ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಭೀಕರ ರಸ್ತೆ ಅಪಘಾತ; ಜಾತ್ರೆಗೆ ಬರುವಾಗ ಇದ್ದ ಸಂಭ್ರಮ ಹೋಗುವಾಗ ಇರಲಿಲ್ಲ

Published 28 ಮೇ 2023, 18:28 IST
Last Updated 28 ಮೇ 2023, 18:28 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಕಲಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಆರು ಜನರ ಮೃತದೇಹಗಳು ರಕ್ತಸಿಕ್ತವಾಗಿದ್ದವು. ಇವುಗಳನ್ನು ಕಂಡ ಸ್ಥಳೀಯರು ಮರುಗಿದರು.

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಖಾಜಪ್ಪ ಸೊಲ್ಲಾಪುರ ತಾಲ್ಲೂಕಿನ ಲವಗಿಯಲ್ಲಿ ನಡೆದಿದ್ದ ಯಲ್ಲಮ್ಮ ದೇವಿಯ ಜಾತ್ರೆ ಸಲುವಾಗಿ ಒಂದು ತಿಂಗಳ ಹಿಂದೆಯೇ ಊರಿಗೆ ಹೋಗಿದ್ದರು. ಜಾತ್ರೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡು ವಾಪಸ್‌ ಬೆಂಗಳೂರಿಗೆ ತೆರಳುವಾಗ ಈ ಘಟನೆ ನಡೆದಿದೆ.

‘ಅಣ್ಣ ಜಾತ್ರೆಯಲ್ಲಿ ಸಂಭ್ರಮದಿಂದ ಓಡಾಡಿದ್ದ. ಎಲ್ಲರೊಂದಿಗೂ ಬೆರೆತಿದ್ದ. ಜಾತ್ರೆಯ ಸವಿ ನೆನಪು ಮನದಲ್ಲಿ ಹಸಿರಾಗಿವಾಗಲೇ ದುರಂತ ನಡೆದಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಖಾಜಪ್ಪ ಅವರ ಸಹೋದರ ಪ್ರಭಾಕರ ಕಣ್ಣೀರಾದರು.

ಅದರಲ್ಲೂ ಕಂದಮ್ಮಗಳಾದ ನಾಲ್ಕು ವರ್ಷದ ರಾಕಿ ಮತ್ತು ಎರಡು ವರ್ಷದ ರಶ್ಮಿಕಾ ಮೃತದೇಹಗಳನ್ನು ಸ್ಥಳೀಯರು ನೋಡಿ ಭಾವುಕರಾಗಿ ಕಣ್ಣೀರು ಸುರಿಸಿದರು. ಲಾರಿಯ ಅಡಿಯಲ್ಲಿ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಕ್ರೇನ್‌ ಮೂಲಕ ಹೊರತಗೆದು ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು.

ಮೃತಪಟ್ಟ ಒಟ್ಟು ಆರು ಜನರ ಪೈಕಿ ಜಯಶ್ರೀ ಕಾಂಬಳೆ ಗೃಹಿಣಿಯಾಗಿದ್ದರು. ಚಾಲಕ ರಾಘವೇಂದ್ರ ಕಾಂಬಳೆ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ಖಾಜಪ್ಪ ಬನಸೋಡೆ ಮತ್ತು ಅಕ್ಷಯ ಕೂಲಿ ಕೆಲಸ ಮಾಡುತ್ತಿದ್ದರು.

ಎಸ್‌ಪಿ ಭೇಟಿ: ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಇರಿಸಿರುವ ಆಸ್ಪತ್ರೆಗೂ ತೆರಳಿದರು.

ಘಟನೆ ಕುರಿತು ‍‘ಪ್ರಜಾವಾಣಿ’ ಜೊತೆ ಮಾತನಾಡಿದ ಯಶೋಧಾ ’ಕಾರಿನ ಮುಂದಿನ ಬಲಭಾಗದ ಟೈರ್‌ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ಲಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಕಾರು ಲಾರಿ ಅಡಿಯಲ್ಲಿ ಸಿಲುಕಿಕೊಂಡಿತ್ತು. ಮೃತ ವ್ಯಕ್ತಿಗಳ ಕುಟುಂಬದವರು ಆಸ್ಪತ್ರೆಗೆ ಬಂದಿದ್ದು, ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ತಿಳಿಸಿದರು. ಬಳ್ಳಾರಿ ಐಜಿ ಲೋಕೇಶ್ ಕುಮಾರ್‌ ಘಟನಾ ಸ್ಥಳಕ್ಕೆ ರಾತ್ರಿ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT