ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳ ಅಗ್ನಿಯಲಿ ಬೆಂದ ಬಂಡಾಯ ಸಾಹಿತಿ

ಗವಿಸಿದ್ಧ.ಎನ್.ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಮಾಲತಿ ಪಟ್ಟಣಶೆಟ್ಟಿ ಅಭಿಮತ
Last Updated 20 ಅಕ್ಟೋಬರ್ 2019, 13:40 IST
ಅಕ್ಷರ ಗಾತ್ರ

ಕೊಪ್ಪಳ: ಬಾಳ ಬೆಂಕಿಯಲ್ಲಿ ಬೆಂದ ಸಂವೇದನಶೀಲ ಕವಿ ಗವಿಸಿದ್ಧ ಬಳ್ಳಾರಿ ಅವರ 'ತಳಮಳ'ಗಳೇ ಇಂದು ಕವನವಾಗಿದೆ ಎಂದು ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಅವರು ನಗರದ ಶಿಕ್ಷಕರ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ' ಕವಿ ಗವಿಸಿದ್ಧ ಎನ್‌ ಬಳ್ಳಾರಿ ಸಾಹಿತ್ಯೋತ್ಸವ' ಉದ್ಘಾಟಿಸಿ ಮಾತನಾಡಿದರು.

ಕೋಪಣ ನಗರಿಯಲ್ಲಿ ತಮ್ಮ ಬಂಡಾಯ ಕವನಗಳ ಮೂಲಕ ಸಾಹಿತ್ಯಲೋಕದಲ್ಲಿ ಹೆಸರು ಮಾಡಿದ್ದರು. ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ್ದರೂ ವಿನಯತೆ, ಸರಳತೆಯಿಂದ ದೇವರು ನೀಡಿದ ಆಯುಷ್ಯದಲ್ಲಿಯೇ ಜೀವನವನ್ನು ಸಾರ್ಥಕಗೊಳಿಸಿಕೊಂಡರು. ಅವರ ಹೆಸರಿನಲ್ಲಿ ಸಾಹಿತ್ಯಾಭಿಮಾನಿಗಳು, ಅವರ ಮಕ್ಕಳು ಸಾಹಿತ್ಯೋತ್ಸವ ಹಮ್ಮಿಕೊಳ್ಳುವ ಮೂಲಕ ಸ್ಮರಣೀಯ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

70-80ರ ದಶಕದಲ್ಲಿ ಬಂಡಾಯ ಸಾಹಿತ್ಯದಲ್ಲಿ ದಂಡಿಯಾಗಿ ಬಂದ ಸಾಹಿತಿಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡರು. ಸಶಕ್ತ ಕಾವ್ಯಗಳ ಮೂಲಕ ಬದುಕಿನ ನೋವು, ನಲಿವು ಹಂಚಿಕೊಂಡರು. ಮಕ್ಕಳಿಗೆ ಹಾರಲುಕಲಿಸುವ ಮುನ್ನವೇ ಜವರಾಯನ ಸಮೀಪ ಹೋದ ಅವರು 'ನಾನು ನಗಬೇಕು, ಬದುಕಬೇಕಾದರೆ ನಗಲೇ ಬೇಕು, ಕತ್ತಲೆಯ ಕಳೆದ ನಿತ್ಯ ಹಗಲು' ಎಂಬ ಮನಮಿಡಿಯುವ ಕವನದ ಮೂಲಕ ಜೀವನಪ್ರೀತಿಯನ್ನು ಕಲಿಸಿದ ಮೇರು ಸಾಹಿತಿ ಎಂದು ಭಾವುಕವಾಗಿ ಹೇಳಿದರು.

ಗವಿಸಿದ್ಧ ಬಳ್ಳಾರಿ ಅವರ ಕವನ ವಾಚಿಸುವ ಮೂಲಕ ಸಭಿಕರನ್ನು ಕಾವ್ಯಲೋಕದಲ್ಲಿ ವಿಹರಿಸುವಂತೆ ಮಾಡಿದರು.

ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಮಾತನಾಡಿ, ಕವಿ ನಮ್ಮಿಂದ ದೂರವಾಗಬಹುದು. ಆದರೆ, ಕವಿ ಬರೆದ ಕವಿತೆಗಳಿಗೆ ಎಂದಿಗೂ ಕೂಡ ಸಾವಿಲ್ಲ. ಕವಿತೆಗಳೆ ಮನುಷ್ಯನನ್ನು ಚಿಂತನೆಗೆ ದೂಡುತ್ತೇವೆ. ಗವಿಸಿದ್ಧ ಪ್ರಾರಂಭದಿಂದಲೇ ಬಂಡಾಯ ಕವಿಯಾಗಿ ಸಮಾಜದಲ್ಲಿ ತನ್ನ ಹೆಗ್ಗುರುತನ್ನು ಹೊಂದಿದ್ದಾರೆ. ಅವರ ಕವಿತೆಗಳೆ ವಿಶಿಷ್ಟ ಹಾಗೂ ಚಿಂತನಾಶೀಲರ್ಹವಾಗಿವೆ ಎಂದರು.

ನಮ್ಮ ಇಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಮನೆ ಮೂರ್ಖರು, ಮನೆ ಹಾಳರು ಎಂಬ ಹೇಳಿಕೆ ನೀಡಿ ನಾಡಿನ ಹೆಸರಾಂತ ಕವಿಗಳಿಗೆ ಅಪಖ್ಯಾತಿ ತರುವಂತ ಕೆಲಸ ಮಾಡುತ್ತಿದ್ದಾರೆ. ಇವರಸಂಸ್ಕೃತಿಯನ್ನು ಎತ್ತಿ ತೋರಿಸುತ್ತೆ. ಕನ್ನಡ ಸಾಹಿತ್ಯ ಪರಿಷತ್ತಿನ ಪವಿತ್ರ ಕುರ್ಚಿಯನ್ನು ಇಂದು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ ಎಂದು ವಿಷಾದಿಸಿದರು.

ನಾಟಕಕಾರ ಸತೀಶ ಕುಲಕರ್ಣಿ,ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ.ಗೊಂಡಬಾಳ ಮಾತನಾಡಿದರು.

ಅಲ್ಲಮಪ್ರಭು ಬೆಟದೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಹಬೂಬ್ ಮಠದ ನಿರೂಪಿಸಿದರು. ಮಹೇಶ ಬಳ್ಳಾರಿ ವಂದಿಸಿದರು.

ಮಧ್ಯಾಹ್ನ ನಡೆದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಜಿಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ವಹಿಸಿದ್ದರು. ಲೋಹಿಯಾ ಪ್ರಕಾಶನದ ಸಿ.ಚೆನ್ನಬಸವಣ್ಣ ಆಶಯ ನುಡಿಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT