ಮಂಗಳವಾರ, ಅಕ್ಟೋಬರ್ 27, 2020
19 °C
ಜಿಲ್ಲಾಡಳಿತ ಭವನದ ಎದುರು ಸಿಪಿಎಂ ಕಾರ್ಯಕರ್ತರಿಂದ ಪ್ರತಿಭಟನೆ

ತಿದ್ದುಪಡಿ ಕಾಯ್ದೆಗಳ ಹಿಂಪಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕಾರ್ಮಿಕ ತಿದ್ದುಪಡಿ ಕಾಯ್ದೆಗಳು ಸೇರಿದಂತೆ ಎಲ್ಲ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಹಾಗೂ ಬೆಂಬಲ) ಸುಗ್ರಿವಾಜ್ಞೆ 2020, ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕುರಿತ ರೈತ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದ ಸುಗ್ರಿವಾಜ್ಞೆ 2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಸುಗ್ರಿವಾಜ್ಞೆ-2020, ವಿದ್ಯುತ್ ಕಾಯ್ದೆ-2020 ಮತ್ತು ಕೈಗಾರಿಕೆಗಳ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಅನುಕೂಲ ಮಾಡುವ ಪ್ರಮುಖ ಕಾರ್ಮಿಕ ತಿದ್ದುಪಡಿ ಕಾಯ್ದೆಗಳು ಸೇರಿದಂತೆ ಕಾಯ್ದೆಗಳ ತಿದ್ದುಪಡಿ ಸಂಬಂಧ ಎಲ್ಲ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರಬೇಕಾಗಿರುವ ಜಿ.ಎಸ್.ಟಿ ಬಾಕಿ, ಬಜೆಟ್ ಅನುದಾನದ ಬಾಕಿ, ಬರ ಹಾಗೂ ಅತಿವೃಷ್ಟಿ ಪರಿಹಾರ, ಕೋವಿಡ್ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕೋವಿಡ್-19ರ ಪರಿಹಾರವಾಗಿ ಮುಂದಿನ ಆರು ತಿಂಗಳ ಕಾಲ ಎಲ್ಲ ಆದಾಯ ತೆರಿಗೆ ವ್ಯಾಪ್ತಿ ಕೆಳಗೆ ಬಾರದಿರುವ ಕುಟುಂಬಗಳಿಗೆ ತಲಾ ಮಾಸಿಕ ₹‎ 7,500 ಹಾಗೂ ತಲಾ ವ್ಯಕ್ತಿಗೆ 10 ಕೆ.ಜಿ ಸಮಗ್ರ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ನಗರ ಪ್ರದೇಶಕ್ಕೂ ಮತ್ತು ಕನಿಷ್ಟ 200 ದಿನಗಳಿಗೆ ವಿಸ್ತರಿಸಬೇಕು. ಕೂಲಿ ಹೆಚ್ಚಿಸಬೇಕು. ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಘೋಷಿಸಬೇಕು ಎಂದು ಕೃಷಿ ಕೂಲಿಕಾರರು ಒತ್ತಾಯಿಸಿದರು.

ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಹಕ್ಕುಗಳ ಉಳುವಿಗಾಗಿ ಶಾಂತಿಯುತ ರಾಜಕೀಯ ಚಳವಳಿಗಳನ್ನು ಕ್ರಿಮಿನಲ್ ಅಪರಾಧ ಎಂದು ಬಿಂಬಿಸುವ ಸಂವಿಧಾನ ವಿರೋಧಿ ಕ್ರಮ ತಡೆಯುಬೇಕು. ಅದಾಗಲೇ ಇಂತಹ ಸುಳ್ಳು ದೂರುಗಳ ಆಧಾರದಲ್ಲಿ ಹೂಡಲಾದ ಮೊಕದ್ದಮೆಗಳನ್ನು ಬೇಷರತ್ತಾಗಿ ವಾಪಾಸು ಪಡೆಯಬೇಕು. ಅದೇ ರೀತಿ ಇದರಂತೆ ಸುಳ್ಳು ಮೊಕದ್ದಮೆ ಆಧಾರದಲ್ಲಿ ಜೈಲಿಗೆ ತಳ್ಳಲಾದವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಸಿಪಿಐಎಂ ಮುಖಂಡರು ಆಗ್ರಹಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ, ಕಾರ್ಯದರ್ಶಿ ಮಂಡಳಿ ಸದಸ್ಯ ನಿರುಪಾದಿ ಬೆಣಕಲ್, ಖಾಸಿಂಸಾಬ ಸರದಾರ, ಸುಂಕಪ್ಪ ಗದಗ, ಪಕ್ಷದ ಸದಸ್ಯರಾದ ಹುಸೇನಪ್ಪ ಕೆ., ಹುಲಗಪ್ಪ ಗೋಕಾವಿ, ಶ್ರೀನಿವಾಸ, ಶಿವು ಬೆಣಕಲ್, ಮರಿನಾಗಪ್ಪ, ಸೈಯದ್ ಗುಲಾಮ್ ಹುಸೇನ್, ಬಸವರಾಜ ಗೋನಾಳ, ಫಕೀರಮ್ಮ ಮಿರಗನತಂಡಿ, ಅಮರವ್ವ ಗದಗ ಹಾಗೂ ಇತರರು ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು