ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸಾರಿಗೆ; ಕೊರತೆ ನೀಗುವುದೆಂದು? ಹೆಚ್ಚು ಬಸ್‌ಗಳ ನಿರೀಕ್ಷೆಯಲ್ಲಿ ಪೋಷಕರು

ಪ್ರಾಣದ ಹಂಗು ಲೆಕ್ಕಿಸದೆ ಬಸ್‌ಗೆ ಜೋತು ಬೀಳುವ ವಿದ್ಯಾರ್ಥಿಗಳು, ಹೆಚ್ಚುವರಿ ಬಸ್‌ಗಳ ನಿರೀಕ್ಷೆಯಲ್ಲಿ ಪೋಷಕರು
Last Updated 24 ಜುಲೈ 2022, 19:30 IST
ಅಕ್ಷರ ಗಾತ್ರ

ಕೊಪ್ಪಳ: ಶಾಲಾ, ಕಾಲೇಜುಗಳಿಗೆ ತೆರಳಲು ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಬಸ್‌ ಸಿಗದೆ, ಸಿಕ್ಕರೂ ಬಸ್‌ ಪೂರ್ಣ ತುಂಬಿ ಹೋಗಿ ಬಾಗಿಲ ತನಕ ಜೋತಾಡುತ್ತಾ ನಿಲ್ಲುವ ಚಿತ್ರಣ ಜಿಲ್ಲೆಯಲ್ಲಿ ಬಹುತೇಕ ಕಡೆ ಕಂಡು ಬರುತ್ತಿದೆ.

ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಮಯ ಮತ್ತು ಮಾರ್ಗವನ್ನು ಹೊಂದಿಸದೇ ಇರುವುದರಿಂದ ನಿತ್ಯ ವಿದ್ಯಾಸಂಸ್ಥೆಗಳಿಗೆ ಹೋಗಲು ಪರದಾಡಬೇಕಾದ ಪರಿಸ್ಥಿತಿಯಿದೆ. ಇದಕ್ಕಾಗಿ ವಿದ್ಯಾರ್ಥಿಗಳು, ಪೋಷಕರು, ವಿವಿಧ ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆ ಮಾಡಿದ ಉದಾಹರಣೆಗಳಿವೆ.

ಕುಷ್ಟಗಿ ತಾಲ್ಲೂಕಿನ ಕೋನಾಪೂರ ಹಾಗೂ ಪರಮನಹಟ್ಟಿ ಗ್ರಾಮಗಳಿಗೆ ಬಸ್‌ ಕೊರತೆಯಿಂದಾಗಿ ವಿದ್ಯಾರ್ಥಿಗಳು ಬಸ್‌ ಮುಂದೆಯೇ ಓದಿ ಪ್ರತಿಭಟಿಸಿದ್ದು ಈಚೆಗೆ ಎಲ್ಲರ ಗಮನ ಸೆಳೆದಿತ್ತು. ಮಳೆಗಾಲದ ಸಮಯದಲ್ಲಿ ಬಸ್‌ಗಳು ನಿಯಮಿತವಾಗಿ ಬರುವುದೇ ಸಾಹಸ ಎನ್ನುವಂತಾಗುತ್ತಿದೆ.

ಗಂಗಾವತಿಯ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಟಂಟಂ, ಟಾಟಾ ಮ್ಯಾಜಿಕ್, ಆಟೊ, ಗೂಡ್ಸ್, ಟ್ರ್ಯಾಕ್ಟರ್‌ಗಳಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ ಗ್ರಾಮದಿಂದ ಗಂಗಾವತಿ ನಗರಕ್ಕೆ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿನ ಸಮಯಕ್ಕೆ ಬಸ್‌ ಬಾರದೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಹಣವಾಳ, ಕೆಸರಹಟ್ಟಿ, ಭಟ್ಟರ ಹಂಚಿನಾಳ, ಹೇರೂರ, ಶ್ರೀರಾಮನಗರ, ಉಡಮಕಲ್, ಭಂಡ್ರಾಳ, ವೆಂಕಟಗಿರಿ, ದಾಸನಾಳ, ಬಸಾಪಟ್ಟಣ, ವಡ್ಡರಹಟ್ಟಿ ವಿದ್ಯಾರ್ಥಿಗಳಿಗೂ ಇದೇ ಸಮಸ್ಯೆ. ಬಸ್‌ ಪಾಸ್‌ ಇದ್ದರೂ ಖಾಸಗಿ ವಾಹನಗಳಿಗೆ ಹಣ ಕೊಡಬೇಕಾಗಿದೆ.

ಗಂಗಾವತಿಯ ಸಾಯಿನಗರದಲ್ಲಿನ ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಬಾಗಿಲಲ್ಲಿ ಜೋತುಬಿದ್ದು ಪ್ರಾಣ ಅಪಾಯ ಲೆಕ್ಕಿಸದೆ ಪ್ರಯಾಣ ಮಾಡುತ್ತಾರೆ.

ಕುಷ್ಟಗಿ ತಾಲ್ಲೂಕಿನ ತಳುವಗೇರಾ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ 6 ರಿಂದ 10ನೇ ತರಗತಿವರೆಗೆ ಸುಮಾರು ನಾಲ್ಕು ನೂರಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಶಾಲೆಗೆ ಬಂದು ಹೋಗುವುದೆಂದರೆ ಪ್ರಯಾಸದ ಕೆಲಸ. ಈ ಶಾಲೆಗೆ ಪಟ್ಟಣ ಸೇರಿದಂತೆ ದೂರದ ಬೇರೆ ಬೇರೆ ಗ್ರಾಮಗಳಿಂದ ಮಕ್ಕಳು ಬಂದು ಹೋಗುತ್ತಾರೆ. ತಡವಾಗಿ ಬಂದರೆ ಪಾಠ ಮುಗಿದಿರುತ್ತವೆ. ಮನೆಗೆ ಹೋಗುವಷ್ಟರಲ್ಲಿ ಕತ್ತಲು ಆವರಿಸಿರುತ್ತದೆ. ಮಳೆ ಬಂದರಂತೂ ಸಮಸ್ಯೆ ಹೇಳತೀರದಷ್ಟಾಗಿರುತ್ತದೆ.

ಈ ಹಿಂದೆ ಬೆಳಿಗ್ಗೆ 9.15 ಕುಷ್ಟಗಿ ಬಸ್‌ನಿಲ್ದಾಣದಿಂದ ಹೋಗುತ್ತಿದ್ದ ಬಸ್‌ ರದ್ದುಪಡಿಸಲಾಗಿದೆ. ನಂತರ ಬರುವ ಬಸ್‌ಗಳಲ್ಲಿ ನೂರಾರು ಮಕ್ಕಳು ಪ್ರಯಾಣಿಸಬೇಕು. ಇನ್ನು ಸಂಜೆ ಮರಳಿ ಊರಿಗೆ ಹೋಗುವುದಕ್ಕೆ ಕುಷ್ಟಗಿಯಿಂದ ಒಂದು ಖಾಲಿ ಬಸ್‌ ಬರುತ್ತಿದ್ದರೆ ಎರಡು ಬಸ್‌ಗಳೂ ಭರ್ತಿಯಾಗುವಷ್ಟುಮಕ್ಕಳು ಇರುತ್ತಾರೆ.

ಸಂಜೆ ಇನ್ನೂ ಒಂದು ಬಸ್‌ ವ್ಯವಸ್ಥೆ ಮಾಡಬೇಕು ಮತ್ತು ಬೆಳಿಗ್ಗೆ 9.15ಕ್ಕೆ ಒಂದು ಬಸ್‌ ಬಿಟ್ಟರೆ ಶಾಲೆಗೆ ನಿಗದಿತ ಅವಧಿಗೆ ಬರುವುದಕ್ಕೆ ಮಕ್ಕಳಿಗೆ ಅನುಕೂಲವಾಗುತ್ತದೆ. ಆದರೆ ಈ ಬಗ್ಗೆ ಶಾಲೆ, ಪಾಲಕರಿಂದ ಪತ್ರವ್ಯವಹಾರ ಮಾಡಲಾಗಿದೆ. ಸ್ವತಃ ಶಾಸಕ ಅಮರೇಗೌಡ ಬಯ್ಯಾಪುರ ಅವರೇ ಬಸ್‌ನಿಲ್ದಾಣದಲ್ಲಿ ಮಕ್ಕಳು ಅನುಭವಿಸುವ ತೊಂದರೆಯನ್ನು ಗಮನಿಸಿ ಬಸ್‌ ವ್ಯವಸ್ಥೆ ಕಲ್ಪಿಸಲು ಘಟಕ ವ್ಯವಸ್ಥಾಪಕರಿಗೆ ತಾಕೀತು ಮಾಡಿದ್ದರು. ಈ ಯಾವ ಪ್ರಯತ್ನಗಳೂ ಫಲ ನೀಡಿಲ್ಲ ಎಂದು ಆದರ್ಶ ಶಾಲೆಯ ಮುಖ್ಯಶಿಕ್ಷಕ ಸಂಗಪ್ಪ ಕಿರೇಸೂರು ಹೇಳಿದರು.

ತಾವರಗೇರಾ ಸುತ್ತಮುತ್ತಲೂ ಇದೇ ಸಮಸ್ಯೆಯಿದ್ದು ಈಚೆಗೆ ನಾರಿನಾಳ ಮ್ಯಾದರಡೊಕ್ಕಿ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಅಮರಾಪೂರ, ಕಳಮಳ್ಳಿ , ಮ್ಯಾದರಡೊಕ್ಕಿ ತಾಂಡ, ಕಿಡದೂರು ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗಿಲ್ಲ.

ಕೊಪ್ಪಳ ತಾಲ್ಲೂಕಿನಲ್ಲಿ ಅಳವಂಡಿ ದೊಡ್ಡ ಹೋಬಳಿ. ಈ ಭಾಗದ ವಿದ್ಯಾರ್ಥಿಗಳು ಓದಿಗಾಗಿ ಕೊಪ್ಪಳ, ಮುಂಡರಗಿ, ಹಿರೇಸಿಂಧೋಗಿಗೆ ಖಾಸಗಿ ವಾಹನಗಳಿಗೆ ಹೋಗಬೇಕಾಗಿದೆ.

ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ, ಕಾತರಕಿ- ಗುಡ್ಲಾನೂರ, ಬಿಸರಳ್ಳಿ, ಬೆಟಗೇರಿ, ನೀರಲಗಿ, ಮತ್ತೂರು, ತಿಗರಿ, ಬೇಳೂರು, ಹನಕುಂಟಿ, ಅಳವಂಡಿ, ನಿಲೋಗಿಪುರ, ಹಂದ್ರಾಳ, ಮೈನಹಳ್ಳಿ, ಬಿಕನಹಳ್ಳಿ, ಸಿಂದೋಗಿ, ಹೈದರನಗರ, ಬೋಚನಹಳ್ಳಿ, ಬೈರಾಪುರ ಗ್ರಾಮಕ್ಕೆ ಬಸ್ ಸೌಕರ್ಯ ತೀವ್ರ ತೊಂದರೆಯಾಗಿದೆ. ಬೆಳಿಗ್ಗೆ ಕಾಲೇಜಿಗೆ ತೆರಳಲು ಒಂದು ಬಸ್‌ನಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕು ಹೋಗಬೇಕಾದ ಪರಿಸ್ಥಿತಿ ಇರುವುದು ಅವ್ಯವಸ್ಥೆಗೆ ಕೈಗನ್ನಡಿಯಂತಿದೆ.

ಪ್ರಯಾಣಿಕರ ಸಂಖ್ಯೆ ಮೀರಿದರೆ ಟಿಕೆಟ್ ನೀಡಲು ನಿರ್ವಾಹಕರಿಗೂ ತೊಂದರೆಯಾಗುತ್ತದೆ. ದಾರಿ ಮಧ್ಯೆ ಬಸ್‌ ನಿಲ್ಲಿಸಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ.

ಕನಕಗಿರಿ ವ್ಯಾಪ್ತಿಯ ನವಲಿ, ಮುಸಲಾಪುರ, ಹಿರೇಖೇಡ, ಚಿಕ್ಕಮಾದಿನಾಳ ಸೇರಿದಂತೆ ಇತರೆ ಗ್ರಾಮದಲ್ಲಿ ಇರುವ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಹೋಗಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ ಕೊರತೆ‌ ಎದುರಿಸುತ್ತಿದ್ದಾರೆ. ಕರಡೋಣ, ಗುಡದೂರು, ಉಮಳಿ ಕಾಟಾಪುರ, ಯತ್ನಟ್ಟಿ, ಬುನ್ನಟ್ಟಿ ಗ್ರಾಮದ ವಿದ್ಯಾರ್ಥಿಗಳು ದಿನಲೂ ಆರೇಳು ಕಿ.ಮೀ. ದೂರದ ಹಿರೇಖೇಡ ಪ್ರೌಢಶಾಲೆಗೆ ನಡೆದುಕೊಂಡು‌ ಹೋಗಬೇಕಾದ ಸ್ಥಿತಿಯಿದೆ.

ತಿಪ್ಪನಾಳ, ಸೂಳೇಕಲ್, ಮಲ್ಲಿಗೆವಾಡ, ಬಸರಿಹಾಳ, ಬೈಲಕ್ಕುಂಪುರ, ಹೊಸಗುಡ್ಡ, ವರ್ನಖೇಡ್, ಆದಾಪುರ,‌ ವಡಕಿ, ಕನ್ನೇರಮಡಗು, ರಾಂಪುರ, ಇತರೆ ಗ್ರಾಮದ ವಿದ್ಯಾರ್ಥಿಗಳಿಗೂ ಈ ಸಮಸ್ಯೆ ತಪ್ಪಿಲ್ಲ. ಕುಕನೂರು ಭಾಗದಲ್ಲಿಯೂ

ರಸ್ತೆಯಲ್ಲಿ ಬರುವ ಖಾಸಗಿ, ದ್ವಿ ಚಕ್ರ ವಾಹನ ಸವಾರರನ್ನು ನಿಲ್ಲಿಸಿ ಕೆಲ ವಿದ್ಯಾರ್ಥಿಗಳು ಆಯಾ ಶಾಲೆ ತಲುಪುವ ದೃಶ್ಯಗಳು ನಿತ್ಯವೂ ಕಂಡು ಬರುತ್ತವೆ. ಸಮರ್ಪಕವಾದ ಬಸ್ ಓಡಾಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಹಾಗೂ ಮೊದಲ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಬಸ್ ಕೊರತೆಯಿಂದ ವಿದ್ಯಾರ್ಥಿಗಳು ವಿಶೇಷವಾಗಿ ಹೆಣ್ಣು ಮಕ್ಕಳನ್ನು ಪಿಯುಸಿ ಹಾಗೂ ಪದವಿ ಕಾಲೇಜುಗಳ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೆಲವರನ್ನು ಬೇರೆ ಊರಿಗೂ ಕಳುಹಿಸಲಾಗುತ್ತಿದೆ. ಕುಕನೂರು ಭಾಗದಲ್ಲಿ ಬಸ್‌ಗಳಿದ್ದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಮಯಕ್ಕೆ ಬಸ್ ಓಡಿಸಬೇಕಾಗಿದೆ.

ಮಕ್ಕಳ ಅನುಕೂಲಕ್ಕೆ ಹೆಚ್ಚುವರಿ ಬಸ್: ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ವಿವಿಧ ಬೇರೆ ಊರುಗಳಿಗೆ ಶಾಲೆ ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಸೌಲಭ್ಯವನ್ನು ಸ್ಥಳೀಯ ಸಾರಿಗೆ ಘಟಕ ಕಲ್ಪಿಸಿದೆ.

ವಿವಿಧ ಗ್ರಾಮಸ್ಥರ ಹಾಗೂ ಸಚಿವರ ಸೂಚನೆಯ ಮೇರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರೆಗ್ಯೂಲರ್ ಬಸ್ ಸಂಚಾರದ ಜೊತೆಗೆ ಹೆಚ್ಚುವರಿ ಬಸ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಕಾರಣದಿಂದ ಸದ್ಯ ಯಾವುದೇ ತೊಂದರೆ ಕಂಡು ಬಂದಿಲ್ಲ ಎಂದು ಘಟಕ ವ್ಯವಸ್ಥಾಪಕ ರಮೇಶ ಚಿಣಗಿ ತಿಳಿಸಿದ್ದಾರೆ.

’ಅಗತ್ಯವಿದ್ದರೆ ಹೆಚ್ಚುವರಿ ಬಸ್‌‘

ಕೊಪ್ಪಳ: ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಒಟ್ಟು ಬಸ್‌ಗಳ ಪೈಕಿ ಶೇ 60ರಷ್ಟು ಗ್ರಾಮೀಣ ಭಾಗಕ್ಕೆ ಮೀಸಲಾಗಿವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇರಕಲ್‌ಗಡ, ಬೇವೂರು, ಅಳವಂಡಿ, ಹನುಮಸಾಗರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಬಸ್‌ ಸಂಚಾರ ಹೆಚ್ಚಿಸಲಾಗಿದೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಂ. ಮುಲ್ಲಾ ತಿಳಿಸಿದರು.

‘ಕಾರಟಗಿ ಘಟಕ ವ್ಯವಸ್ಥಾಪಕರಿಗೆ ಹೇಳಿ ಅಲ್ಲಿ ಅಗತ್ಯ ಇರುವ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯ ಬೇರೆ ಯಾವುದೇ ಭಾಗದಿಂದ ಬೇಡಿಕೆ ಬಂದರೂ ಅನುಕೂಲ ಮಾಡಿಕೊಡಲಾಗುವುದು’ ಎಂದರು.

ಗೂಡ್ಸ್‌ ವಾಹನಗಳಲ್ಲಿ ವಿದ್ಯಾರ್ಥಿಗಳ ಓಡಾಟ

ಕಾರಟಗಿ: ಕಾರಟಗಿ ತಾಲ್ಲೂಕು ಕೇಂದ್ರವಾದರೂ ಒಂದೆರಡು ಕಚೇರಿ ಆರಂಭವಾಗಿರುವುದು ಬಿಟ್ಟರೆ ಬೇರೆಲ್ಲಾ ಭರವಸೆಯಲ್ಲೇ ಉಳಿದಿದೆ.

ಕಲಿಯುವ ಆಸಕ್ತಿ ಇರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಡೆದುಕೊಂಡು, ಗೂಡ್ಸ್‌ ವಾಹನದಲ್ಲಿ ಒಬ್ಬರ ಮೇಲೊಬ್ಬರು ಕುಳಿತು, ನಿಂತುಕೊಂಡು ಪ್ರಯಾಣಿಸುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಅನುಕೂಲಕರ ಸಮಯ ನೋಡದೇ ಒಂದು ಖಾಸಗಿ, ಸರ್ಕಾರಿ ಬಸ್‌ ಓಡಾಡುತ್ತವೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿಲ್ಲ.

ಜಿಲ್ಲೆಯ ವಿವಿಧ ಭಾಗದಿಂದ ನಾಗನಕಲ್‌ ಬಳಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ಗೆ ಬರುವ ವಿದ್ಯಾರ್ಥಿಗಳ ಸ್ಥಿತಿ ಶೋಚನಿಯ. ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಓಡಾಡುವ ಬೈಕ್ ಸವಾರರಿಗೆ ಕೈಚಾಚಿ ನಿಲ್ಲಿಸಿ, ಕಾಲೇಜ್‌ಗೆ ತೆರಳುವ ದೃಶ್ಯ ನಿತ್ಯವೂ ಕಾಣಬಹುದು. ಹಣ ನೀಡಿ, ಗೂಡ್ಸ್‌ ವಾಹನದಲ್ಲಿ ತೆರಳಬೇಕು ಇಲ್ಲವೇ ಪಾದಯಾತ್ರೆಯೇ ಗತಿ.

ನಾಗನಕಲ್, ಬೇವಿನಹಾಳ, ಬೇವಿನಹಾಳ ಕ್ರಾಸ್ (ಭುವನೇಶ್ವರಿ ನಗರ) ರಾಮನಗರ, ವಸುಂಧರ ನಗರ, ಪನ್ನಾಪುರ, ಬಸವಣ್ಣಕ್ಯಾಂಪ್, ಬೂದಗುಂಪಾ, ಯರಡೋಣ, ಕಿಂದಕ್ಯಾಂಪ್‌, ಮರ್ಲಾನಹಳ್ಲಿ, ಜೂರಟಗಿ, ಮಾರಿಕ್ಯಾಂಪ್‌, ಹುಳ್ಕಿಹಾಳ, ಹುಳ್ಕಿಹಾಳಕ್ಯಾಂಪ್‌ ಸಹಿತ ಅನೇಕ ಗ್ರಾಮಗಳಿಂದ ಪಟ್ಟಣದ ವಿವಿಧ ಶಾಲಾ, ಕಾಲೇಜಿಗೆ ಬರುತ್ತಾರೆ. ಅವರಿಗೂ ಅನುಕೂಲ ಕಲ್ಪಿಸಬೇಕಿದೆ. ನಗರ ಸಾರಿಗೆ ಮಾದರಿಯಲ್ಲಿ ಈ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿದರೆ ವಿದ್ಯಾರ್ಥಿಗಳು ನಿರಾಳರಾಗುತ್ತಾರೆ.

***

ಆದರ್ಶ ಶಾಲೆಗೆ ಹೋಗುವ ಮಕ್ಕಳಿಗೆ ಬಸ್‌ ಸಮಸ್ಯೆಯಾಗಿಲ್ಲ. ಎಲ್ಲರೂ ಎರಡೆರಡು ಬಸ್‌ ಕೇಳುತ್ತಾರೆ. ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ಪ್ರಯತ್ನಿಸಿದ್ದೇವೆ.
ಜಡೇಶ್, ವ್ಯವಸ್ಥಾಪಕ, ಕುಷ್ಟಗಿ ಘಟಕ

***

ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂದು ಗ್ರಾಮಾಂತರ ಪ್ರದೇಶಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಈಗ ಅಂತಹ ಸಮಸ್ಯೆಗಳೇನೂ ಇಲ್ಲ.
- ಶಿವರಾಜ್ ಪಾಟೀಲ, ಘಟಕ ವ್ಯವಸ್ಥಾಪಕ, ಕುಕನೂರು

***

ಪಕ್ಕದ ಗ್ರಾಮಗಳಿಂದ ಶಾಲಾ, ಕಾಲೇಜಿಗೆ ಹೋಗಿಬರುತ್ತಿದ್ದೇವೆ. ಬಸ್‌ ಕೊರತೆಯಿಂದ ಸಕಾಲದಲ್ಲಿ ಹೋಗಿ ಬರುವುದು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಲಿ.
ದ್ರಾಕ್ಷಾಯಿಣಿ, ವಿದ್ಯಾರ್ಥಿನಿ, ಹುಳ್ಕಿಯಾಳ

***

ಗೂಡ್ಸ್‌ ಗಾಡಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಓದಬೇಕಾದ ಪರಿಸ್ಥಿತಿಯಿದೆ. ಶಾಲಾ ಸಮಯಕ್ಕೆ ಹೆಚ್ಚುವರಿ ಬಸ್‌ಗಳನ್ನು ಬಿಟ್ಟರೆ ಅನುಕೂಲವಾಗುತ್ತದೆ.
ಹರ್ಷದ, ವಿದ್ಯಾರ್ಥಿ, ಕೆಪಿಎಸ್‌ ಶಾಲೆ, ಸೋಮನಾಳ

***

ತಳುವಗೇರಾದಿಂದ ಹನುಮಸಾಗರಕ್ಕೆ ಬಸ್‌ ಇಲ್ಲದ ಕಾರಣ ಶಾಲೆ ಬಿಟ್ಟ ನಂತರ ಮಕ್ಕಳ ಪರದಾಟ ಹೇಳತೀರದಷ್ಟಾಗಿರುತ್ತದೆ. ಬಸ್‌ ಬಂದರೂ ಶಾಲೆ ಬಿಟ್ಟ ನಂತರ ಬಹಳ ಹೊತ್ತಿಗೆ ಬರುತ್ತದೆ.
ಪರಶುರಾಮ, ತಳುವಗೇರಾ ಗ್ರಾಮಸ್ಥ

ಪೂರಕ ಮಾಹಿತಿ: ಎನ್‌. ವಿಜಯ,ನಾರಾಯಣರಾವ್‌ ಕುಲಕರ್ಣಿ, ಕೆ. ಮಲ್ಲಿಕಾರ್ಜುನ, ಮೆಹಬೂಬ್‌ಸಾಬ್‌ ಕನಕಗಿರಿ,ಜುನಸಾಬ ವಡ್ಡಟ್ಟಿ, ಮಂಜುನಾಥ ಎಸ್. ಅಂಗಡಿ, ಉಮಾಶಂಕರ ಹಿರೇಮಠ, ಕೆ. ಶರಣಬಸವ ನವಲಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT