ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಮಹತ್ವದ ಖಾತೆ ಪ್ರಾಮಾಣಿಕವಾಗಿ ನಿಭಾಯಿಸುವ ಭರವಸೆ

ಯಾರ ಲಾಭಿಯೂ ಇಲ್ಲ, ಪ್ರಾದೇಶಿಕ ನ್ಯಾಯಕ್ಕೆ ಸಂದ ಜಯ: ಸಚಿವ ಹಾಲಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಬಿಜೆಪಿ ನಮ್ಮ ಮೇಲೆ ಭರವಸೆ ಇಟ್ಟು ಮಹತ್ವದ ಖಾತೆ ನೀಡಿದೆ. ಅದರಲ್ಲಿ ಯಾರದೇ ಲಾಭಿ ಇಲ್ಲ. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸ್ಥಾನ ಸಿಕ್ಕಿದೆ’ ಎಂದು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಸ್ಪಷ್ಟಪಡಿಸಿದರು.

ಸಚಿವರಾದ ನಂತರ ಮೊದಲ ಬಾರಿಗೆ ಶನಿವಾರ ಜಿಲ್ಲೆಗೆ ಬಂದು ಗವಿಮಠಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಿಂದುಳಿದ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂಬುವುದು ವರಿಷ್ಠರ ತೀರ್ಮಾನವಾಗಿತ್ತು. ಇದಕ್ಕೆ ಬಿ.ಎಲ್‌.ಸಂತೋಷ್‌ ಕಾರಣ ಎಂದು ಹೇಳುವುದು ಸರಿಯಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟು ಖಾತೆ ನೀಡಿದ್ದಾರೆ. ಅದನ್ನು ಸಮರ್ಥ ಮತ್ತು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಭರವಸೆ ನೀಡಿದರು.

‘ನನ್ನ ಖಾತೆ ಬಗ್ಗೆ ನಾನು ಹಗುರವಾಗಿ ತಿಳಿದುಕೊಂಡಿಲ್ಲ. ಅದರ ಅರಿವು ಇದೆ. ಉತ್ತಮ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಜವಾಬ್ದಾರಿ ನೀಡಿದವರಿಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕಿದೆ. ಇದಕ್ಕೆ ಗವಿಸಿದ್ದೇಶ್ವನ ಆಶೀರ್ವಾದ ಇದೆ' ಎಂದರು.

'ನಾನು ಯಾವತ್ತೂ ಸಚಿವ ಆಗ್ತಿನಿ ಎಂದು ಹೇಳಿರಲಿಲ್ಲ. ಬೆಳಗಾವಿ, ಬೆಂಗಳೂರಿಗೆ ಪ್ರಾತಿನಿಧ್ಯ ಕಡಿಮೆ ಮಾಡಲಾಗಿದೆ. ಇದರಿಂದ ನಮ್ಮ ಜಿಲ್ಲೆಗೆ ಅವಕಾಶ ಸಿಕ್ಕಿದೆ. ಮುಂದೆ ಉಳಿದ ಎಲ್ಲ ಜಿಲ್ಲೆಗೂ ಅವಕಾಶ ಸಿಗುವ ಭರವಸೆ ಇದೆ' ಎಂದರು.

ಸಚಿವ ಆನಂದ್ ಸಿಂಗ್ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು, 'ಈ ಕುರಿತು ನಾನು ಏನೂ ಹೇಳೊದಿಲ್ಲ. ಜನರು ನಮ್ಮನ್ನು ಕ್ಷೇತ್ರದ ಕೆಲಸ ಮಾಡಲು ಆಯ್ಕೆ ಮಾಡಿರುತ್ತಾರೆ. ಪಕ್ಷ ನೀಡಿದ ಜವಾಬ್ದಾರಿ ನಾವು ನಿರ್ವಹಿಸಬೇಕು ಅಷ್ಟೇ. ಅವರವರ ವಿಚಾರ ಅವರಿಗೆ ಬಿಟ್ಟಿದ್ದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಮುಂದೆ ಸಿಎಂ ಬೊಮ್ಮಾಯಿ ನೇತೃತ್ವ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲೇ ಚುನಾವಣೆ ನಡೆಯುತ್ತೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ನನಗೆ ಶಕ್ತಿ ತುಂಬುವ, ಆಶೀರ್ವಾದ ಮಾಡಿದವರನ್ನು ದೆಹಲಿಗೆ ಹೋಗಿ ಭೇಟಿ ಮಾಡಿದ್ದೇನೆ' ಇದರಲ್ಲಿ ಯಾವುದೇ ತಪ್ಪಿಲ್ಲ' ಎಂದರು.

'ಸಂಸದೆ ಸುಮಲತಾ ಅವರು ಲೋಕಸಭೆಯಲ್ಲಿ ಕೆಆರ್‌ಎಸ್ ಜಲಾಶಯ, ಅಕ್ರಮ ಗಣಿಗಾರಿಕೆ ಕುರಿತು ಗಮನ ಸೆಳೆದಿದ್ದಾರೆ. ಸಮಯ ಬಂದರೆ ಅಲ್ಲಿಯೂ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದರು.

ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೇಸಗೂರ್, ಮುಖಂಡರಾದ ಸಿ.ವಿ.ಚಂದ್ರಶೇಖರ, ಬಸವರಾಜ ಗೌರಾ, ಗವಿಸಿದ್ಧಪ್ಪ ಕರಡಿ, ಕುಕನೂರು, ಯಲಬುರ್ಗಾ ತಾಲ್ಲೂಕಿನ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.