥೆಯನ್ನು ಹೇಗೆ ಅಭಿವೃದ್ಧಿಪಡಿಸಹುದು ಎಂಬುದಕ್ಕೆ ಮುಕ್ತರಾಂಪುರ ಶಾಲೆ ಒಂದು ಉದಾಹರಣೆ.

ಜನ ಸರ್ಕಾರಿ ಶಾಲೆಯಿಂದ ದೂರ ಸರಿಯುತ್ತಿದ್ದುದನ್ನು ಗಮನಿಸಿದ ಶಿಕ್ಷಣ ಇಲಾಖೆ ಸಮುದಾಯದತ್ತ ಶಾಲೆ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ರೂಪಿಸಿದೆ. ಆದರೆ ಇಲ್ಲಿ ಸಮುದಾಯವೇ ಶಾಲೆಯತ್ತ ಬರುವಂತೆ ಮಾಡುವಲ್ಲಿ ಶಿಕ್ಷಕ ರಾಜು ಅವರ ಪರಿಶ್ರಮದ ಜೊತೆಗೆ ಮುತುವರ್ಜಿ ಎದ್ದು ಕಾಣುತ್ತಿದೆ.

ವಸತಿ ಶಾಲೆಗಳಿಗೆ ಆಯ್ಕೆಯಾಗಲಿ ಎಂಬ ಕಾರಣಕ್ಕೆ ಮಕ್ಕಳು ಕೋಚಿಂಗ್ ಕೇಂದ್ರ, ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದರು. ಆದರೀಗ ಊರಿನ ಎಲ್ಲ ಮಕ್ಕಳೂ ಇದೇ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. 4 ಮತ್ತು 5ನೇ ತರಗತಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್‌ ವ್ಯವಸ್ಥೆ ಇದೆ/ ಜನರೇ ನೀಡಿದ ₹1.30 ಲಕ್ಷ ದೇಣಿಗೆಯಲ್ಲಿ ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ಪರಿಕರಗಳನ್ನು ಖರೀದಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಮಕ್ಕಳಿಗೆ ತಾಂತ್ರಿಕ ವ್ಯವಸ್ಥೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ, ಗ್ರಹಿಕಾ ಶಕ್ತಿ ಹೆಚ್ಚುತ್ತಿದೆ  ಎನ್ನುತ್ತಾರೆ ಶಿಕ್ಷಕ ರಾಜು ರಾಠೋಡ.

ಶಾಲೆ ಆವರಣಗೋಡೆ, ಒಳ ಗೋಡೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗುವ ರೀತಿಯಲ್ಲಿ ಕಲಾತ್ಮಕ ಗೋಡೆ ಬರಹ ಚಿತ್ರಗಳು ಗಮನಸೆಳೆಯುವಂತಿವೆ.

ಕುಷ್ಟಗಿ ತಾಲ್ಲೂಕು ಮುಕ್ತರಾಂಪುರ ಶಾಲೆಯ ಒಳಗಿನ ನೋಟ

ಕುಷ್ಟಗಿ ತಾಲ್ಲೂಕು ಮುಕ್ತರಾಂಪುರ ಶಾಲೆಯ ಒಳಗಿನ ನೋಟ


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT