ಕೊಪ್ಪಳ ನಗರಸಭೆ ಮೀಸಲಾತಿ ಬದಲು: ನಗರಾಭಿವೃದ್ಧಿ ಅಧೀನ ಕಾರ್ಯದರ್ಶಿ ವಿರುದ್ಧ ದೂರು?

7

ಕೊಪ್ಪಳ ನಗರಸಭೆ ಮೀಸಲಾತಿ ಬದಲು: ನಗರಾಭಿವೃದ್ಧಿ ಅಧೀನ ಕಾರ್ಯದರ್ಶಿ ವಿರುದ್ಧ ದೂರು?

Published:
Updated:

ಕೊಪ್ಪಳ: ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಇಲ್ಲಿನ ನಗರಸಭೆ ಮೀಸಲಾತಿಯನ್ನು ಬದಲಿಸಿ ಹಿಂದುಳಿದ ವರ್ಗ (ಎ)ಗೆ ಎಂದು ಆದೇಶ ನೀಡಿರುವ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ವಿರುದ್ಧ ದೂರು ನೀಡಲು ಚಿಂತಿಸಲಾಗಿದೆ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಡಿ ಪೂಜಾರ ತಿಳಿಸಿದ್ದಾರೆ.

ಮೀಸಲಾತಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿಕೇಳಲಾಗಿದ್ದು, ಮಾಹಿತಿ ಬಂದ ನಂತರ ಪರಿಶಿಷ್ಟ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮಹಿಳೆಗೆ ಇದ್ದ ನಗರಸಭೆ ಅಧ್ಯಕ್ಷ ಸ್ಥಾನ ಮೀಸಲು ನಿಗದಿ ಪಡಿಸಿ ರಾಜ್ಯ ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ನಂತರ ಪ್ರಭಾವಿ ನಗರಸಭೆ ಸದಸ್ಯರೊಬ್ಬರಿಗೆ ಮೀಸಲಾತಿ ನಿಗದಿಯಿಂದ ಅಧ್ಯಕ್ಷ ಸ್ಥಾನ ಒಲಿವುದು ಕಷ್ಟ ಸಾಧ್ಯವಾಗಿತ್ತು. ಆದ್ದರಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮೀಸಲಾತಿ ಬದಲಾವಣೆ ಮಾಡಲಾಗಿದೆ ಎಂಬುವುದು ಇಲ್ಲಿನ ದಲಿತ ಮುಖಂಡರ ವಾದ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಪೂಜಾರ ಅವರು, 'ಹಿಂದುಳಿದ, ದಲಿತರೂ ಆಗಿರುವ ಮಹಿಳೆಗೆ ಒಲಿದು ಬಂದಿರುವ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿದ್ದು ಸರಿಯಲ್ಲ. ನಾವು ಜನಪ್ರತಿನಿಧಿಗಳ ಮೇಲೆ ಆರೋಪ ಮಾಡುವುದಿಲ್ಲ. ಮೀಸಲಾತಿ ಬದಲಾವಣೆಗೆ ಕಾರಣ ನೀಡಿ ಎಂದು ಅಧಿಕಾರಿಗಳನ್ನೇ ಕೇಳುತ್ತೇವೆ' ಎಂದು ಹೇಳಿದರು.

'ಜನಪ್ರತಿನಿಧಿಗಳು ಸಾವಿರ ಹೇಳುತ್ತಾರೆ. ಆದರೆ ಸಂವಿಧಾನ ಕಾನೂನು ಬಲ್ಲ ಅಧಿಕಾರಿಗಳು ಯಾವ ಆಧಾರದ ಮೇಲೆ ಬದಲಾವಣೆ ಮಾಡಿದ್ದಾರೆ. ತಮಗೆ ಬಂದ ಆದೇಶ, ಟಿಪ್ಪಣಿ, ಶಿಫಾರಸು ಪತ್ರಗಳನ್ನು ನೀಡಬೇಕು ಎಂದು ಮಾಹಿತಿ ಹಕ್ಕಿನಲ್ಲಿ ಕೇಳಲಾಗಿದೆ. ನಗರಾಭಿವೃದ್ಧಿ ಇಲಾಖೆ ಮಾಹಿತಿ ಅಧಿಕಾರಿಗಳಿಂದ ಸೂಕ್ತ ಮಾಹಿತಿ ದೊರೆಯದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು' ಎಂದರು.

ಈಗಾಗಲೇ ಮೀಸಲಾತಿ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಮೀಸಲಾತಿ ಮೊದಲಿದ್ದಂತೆ ಬಂದರೆ ಪ್ರಭಾವಿ ಮುಖಂಡರಿಗೆ ಮುಖಭಂಗವಾಗಲಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ನಗರಸಭೆ ಮೀಸಲಾತಿ ಬಗೆಹರಿದು ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಏರಲು ಕಾತುರದಿಂದ ಕಾಯುತ್ತಿದ್ದು, ಅಭಿವೃದ್ಧಿ ಕೆಲಸಗಳು ನಡೆಯದೇ ಜನ ಪರಿತಪಿಸುವಂತೆ ಆಗಿದೆ.

ಮೀಸಲಾತಿ ರಾಜಕೀಯದಿಂದ ನಗರಸಭೆಯ ಆಡಳಿತ ಸ್ಥಗಿತಗೊಂಡಿದೆ. ಹೊಸ ಸದಸ್ಯರು ಬಂದರೂ ಅವರಿಗೆ ತಮ್ಮ ಬಡಾವಣೆ ಅಭಿವೃದ್ಧಿ, ಚರ್ಚೆ ನಡೆಸಲು ಆಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !