ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ಹಾನಿಯಾದ ರಸ್ತೆ ದುರಸ್ತಿಪಡಿಸಿ

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ: ಸಚಿವ ಪಾಟೀಲ ಸೂಚನೆ
Last Updated 4 ಆಗಸ್ಟ್ 2022, 5:29 IST
ಅಕ್ಷರ ಗಾತ್ರ

ಕೊಪ್ಪಳ: ‘ಮಳೆಯಿಂದಾಗಿ ಜಿಲ್ಲೆಯಲ್ಲಿ ಹಾನಿಯಾದ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು. ಬಾಕಿ ಉಳಿದ ಎಲ್ಲಾ ಕಾಮಗಾರಿಗಳು ಆಯಾ ಶಾಸಕರ ಸಮ್ಮುಖದಲ್ಲಿ ಆಗಸ್ಟ್‌ 15ರ ಒಳಗೆ ಆರಂಭಗೊಳ್ಳಬೇಕು’ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ‘ಸಾರ್ವಜನಿಕರಿಗೆ ಯೋಗ್ಯ ಸೇವೆ ಒದಗಿಸುವುದು ಇಲಾಖೆಯ ಕರ್ತವ್ಯ. ಅದರಂತೆ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಹಾನಿಗೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಕೈಗೊಂಡು, ಸಂತ್ರಸ್ತರಿಗೆ ನೆರವಾಗಬೇಕು’ ಎಂದರು.

‘ಜಿಲ್ಲೆಗೆ ನಮ್ಮಇಲಾಖೆಯಿಂದ ಒಟ್ಟು ₹123.05 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕನಕಗಿರಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಮೊತ್ತ ₹30 ಕೋಟಿ ಇರುವುದರಿಂದ ಸಚಿವ ಸಂಪುಟದ ಅನುಮೋದನೆ ಅಗತ್ಯವಿದೆ. ಉಳಿದ ತಾಲ್ಲೂಕುಗಳ ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಹಾಗೂ ಆಡಳಿತಾತ್ಮಕ ಅನುಮೋದನೆ ದೊರೆತ ನಂತರ ವಿಳಂಬಕ್ಕೆ ಅವಕಾಶವಿಲ್ಲದಂತೆ ಕೆಲಸ ಆರಂಭಿಸಬೇಕು’ ಎಂದರು.

‘ಸರ್ಕಾರ ಯಾವುದೇ ಗುತ್ತಿಗೆದಾರರ ಅಭಿವೃದ್ಧಿಗೆ ಅಥವಾ ಅವರ ಹಿತಾಸಕ್ತಿ ಕಾಪಾಡಲು ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಇದನ್ನು ಅರಿತುಕೊಂಡು ಯೋಗ್ಯ ಗುತ್ತಿಗೆದಾರರಿಗೆ ಕಾಮಗಾರಿ ಹಂಚಿಕೆ ಮಾಡಬೇಕು. ನಿಗದಿತ ಅವಧಿಯಲ್ಲಿ ಹಾಗೂ ನಿಗದಿಪಡಿಸಿದ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸುವ, ಬದ್ಧತೆಯಿರುವ ಗುತ್ತಿಗೆದಾರರಿಗೆ ಕಾಮಗಾರಿ ಹಂಚಿಕೆ ಮಾಡಿ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಮಾತನಾಡಿ ‘ಗಿಣಿಗೇರ-ಕಾಸನಕಂಡಿ ಸಂಪರ್ಕ ರಸ್ತೆ ಹಾಳಾಗಿದ್ದು, ರಸ್ತೆ ಸರಿ ಮಾಡುವಂತೆ ಗ್ರಾಮಸ್ಥರು ಪದೇ ಪದೇ ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ದರಿಂದ ಬೇಗ ರಸ್ತೆ ದುರಸ್ತಿ ಮಾಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ ‘ಜಿಲ್ಲೆಯ ಯಾವುದೇ ತಾಲ್ಲೂಕಿನ ಸಂಪರ್ಕ ರಸ್ತೆಗಳು ಹಾಳಾದರೂ ಅದು ರಾಜ್ಯದ ಅಭಿವೃದ್ಧಿಗೆ ಪೆಟ್ಟು ನೀಡುತ್ತದೆ. ಆದ್ದರಿಂದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಂಪರ್ಕ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು. ದುರಸ್ತಿಗೊಳಿಸಿ ಗಿಣಗೇರ ರೈಲ್ವೆ ನಿಲ್ದಾಣ ಹತ್ತಿರದ ರಸ್ತೆ ದುರಸ್ತಿಗೆ ಕೆಕೆಆರ್‌ಡಿಬಿ ಅನುದಾನ ನೀಡಿದ್ದು, ಕಾಮಗಾರಿ ನಡೆಸುತ್ತಿರುವ ಏಜೆನ್ಸಿ ಪರಿಶೀಲಿಸಿ, ಮುಂದಿನ ಆದೇಶದವರೆಗೆ ಕಾಮಗಾರಿ ಸ್ಥಗಿತ ಮಾಡಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಶಾಸಕರಾದ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಅಂಜನಾದ್ರಿ ಅಭಿವೃದ್ಧಿಗೆ ಕೆಲಸ ಮಾಡಿ’

ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗೆ ಪೂರಕವಾಗಿ ರಸ್ತೆಗಳ ವಿಸ್ತರಣೆ, ಭೂಸ್ವಾಧೀನ ಪ್ರಕ್ರಿಯೆ ಮುಂತಾದ ವಿವರಗಳ ಕುರಿತು ಮುಖ್ಯಮಂತ್ರಿಗಳು ಸ್ವ ಆಸಕ್ತಿಯಿಂದ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದಾರೆ. ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿರುವ ಈ ವಿಷಯದ ಕುರಿತು ಅಧಿಕಾರಿಗಳು ಕೂಡ ಅಷ್ಟೇ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಪಾಟೀಲ ಸೂಚಿಸಿದರು.

ಹೇಮಲತಾ ನಾಯಕ ಅಸಮಾಧಾನ

ಕೊಪ್ಪಳ: ತಾಲ್ಲೂಕಿನ ಸಿಂಧೋಗಿಯಿಂದ ಅಳವಂಡಿ ಸಂಪರ್ಕಿಸುವ ಅಳವಂಡಿ-ಮುಂಡರಗಿ ರಾಜ್ಯ ಹೆದ್ದಾರಿ ತೀರಾ ಹದಗೆಟ್ಟಿರುವ ಬಗ್ಗೆ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಈಗಾಗಲೇ ಈ ರಾಜ್ಯ ಹೆದ್ದಾರಿ ದುರಸ್ತಿಗೆ ಬಿಡುಗಡೆಯಾದ ₹10 ಕೋಟಿ ಅನುದಾನದಲ್ಲಿ ಕಾಮಗಾರಿ ಬೇಗನೆ ಪೂರ್ಣಗೊಳಿಸಿ. ಇನ್ನಷ್ಟು ಅನುದಾನ ಬೇಕಾದರೆ ಪ್ರಸ್ತಾವ ಸಲ್ಲಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT