ಸೋಮವಾರ, ಡಿಸೆಂಬರ್ 16, 2019
25 °C
ಭತ್ತದ ಕಣಜದಲ್ಲಿ ರೈತರ ಆತಂಕ: ಖರೀದಿ ಕೇಂದ್ರಕ್ಕೆ ಒತ್ತಾಯ

ಹೆಚ್ಚಿದ ಭತ್ತದ ಆವಕ: ಬೆಲೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಭತ್ತದ ಕಣಜ’ ಎಂದೇ ಹೆಸರುವಾಸಿಯಾಗಿರುವ ಗಂಗಾವತಿ, ಕನಕಗಿರಿ, ಕಾರಟಗಿ ತಾಲ್ಲೂಕುಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

‘ಗಂಗಾವತಿ ಅಕ್ಕಿ’ ಎಂದೇ ಪ್ರಸಿದ್ಧವಾದ ಸೋನಾ ಮಸೂರಿ ತಳಿಯ ಭತ್ತವನ್ನು ಜಿಲ್ಲೆಯ 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದು, ಮಾರುಕಟ್ಟೆಗೆ ಒಂದು ಲಕ್ಷ ಕ್ವಿಂಟಲ್ ಆವಕವಾಗಿದೆ. ಒಂದು ಕ್ವಿಂಟಲ್ ಭತ್ತಕ್ಕೆ ₹ 1,835 ಬೆಲೆ ಇದೆ. 75 ಕೆಜಿ ತೂಕ ಇರುವ ಭತ್ತದ ಒಂದು ಮೂಟೆ ₹1,375ರಿಂದ ₹1,400ಕ್ಕೆ ಮಾರಾಟವಾಗುತ್ತಿದೆ.

ಒಂದು ಹೆಕ್ಟೇರ್ ಪ್ರದೇಶದಲ್ಲಿ 30ರಿಂದ 35 ಮೂಟೆ ಭತ್ತದ ಇಳುವರಿ ಬರುತ್ತಿದೆ. ಕಟಾವು ಆರಂಭವಾಗಿದ್ದು, ಇನ್ನೂ ಒಂದು ವಾರ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುವ ನಿರೀಕ್ಷೆ ಇದೆ.

‘ಈ ಸಾರಿ ಉತ್ತಮ ಫಸಲು ಬರುವುದನ್ನು ಅಂದಾಜಿಸಿರುವ ದಲ್ಲಾಳಿಗಳು, ವ್ಯಾಪಾರಸ್ಥರು ಬೆಲೆ ಕಡಿಮೆಗೊಳಿಸಿದ್ದಾರೆ. ಈ ಭಾಗದಲ್ಲಿ 150ಕ್ಕೂ ಹೆಚ್ಚು ಅಕ್ಕಿ ಮಿಲ್‌ಗಳು ಇದ್ದು, ಅಕ್ಕಿ ತಯಾರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ’ ಎನ್ನುತ್ತಾರೆ ರೈತರು.

ಖರೀದಿ ಕೇಂದ್ರ ಆರಂಭಿಸಿ: ಆರಂಭದಲ್ಲೇ ಬೆಲೆ ಕುಸಿತದಿಂದ ಆತಂಕಗೊಂಡಿರುವ ರೈತರು ಖರೀದಿ ಕೇಂದ್ರ ಆರಂಭಿಸಿ ಕ್ವಿಂಟಲ್‌ಗೆ ಕನಿಷ್ಠ ₹ 3 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು ಒಂದು ಒತ್ತಾಯಿಸುತ್ತಿದ್ದಾರೆ.

'ಖರೀದಿ ಕೇಂದ್ರದ ಬಗ್ಗೆ ಇನ್ನೂ ಯಾವುದೇ ಪ್ರಸ್ತಾವ ಬಂದಿಲ್ಲ. ರೈತರ ಬೇಡಿಕೆ ಆಧರಿಸಿ ಜಿಲ್ಲಾಧಿಕಾರಿ ನಿರ್ಧಾರ ಕೈಗೊಳ್ಳುತ್ತಾರೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ನಿಂಗಪ್ಪ.

ಪ್ರತಿಕ್ರಿಯಿಸಿ (+)