ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ‘ಭಾರ’ಕ್ಕೆ ನಲುಗಿದ ರಸ್ತೆ: ಎಲ್ಲವೂ ಅವ್ಯವಸ್ಥೆ

ರಸ್ತೆ ಗುಂಡಿಗಳಲ್ಲಿ ವಾಹನ ಸವಾರರ ಪರದಾಟ: ವೃದ್ಧರು, ಮಹಿಳೆಯರು, ರೋಗಿಗಳಿಗೆ ತಪ್ಪದ ಸಂಕಷ್ಟ, ಕಾಣಸಿಗದ ದುರಸ್ತಿ
Last Updated 18 ಜನವರಿ 2021, 2:14 IST
ಅಕ್ಷರ ಗಾತ್ರ

ಗಂಗಾವತಿ: ಪಟ್ಟಣ ಸೇರಿದಂತೆ ಕಾರಟಗಿ, ಕನಕಗಿರಿ ಹಾಗೂ ಕೊಪ್ಪಳ ಭಾಗಗಳಲ್ಲಿ ರಸ್ತೆಗಳು ಹಾಳಾಗಿವೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ದುರಸ್ತಿ ಗೋಜಿಗೆ ಹೋಗುತ್ತಿಲ್ಲ!.

ಅಮೃತ ಸಿಟಿಗೆ ಆಯ್ಕೆಯಾಗಿರುವ ಗಂಗಾವತಿ ನಗರದ ಪ್ರಮುಖ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳಲ್ಲಿ ಗುಂಡಿಯೋ ಅಥವಾ ಗುಂಡಿ ಮಧ್ಯೆ ರಸ್ತೆಯೋ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸವಾರರಿಗೆ ಸುಗಮ ಸಂಚಾರ ಎಂಬುದು ಕನಸಾಗಿ ಉಳಿದಿದೆ.

ಕೊಪ್ಪಳದಿಂದ ಅಂಜನಾದ್ರಿ-ಹುಲಿಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ನಿತ್ಯ ಇಲ್ಲಿ ಸಾವಿರಾರು ಜನರು, ಯಾತ್ರಿಕರು, ಪ್ರವಾಸಿಗರು ಸಂಚರಿಸುತ್ತಾರೆ. ಆದರೂ ಉತ್ತಮ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ವಾಹನ ಸವಾರರು ಸಂಚರಿಸಲು ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಇರಲೇಬೇಕು. ದಾಖಲೆಗಳ ಜತೆ ಸಂಚಾರ ಮಾಡಲು ಎಂಟೆದೆಯೂ ಬೇಕು. ಇಲ್ಲದಿದ್ದರೇ ಹದಗೆಟ್ಟ ರಸ್ತೆಗಳ ಗುಂಡಿಗಳಿಂದ ಅಪಘಾತಕ್ಕೀಡಾಗಬೇಕಾಗುತ್ತದೆ. 210 ಕಿ.ಮೀ ವ್ಯಾಪ್ತಿಯ ನಗರ ಪ್ರದೇಶದ ರಸ್ತೆಗಳೆಲ್ಲ ನಗರಸಭೆ ವ್ಯಾಪ್ತಿಗೆ ಬರುತ್ತವೆ. ಪ್ರಮುಖ ರಸ್ತೆಗಳ ಸ್ಥಿತಿಯಂತೂ ಇನ್ನೂ ಗಂಭೀರವಾಗಿದೆ.

ನಗರದಲ್ಲಿ 35 ವಾರ್ಡ್‌ಗಳಿವೆ. ಬಹುತೇಕ ವಾರ್ಡ್‌ಗಳ ರಸ್ತೆ ಸಂಚಾರ ಯೋಗ್ಯವಾಗಿಲ್ಲ. ಎಲ್ಲಿ ನೋಡಿದರೂ ಗುಂಡಿಗಳೇ ಇವೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ನಗರಕ್ಕೆ ಶಾಲೆ, ಕಾಲೇಜಿಗೆ ಬರುತ್ತಾರೆ. ವೃದ್ಧರು, ಮಹಿಳೆಯರು, ರೋಗಿಗಳಿಗಂತೂ ತೊಂದರೆಯಾಗಿದೆ. ಈ ಗುಂಡಿ ಬಿದ್ದ ರಸ್ತೆಯು ಅವರಿಗೆ ದೊಡ್ಡ ತಲೆ ನೋವಾಗಿದೆ. ವೇಗವಾಗಿ ಹೋಗುವ ಬೈಕ್‌ ಸವಾರರು ತಗ್ಗು, ಗುಂಡಿ ಲೆಕ್ಕಿಸದೆ ಬಿದ್ದು ಕೈಕಾಲಿಗೆ ಗಾಯ ಮಾಡಿಕೊಂಡ ಉದಾಹಣೆಗಳು ಸಹ ಇವೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸುವ ಡಾಂಬರ್‌ ರಸ್ತೆಗಳು ನಾಲ್ಕೈದು ವರ್ಷಗಳಾದರೂ ಬಾಳಿಕೆ ಬರಬೇಕು. ಆದರೆ, ಅದು ಇಲ್ಲಿ ಮೂರು ವರ್ಷಗಳೂ ಬರುತ್ತಿಲ್ಲ. ವರ್ಷ ಇಲ್ಲವೇ ಎರಡು ವರ್ಷಗಳ ಒಳಗೆ ರಸ್ತೆಗಳು ಹಾಳಾಗುತ್ತಿವೆ. ಅಷ್ಟರಮಟ್ಟಿಗೆ ರಸ್ತೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಸರ್ಕಾರಕ್ಕೆ ನಷ್ಟ ಉಂಟಾಗುತ್ತಲೇ ಇದೆ. ಜನಪ್ರತಿನಿಧಿಗಳು ಎಚ್ಚರಿಕೆ ನೀಡಿದರೂ ಯಾವುದೇ ಕೆಲಸವಾಗುತ್ತಿಲ್ಲ.

ಗಂಗಾವತಿ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿಯವರೆಗಿನ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಎರಡು ಪ್ರಥಮ ದರ್ಜೆ ಮತ್ತು ಎಂಜಿನಿಯರಿಂಗ್ ಕಾಲೇಜು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇರುವುದರಿಂದ ಸಾವಿರಾರು ಜನ ಓಡಾಡುತ್ತಾರೆ.

ಅಪಾಯಕ್ಕೆ ಕಾಯುತ್ತಿವೆ ಗುಂಡಿಗಳು: ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ಸಾಕಷ್ಟು ಅಪಘಾತಗಳು ಪ್ರತಿನಿತ್ಯ ಜರುಗುತ್ತಿವೆ. ಜುಲಾಯಿ ನಗರ, ಬನ್ನಿಗಿಡ ಕ್ಯಾಂಪ್, ಹೊಸಳ್ಳಿ ರಸ್ತೆ, ಹಿರೇಜಂತಕಲ್, ವಿರುಪಾಪುರ ತಾಂಡಾ, ಗುಂಡಮ್ಮ ಕ್ಯಾಂಪ್, ಇಸ್ಲಾಂಪುರ, ಜಯನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೊಡ್ಡ, ದೊಡ್ಡ ಗುಂಡಿಗಳು ಅಪಾಯಕ್ಕಾಗಿ ಕಾದು ಕುಳಿತಿವೆ.

ಭಾರೀ ಗಾತ್ರದ ವಾಹನಗಳ ಓಡಾಟ: ಇನ್ನು, ಭಾರೀ ಗಾತ್ರದ ವಾಹನಗಳು ನಗರದ ಒಳಗಡೆಯ ರಸ್ತೆಗಳಲ್ಲಿ ಸಂಚರಿಸುವುದರಿಂದ ರಸ್ತೆಗಳು ಹಾಳಾಗಿದ್ದು, ಲಾರಿಗಳ ಓಡಾಟಕ್ಕೆ ನಿರ್ಬಂಧ ಹಾಕುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಹಿಂದೆ ಪೊಲೀಸ್‌ ಇಲಾಖೆ ಭಾರೀ ಗಾತ್ರದ ವಾಹನಗಳಿಗೆ ಬ್ರೇಕ್‌ ಹಾಕಿತ್ತು. ಆದರೆ, ತಡರಾತ್ರಿಯ ವೇಳೆ ಲಾರಿಗಳ ಓಡಾಟ ನಿತ್ಯ ಸಂಚಾರವಾಗುತ್ತಿರುವುದರಿಂದ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಮಲ್ಲಾಪೂರ, ಸಂಗಾಪುರ, ಹಣವಾಳ, ಗುಳದಾಳ, ಮಸಾರಿಕ್ಯಾಂಪ್, ಮರಕುಂಬಿ, ಬಾಬುರೆಡ್ಡಿ ಕ್ಯಾಂಪ್‌, ಜಂಗಮರ ಕಲ್ಗುಡಿ, ಮುಷ್ಟೂರು, ಹೆಬ್ಬಾಳ, ಅಂಜೂರಿ ಕ್ಯಾಂಪ್‌, ಗುಂಡೂರು, ಬರಗೂರು ಕ್ಯಾಂಪ್‌, ಲಕ್ಷ್ಮೀ ಕ್ಯಾಂಪ್‌, ಜಮ್ಮಾಪುರ, ಉಳೆನೂರು, ಕೊಟ್ನೆಕಲ್‌, ಅರುಣೋದಯ ಕ್ಯಾಂಪ್‌, ಹೊಸಕೇರಾ ಸೇರಿದಂತೆ ಕಾರಟಗಿ, ಕನಕಗಿರಿ ತಾಲ್ಲೂಕಿನ ಹಲವು ಗ್ರಾಮಗಳ ರಸ್ತೆಗಳ ಪರಿಸ್ಥಿತಿಯಂತೂ ಶೋಚನೀಯವಾಗಿದೆ.

ಹದಗೆಟ್ಟ ರಸ್ತೆ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾದಾಗ, ನಗರಸಭೆ ಮತ್ತು ಜನಪ್ರತಿನಿಧಿಗಳು ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗುತ್ತಾರೆ. ದುರಸ್ತಿ ಕಾರ್ಯ ಕೈಗೊಳ್ಳುತ್ತಾರೆ. ಆದರೆ, ವಾರದಲ್ಲೇ ಪರಿಸ್ಥಿತಿ ಮತ್ತೆ ಯಥಾ ರೀತಿಯಾಗುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಕಾರಟಗಿ: ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೆಚ್ಚು
ಭತ್ತವನ್ನೇ ಹೆಚ್ಚಾಗಿ ಬೆಳೆಯುವ ಈ ಭಾಗದಲ್ಲಿ ಕಾಲುವೆ ನೀರು ಸೇರಿದಂತೆ ವಿವಿಧ ಪೈಪ್‌ಲೈನ್‌ಗಳು ಸೋರಿಕೆಯಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿವೆ. ಕೆಲವು ರಸ್ತೆಗಳು ಕೆಂಪು ಮಣ್ಣಿನ ಕಚ್ಚಾ ರಸ್ತೆಯ ರೂಪ ತಾಳಿವೆ. ಡಾಂಬರ್‌ ಕಿತ್ತು ಹೋಗಿದ್ದರೂ ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ.

ಕೊರೊನಾ, ಕೋವಿಡ್‌, ಅನುದಾನ ಕೊರತೆಯ ನೆಪದಿಂದ ಯಾವುದೇ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ, ಕಾಸನಕಂಡಿ, ಹಾಲವರ್ತಿ ರಸ್ತೆಗಳು ಅಧ್ವಾನ ಆಗಿ ಹೋಗಿವೆ. ಈ ಕುರಿತು ಅನೇಕ ಸಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ.

ಭಾರಿ ವಾಹನಗಳ ಸಂಚಾರ
ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಬೃಹತ್, ಸಣ್ಣ , ಮಧ್ಯಮ ಕೈಗಾರಿಕೆಗಳು ಇದ್ದು, ಉಕ್ಕು, ಸ್ಟೀಲ್, ಕಬ್ಬಿಣ, ಭತ್ತ, ಗಣಗಾರಿಕೆ, ದ್ರಾಕ್ಷಿ ಕಲ್ಲು, ಮರಳು, ಸಿಮೆಂಟ್ ಹೇರಿಕೊಂಡು ಸಾವಿರಾರು ಸಂಖ್ಯೆಯಲ್ಲಿ ನಗರ, ಗ್ರಾಮ ಎನ್ನದೆ ಎಲ್ಲೆಂದರಲ್ಲಿ ಸಂಚರಿಸುತ್ತಿವೆ. ಆದರೂ ಕೂಡಾ ಖಾಸಗಿ ಕೈಗಾರಿಕೆಯವರು ರಸ್ತೆ ಅಭಿವೃದ್ಧಿಗೆ ಕೈಜೋಡಿಸುವಂತೆ ಜಿಲ್ಲಾಡಳಿತ ಪದೇ ಪದೇ ಮನವಿ ಸಹಕರಿಸುತ್ತಿಲ್ಲ ಎಂಬ ಆರೋಪವಿದೆ.

ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಲಾಗುವುದು ಎಂದು ಸರ್ಕಾರ ಒಂದೆಡೆ ಹೇಳಿದರೆ, ಮೂಲಸೌಕರ್ಯ ಕಲ್ಪಿಸಲು ಹಿಂದೇಟು ಹಾಕುತ್ತಿದೆ. ಪರಿಣಾಮ ಧೂಳು, ಕಲುಷಿತ ಕಪ್ಪು ಮಿಶ್ರಿತ ಕಾರ್ಖಾನೆಯ ದಟ್ಟ ಹೊಗೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

ಭಾರಿ ವಾಹನಗಳ ವೇಗ, ಕರ್ಕಶ ಶಬ್ಧ, ಅವುಗಳು ಹೊರಸೂಸುವ ಅಪಾಯಕಾರಿ ಗಾಳಿ ಕೂಡಾ ಜೀವಕ್ಕೆ ಸಂಚಕಾರ ತಂದಿದೆ. ಆದರೆ ಇವುಗಳಿಗೆ ಕಡಿವಾಣ ಹಾಕುವುದು ಯಾರು ಎಂಬ ಪ್ರಶ್ನೆ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT