ಭಾನುವಾರ, ಜನವರಿ 24, 2021
17 °C
ಕೊರೊನಾ ಕಾರಣ 8 ತಿಂಗಳು 40ಕ್ಕೂ ಹೆಚ್ಚು ಮಿಲ್‌ಗಳು ಬಂದ್‌: ಕಾರ್ಮಿಕರ ಪರದಾಟ

ಚೇತರಿಕೆಯತ್ತ ಅಕ್ಕಿ ಉದ್ಯಮ

ಶಿವಕುಮಾರ್‌ ಕೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಕೋವಿಡ್ ಲಾಕ್‌ಡೌನ್‌ನಿಂದ ವಹಿವಾಟುಗಳು ನಡೆಯದೇ ತತ್ತರಿಸಿದ್ದ ನಗರದ ರೈಸ್‌ ಮಿಲ್‌ಗಳು ಇದೀಗ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿವೆ. ಅಕ್ಕಿ ಉತ್ಪಾದನೆ ಆರಂಭವಾಗಿದೆ.

ಕೊರೊನಾದಿಂದಾಗಿ 8 ತಿಂಗಳುಗಳ ಕಾಲ ಬಂದ್‌ ಆಗಿದ್ದ ನಗರದ 40ಕ್ಕೂ ಹೆಚ್ಚು ರೈಸ್‌ ಮಿಲ್‌ಗಳು ಕಳೆದ ನವೆಂಬರ್‌ನಿಂದ ಅಕ್ಕಿ ಉತ್ಪಾದನೆಯಲ್ಲಿ ತೊಡಗಿವೆ. ಕಾರ್ಮಿಕರಿಗೂ ಮರುಜೀವ ಬಂದಂತಾಗಿದೆ. ಇದರಿಂದ ಭತ್ತ ಬೆಳೆದ ರೈತರಿಗೂ ಅನುಕೂಲವಾಗಿದ್ದು, ನೇರವಾಗಿ ರೈಸ್‌ ಮಿಲ್‌ಗಳಿಗೆ ಭತ್ತ ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.

ಪ್ರತಿ ಬಾರಿ ಬಿಡುವಿಲ್ಲದೆ ಅಕ್ಕಿ ಉತ್ಪಾದನೆಯಲ್ಲಿ ತೊಡಗುತ್ತಿದ್ದ ರೈಸ್‌ಮಿಲ್‌ಗಳು ಕಳೆದ ವರ್ಷ ದಿಢೀರ್‌ ಲಾಕ್‌ಡೌನ್‌ ಘೋಷಣೆಯಾದ ಕೂಡಲೇ ಯಾವುದೇ ವಹಿವಾಟು ಇಲ್ಲದೇ ನಷ್ಟ ಅನುಭವಿಸಿದವು. ದಾಸ್ತಾನು ಬೆಲೆಯೂ ಕುಸಿದು ಬಿದ್ದ ಪರಿಣಾಮ ರೈತರು, ರೈಸ್‌ ಮಿಲ್‌ಗಳು ಅಧಿಕ ನಷ್ಟ ಅನುಭವಿಸಿದವು.

ರೈಸ್‌ಮಿಲ್‌ಗಳನ್ನು ನಂಬಿದ್ದ ಕಾರ್ಮಿಕರು ಕೂಡ ಕೆಲಸವಿಲ್ಲದೆ ಕುಟುಂಬ ನಿರ್ವಹಣೆಗೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.

ರೈತರನ್ನು ಕಾಡಿದ ಅತಿವೃಷ್ಟಿ: ಕಳೆದ ವರ್ಷ ಬೇಸಿಗೆ ಬೆಳೆಯಲ್ಲಿ ಅಧಿಕ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆಯು ಸಾಕಷ್ಟು ನಷ್ಟ ಉಂಟುಮಾಡಿತು. ತಾಲ್ಲೂಕಿನಾದ್ಯಂತ ಸುರಿದ ಅಧಿಕ ಮಳೆಯಿಂದಾಗಿ ಕಟಾವು ಹಂತಕ್ಕೆ ಬಂದಿದ್ದ ಭತ್ತ ನೆಲಕಚ್ಚಿತ್ತು. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು.

ಮುಂಗಾರಿನಲ್ಲಿ ನಾಟಿ ಮಾಡಿದ ಭತ್ತಕ್ಕೆ ಕಣೆನೊಣ ಹಾಗೂ ಕಾಡಿಗೆ ರೋಗ ಕಾಣಿಸಿಕೊಳ್ಳುವ ಮೂಲಕ ಇಳುವರಿ ಕುಂಠಿತಗೊಂಡು ರೈತರು ಆರ್ಥಿಕ ಸಂಕಷ್ಟ ಅನುಭವಿಸಿದರು.  ಕಡಿಮೆ ಇಳುವರಿ ಒಂದೆಡೆಯಾದರೆ, ಆರಂಭದಲ್ಲಿ ಭತ್ತದ ಬೆಲೆ ಕುಸಿತದಿಂದ ರೈತರು ಕಂಗೆಟ್ಟಿದ್ದರು. ಸದ್ಯ ಭತ್ತದ ಬೆಲೆ ಸುಧಾರಿಸಿದ್ದು, ಬೆಂಬಲ ಬೆಲೆ ದೊರಕಿದ ಪರಿಣಾಮ ನಿಟ್ಟುಸಿರು ಬಿಟ್ಟಿದ್ದಾರೆ.

ಭತ್ತದ ಉದ್ಯಮಕ್ಕೆ ಪೂರಕವಾದ ಸ್ಥಳೀಯ ಮತ್ತು ವಲಸೆ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ಸ್ವಗ್ರಾಮಗಳತ್ತ ತೆರಳಿದ್ದು ರೈಸ್‌ ಮಿಲ್‌ಗಳು ಬಾಗಿಲು ಹಾಕಿದ್ದವು. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ರೈಸ್‌ ಮಿಲ್‌ಗಳು ಇದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸಿ, ಮಿಲ್‌ಗಳಿಗೆ ಅಗತ್ಯವಾಗಿರುವ ವಿದ್ಯುತ್‌ ಮತ್ತು ನೀರಿನ ಬಿಲ್‌ಗಳನ್ನು ಕಡಿತಗೊಳಿಸಬೇಕು ಎಂಬ ಬೇಡಿಕೆ ಮಾಲೀಕರದ್ದಾದರೆ, ಕೆಲಸದ ಭದ್ರತೆ ನೀಡಬೇಕು ಎಂಬುವುದು ಕಾರ್ಮಿಕರ ವಾದವಾಗಿದೆ.

ಜಿಲ್ಲೆಯ ಗಂಗಾವತಿ, ಕಾರಟಗಿ ಭಾಗದಲ್ಲಿ ಅತಿ ಹೆಚ್ಚು ರೈಸ್‌ ಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದರೆ, ಕೊಪ್ಪಳ, ಕನಕಗಿರಿ ಭಾಗದಲ್ಲಿ 20ಕ್ಕೂ ಹೆಚ್ಚು ಮಿಲ್‌ಗಳು ಇವೆ. ಇಲ್ಲಿನ ಗಂಗಾವತಿ ಅಕ್ಕಿ ತನ್ನ ರುಚಿ, ಗುಣಮಟ್ಟದಿಂದ ದೇಶ-ವಿದೇಶಕ್ಕೆ ರಫ್ತಾಗುವ ಮೂಲಕ ಸಾವಿರಾರು ಕೋಟಿ ವಹಿವಾಟುಗಳನ್ನು ನಡೆಸುತ್ತಿದ್ದವು. ಆದರೆ ಕೊರೊನಾದಿಂದ ಬಂದ್‌ ಆಗಿದ್ದರಿಂದ ಉತ್ಪಾದನೆಯೂ ಇಲ್ಲ. ಉದ್ಯೋಗವೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಕಾರ್ಮಿಕರಿಗೆ ಕೆಲವು ಸಂಘ ಸಂಸ್ಥೆಗಳು ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ನೀಡಿವೆ. ಅವುಗಳು ಬಹುತೇಕರಿಗೆ ತಲುಪಿಲ್ಲ ಎಂಬ ಆರೋಪ ಕೂಡಾ ಇದೆ. ಅಲ್ಲದೆ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಗಿದ್ದರೂ ರೈತರು ಅಲ್ಲಿ ಹೋಗಿ ಮಾರಾಟ ಮಾಡಲು ಆಸಕ್ತಿ ತೋರುತ್ತಿಲ್ಲ. ಖರೀದಿ ಕೇಂದ್ರಗಳ ನಿಬಂಧನೆಗಳು ಮತ್ತು ದರ, ವಿಳಂಬವಾಗಿ ನೀಡುವ ಹಣ ದಿಂದ ರೈತರು ಖಾಸಗಿ ರೈಸ್‌ಮಿಲ್‌ ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಅಕಾಲಿಕ ಮಳೆಯಿಂದ 39 ಕೋಟಿ ಪರಿಹಾರ ರೈತರಿಗೆ ಬಂದಿದ್ದರೂ ಇದರಲ್ಲಿ ಅನೇಕ ತಾಂತ್ರಿಕ ತೊಂದರೆಗಳು ಇದ್ದು, ಶ್ರಮ ವಹಿಸಿ ಅರ್ಹ ರೈತರಿಗೆ ದೊರೆತಿಲ್ಲ ಎಂಬ ಆರೋಪಗಳು ಕೂಡಾ ಕೇಳಿ ಬಂದಿವೆ. ಈ ಭಾಗದಲ್ಲಿ ರೈತರು ಜಮೀನುಗಳನ್ನು ಗುತ್ತಿಗೆ ಪಡೆದು ಭತ್ತ ಬೆಳೆದಿದ್ದರೂ, ಜಮೀನಿನ ಮಾಲೀಕರಿಗೆ ಪರಿಹಾರ ಹೋಗಿದ್ದು, ಮತ್ತೊಂದು ಸಂಕಷ್ಟವನ್ನು ಎದುರಿಸುತ್ತಿದ್ದು, ಸರ್ಕಾರ ಕೂಡಾ ಈ ವಿಷಯದಲ್ಲಿ ಅಸಹಾಯಕವಾಗಿದೆ.

ಅಲ್ಲದೆ ಅಕ್ಕಿಗಳನ್ನು ಹೆಚ್ಚು ಖರೀದಿಸುವ ಉತ್ತರ ಭಾರತ ಮತ್ತು ತಮಿಳುನಾಡಿನ ವ್ಯಾಪಾರಸ್ಥರು ಈ ಸಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಮುಂಗಾರು, ಹಿಂಗಾರು ಉತ್ತಮ ಮಳೆಯಿಂದ ತುಂಗಭದ್ರಾ ಜಲಾಶಯ ತುಂಬಿದ್ದು, ಕಾಲುವೆಗೆ ಸತತ ನೀರು ಹರಿದರೂ ರೈತರ ಭಾಗ್ಯದ ಬಾಗಿಲು ತೆಗೆದಿಲ್ಲ. ಅಲ್ಲದೆ ಇಳುವರಿ ಕೂಡಾ ತಕ್ಕಮಟ್ಟಿಗೆ ಬಂದಿದ್ದು, ರೈಸ್‌ಮಿಲ್‌ಗಳಿಗೂ ಅನುಕೂಲವಾಗಿಲ್ಲ.

ಭತ್ತದ ಕಣಜದಲ್ಲಿ ಈ ಸಾರಿ ಒಂದು ರೀತಿಯ ಭರದಿಂದ ರೈಸ್‌ಮಿಲ್ ಮಾಲೀಕರು, ರೈತರು, ಕಾರ್ಮಿಕರು ಮತ್ತೊಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಸರ್ಕಾರ ಇದಕ್ಕೆ ಶಾಶ್ವತವಾದ ಪರಿಹಾರವನ್ನು ನೀಡ ಬೇಕು ಎಂದು ಈ ಭಾಗದ ಆರ್ಥಿಕ ತಜ್ಞರು, ಉದ್ದಿಮೆಗಳು ಕೂಡಾ ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.