ಸೋಮವಾರ, ಡಿಸೆಂಬರ್ 5, 2022
19 °C
ಕಲ್ಯಾಣ ಕರ್ನಾಟಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅವಕಾಶ ಪಡೆದ ಏಕೈಕ ಅಥ್ಲೀಟ್

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಕೊಪ್ಪಳದ ಸಚಿನ್

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ನಿಗದಿ ಪಡಿಸಿದ್ದಕ್ಕಿಂತಲೂ ಹೆಚ್ಚಿನ ಗುರಿ ಸಾಧನೆ ಮಾಡಿರುವ ಕೊಪ್ಪಳದ ಹ್ಯಾಮರ್‌ ಥ್ರೋ ಅಥ್ಲೀಟ್‌ ಸಚಿನ್‌ 37ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದು, ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ನ. 11ರಿಂದ 15ರ ತನಕ ನಡೆಯಲಿರುವ ಈ ಟೂರ್ನಿಯಲ್ಲಿ 20 ವರ್ಷದ ಒಳಗಿನವರ ವಿಭಾಗದಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ ಸಚಿನ್‌ ಹಾಗೂ ಬೆಂಗಳೂರಿನ ಡಿವೈಇಎಸ್‌ನ ಧೀರಜ್‌ ಆರ್‌. ಪೂಜಾರಿ ಅರ್ಹತೆ ಪಡೆದುಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅವಕಾಶ ಪಡೆದ ಏಕೈಕ ಅಥ್ಲೀಟ್ ಇವರಾಗಿದ್ದಾರೆ.

ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸಚಿನ್‌ 52.15 ಮೀಟರ್‌ ದೂರ ಹ್ಯಾಮರ್‌ ಎಸೆದು ಚಿನ್ನದ ಪದಕ ಗೆದ್ದಿದ್ದರು. ಇದೇ ಸಾಧನೆಯಿಂದಾಗಿ ಈಗ ರಾಷ್ಟ್ರೀಯ ಸ್ಪರ್ಧೆಗೆ ಅವಕಾಶ ಲಭಿಸಿದೆ. ಈ ವಿಭಾಗದ ಸ್ಪರ್ಧೆಯಲ್ಲಿ ಎಎಫ್‌ಐ 50 ಮೀಟರ್‌ ದೂರ ನಿಗದಿ ಮಾಡಿತ್ತು. 

ರಾಜ್ಯಮಟ್ಟದಲ್ಲಿ ಎಂಟು ಪದಕಗಳನ್ನು ಜಯಿಸಿರುವ ಸಚಿನ್‌ ಪಾಲ್ಗೊಳ್ಳುತ್ತಿರುವ ರಾಷ್ಟ್ರೀಯ ಮಟ್ಟದ ಐದನೇ ಕ್ರೀಡಾಕೂಟ ಇದಾಗಿದೆ. ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಗೆದ್ದುಕೊಂಡಿದ್ದಾರೆ. 16 ವರ್ಷದ ಒಳಗಿನವರ ವಿಭಾಗದಲ್ಲಿ 2018ರಲ್ಲಿ ಗುಂಟೂರಿನಲ್ಲಿ ಸ್ಪರ್ಧೆ, ಅದೇ ವರ್ಷ ರಾಯಾಪುರದಲ್ಲಿ ನಡೆದ ಯೂತ್‌ ಕ್ರೀಡಾಕೂಟ, ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಮತ್ತು ಖೇಲೊ ಇಂಡಿಯಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಪದಕ ಗೆಲ್ಲುವ ತವಕದಲ್ಲಿದ್ದಾರೆ.

ಕೊಪ್ಪಳದ ಎಂಎಚ್‌ಪಿಎಸ್‌ ಶಾಲೆಯಲ್ಲಿ ಓದಿರುವ ಸಚಿನ್‌, ಕಾಳಿದಾಸ ಶಾಲೆ ಮತ್ತು ಹ್ಯಾಟಿಯ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾರೆ. ಸದ್ಯಕ್ಕೆ ಹೂವಿನಹಡಗಲಿಯ ಜಿಬಿಆರ್‌ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇವರ ತಂದೆ ಯಶವಂತ ಕೂಲಿ ಕಾರ್ಮಿಕರು. ತಾಯಿ ರುಕ್ಕಮ್ಮ ಗೃಹಿಣಿ.

ಸೌಲಭ್ಯಗಳ ಕೊರತೆ ನಡುವೆಯೂ ಸಾಧನೆ: ಹ್ಯಾಮರ್‌ ಥ್ರೋ ಅಭ್ಯಾಸ ಮಾಡಲು ಬೇಕಾದ ಅಗತ್ಯ ಸೌಲಭ್ಯಗಳ ಕೊರತೆಯ ನಡುವೆಯೂ ಸಚಿನ್‌ ಸಾಧನೆ ಇಲ್ಲಿನ ಬೇರೆ ಅಥ್ಲೀಟ್‌ಗಳಿಗೂ ಪ್ರೇರಣೆಯಾಗಿದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಈ ಅಥ್ಲೀಟ್‌ಗೆ ನೆರವಿನ ಹಸ್ತ ಬೇಕಾಗಿದೆ.

‘ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಆಸೆಯಿದೆ. ಆದರೆ, ಆರ್ಥಿಕ ಸಮಸ್ಯೆ ಕಾಡುತ್ತಿದ್ದು, ಯಾರಾದರೂ ಪ್ರಾಯೋಜಕತ್ವ ನೀಡಿದರೆ ಎತ್ತರದ ಸಾಧನೆ ಮಾಡುವ ಸಾಮರ್ಥ್ಯವಿದೆ. ಅದಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಸಚಿನ್‌ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು