ಕೊಪ್ಪಳ: ರಾಘವೇಂದ್ರ ಸ್ವಾಮಿಗಳ ಆರಾಧನೆಯ ಕೊನೆಯ ದಿನವಾದ ಶನಿವಾರ ಉತ್ತರಾರಾಧನೆಯಂದು ಭವ್ಯ ರಥೋತ್ಸವ ನಡೆಯಿತು. ಸಾವಿರಾರು ಜನ ಈ ಸಂಭ್ರಮದ ಕ್ಷಣಗಳಿಗೆ ಭಾಗಿಯಾದರು.
ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿರುವ ರಾಯರ ಮಠದಲ್ಲಿ ಮೂರು ದಿನಗಳಿಂದ ನಿತ್ಯವೂ ಕಾರ್ಯಕ್ರಮಗಳು ನಡೆಯುತ್ತಿವೆ. ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥ ಹಾಗೂ ಪ್ರಸಾದ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.
ಪೂರ್ವಾರಾಧನೆ ಮತ್ತು ಮಧ್ಯಾರಾಧನೆ ದಿನಗಳಂದು ರಾತ್ರಿಯೂ ರಥೋತ್ಸವ ನಡೆದಿತ್ತು. ಶನಿವಾರ ಮಧ್ಯಾಹ್ನ ನಡೆದ ಭವ್ಯ ರಥೋತ್ಸವದ ವೇಳೆ ಭಕ್ತರಿಂದ ಭಾರಿ ಸಂಭ್ರಮ ಕಂಡು ಬಂದಿತು. ತರಹೇವಾರಿ ಹೂಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದ ರಥ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿ ಸಾಗುತ್ತಿದ್ದರೆ ಭಕ್ತರು ರಾಯರ ಹಾಡುಗಳನ್ನು ಹಾಡಿ ಭಕ್ತಿ ಮೆರೆದರು.
ಸಂಜೆ ಅನನ್ಯಾ ದೇಸಾಯಿ ಅವರಿಂದ ಭಕ್ತಿ ಸಂಗೀತ, ಸೇವಾ ಪುರಸ್ಕಾರ, ವೆಂಕಟನರಸಿಂಹಾಚಾರ್ಯ ಗುಡೆಬೆಲ್ಲೂರು ಅವರಿಂದ ಪ್ರವಚನ ಕಾರ್ಯಕ್ರಮಗಳು ನಡೆದವು. ಮೊದಲ ಎರಡು ದಿನಗಳ ಹಾಗೆಯೇ ಆರಾಧನೆಯ ಕೊನೆಯ ದಿನವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿ ಅಲಂಕೃತ ವೃಂದಾವನದ ದರ್ಶನ ಪಡೆದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ವೃಂದಾವನದ ಎದುರು ಇರುವ ಹನುಮಂತ ದೇವರ ಮೂರ್ತಿಯನ್ನು ತರಹೇವಾರಿ ಹೂಗಳಿಂದ ಅಲಂಕರಿಸಲಾಗಿತ್ತು.
Cut-off box - ಆದಿತ್ಯ ಯಶಸ್ಸಿಗೆ ರಾಯರ ಮಠದಲ್ಲಿ ಪೂಜೆ ಕೊಪ್ಪಳ: ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕೆ ಇಸ್ರೊ ಉಡ್ಡಯನ ಮಾಡಿರುವ ಆದಿತ್ಯ ಎಲ್ -1 ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಆಗಲಿ ಎಂದು ಪ್ರಾರ್ಥಿಸಿ ಇಲ್ಲಿನ ರಾಯರ ಮಠದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ರಾಯರ ಆರಾಧನಾ ಮಹೋತ್ಸವದ ಕೊನೆಯ ದಿನದ ಉತ್ತರರಾಧನೆಯ ರಥೋತ್ಸವಕ್ಕೂ ಮೊದಲು ಪೂಜೆ ಸಲ್ಲಿಸಲಾಯಿತು. ಆದಿತ್ಯ ಉಡ್ಡಯನದ ಚಿತ್ರವನ್ನು ರಥದ ಮುಂಭಾಗದಲ್ಲಿ ಇರಿಸಿ ಹೋಮ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು. ಭಕ್ತರು ಆ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ಫೋಟೊ ತೆಗೆಯಿಸಿಕೊಂಡ ಚಿತ್ರಣವೂ ಕಂಡು ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.