ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಠಡಿ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿ’

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ರಾಷ್ಟ್ರೀಯ ತರಬೇತಿ ಶಿಬಿರದ ವೇಳೆ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಉಳಿದುಕೊಳ್ಳುವ ಕೊಠಡಿಯ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ’ ಎಂದು ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ಸೋಮವಾರ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದೆ.

‘ಮೀರಾಬಾರಿ ಅವರು ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದ್ದಾರೆ. ಅವರನ್ನು ಡೋಪಿಂಗ್‌ ಪ್ರಕರಣದಲ್ಲಿ ಸಿಲುಕಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ಶಿಬಿರದ ವೇಳೆ ಮೀರಾ, ಸೇವಿಸುವ ಆಹಾರ ಮತ್ತು ಶಕ್ತಿವರ್ಧಕ ಪೇಯಗಳಲ್ಲಿ ಅಪರಿಚಿತರು ಉದ್ದೀಪನಾ ಮದ್ದು ಬೆರೆಸುವ ಸಾಧ್ಯತೆ ಇದೆ. ಹೀಗಾಗಿ ತರಬೇತಿ ಕೇಂದ್ರ, ಊಟದ ಕೊಠಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಮತ್ತು ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಮೀರಾ ಅವರೂ ಪತ್ರದ ಮುಖೇನ ಮನವಿ ಮಾಡಿಕೊಂಡಿದ್ದಾರೆ’ ಎಂದು ಐಡಬ್ಲ್ಯುಎಫ್‌ನ ಮಹಾ ಕಾರ್ಯದರ್ಶಿ ಸಹದೇವ್‌ ಯಾದವ್‌ ತಿಳಿಸಿದ್ದಾರೆ.

‘ಶಿಬಿರಕ್ಕೂ ಮುನ್ನ ತರಬೇತಿ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಸಚಿವಾಲಯದ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಸಹದೇವ್‌ ನುಡಿದಿದ್ದಾರೆ.

‘ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಶಿಬಿರ ಆಯೋಜನೆಯಾಗಿದೆ. ಅಲ್ಲಿ ಸರಿಯಾದ ಭದ್ರತೆ ಇಲ್ಲ. ಆದ್ದರಿಂದ ಅಪರಿಚಿತರು ಒಳಗೆ ನುಗ್ಗಿ ಅಥ್ಲೀಟ್‌ಗಳು ಸೇವಿಸುವ ಆಹಾರದಲ್ಲಿ ಉದ್ದೀಪನಾ ಮದ್ದು ಬೆರೆಸುವ ಅಪಾಯ ಇರುತ್ತದೆ.  ಹೀಗಾಗಿಯೇ ಮೀರಾ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕೋರಿದ್ದಾರೆ. ಅವರ ಮನವಿಯನ್ನು ಸಚಿವಾಲಯ ಪುರಸ್ಕರಿಸಬೇಕು’ ಎಂದು ರಾಷ್ಟ್ರೀಯ ತಂಡದ ಮುಖ್ಯ ಕೋಚ್‌ ವಿಜಯ್‌ ಶರ್ಮಾ ಹೇಳಿದ್ದಾರೆ.

ರಾಷ್ಟ್ರೀಯ ಶಿಬಿರ ಜೂನ್‌ 3ರಿಂದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT