ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಸಾಗರ: ಇಲ್ಲಿ ಎಲ್ಲರಿಗೂ ಉಚಿತ ಸಂಸ್ಕೃತ ಅಭ್ಯಾಸ

Last Updated 15 ಜನವರಿ 2022, 15:03 IST
ಅಕ್ಷರ ಗಾತ್ರ

ಹನುಮಸಾಗರ: ಸಂಸ್ಕೃತ ಭಾಷೆ ಎಂಬುದು ಒಂದು ಧರ್ಮ, ಸಮುದಾಯಕ್ಕೆ ಸೀಮಿತವಾದುದ‌ಲ್ಲ ಎಂಬ ಸಂದೇಶ ಎಲ್ಲರಿಗೂ ತಲುಪಬೇಕು ಎನ್ನುವಂತೆ ಹನುಮಸಾಗರದ ಜ್ಞಾನಾಯಿನಿ ಪಾಠಶಾಲೆಯಲ್ಲಿ ಎಲ್ಲರಿಗೂ ಉಚಿತವಾಗಿ ಸಂಸ್ಕೃತ ಭಾಷೆ ಕಲಿಸಲಾಗುತ್ತಿದೆ.

ಶಿಕ್ಷಕ ಪಂ.ಪ್ರಹ್ಲಾದಾಚಾರ್ಯ ಪೂಜಾರ ಎಲ್ಲ ಜನಾಂಗದ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸುತ್ತ ಮಾದರಿಯಾಗಿದ್ದಾರೆ. ಹಿಂದೂ, ಇಸ್ಲಾಂ ಧರ್ಮೀಯರು ಅಲ್ಲದೇ ವಿವಿಧ ಜಾತಿ, ಧರ್ಮದ ವಿದ್ಯಾರ್ಥಿಗಳು ಸಂಸ್ಕೃತ ಬರೆಯುತ್ತಾರೆ, ಓದುತ್ತಾರೆ. ಕೆಲವರು ಸುಲಲಿತವಾಗಿ ಮಾತನಾಡುತ್ತಾರೆ. ಮುಸ್ಕಾನ್, ಅಫ್ಸಾನಾ ನಾಲ್ಕಾರು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು, ಮುಸ್ಕಾನ ಈಗ ಸಂಸ್ಕೃತ ಉತ್ತಮವಾಗಿ ಮಾತನಾಡುತ್ತಾಳೆ.

‘ನಮ್ಮ ತಂದೆ ಪಂ.ಧೀರೇಂದ್ರಾಚಾರ ಪೂಜಾರ ವೆಂಕಟೇಶ ದೇವಸ್ಥಾನದ ಬೆಳಗಿನ ಪೂಜಾ ಕಾರ್ಯಗಳನ್ನು ಮುಗಿಸಿದ ನಂತರ ತಮ್ಮ ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಆಸಕ್ತರಿಗೆ ಸಂಸ್ಕೃತ ಅಭ್ಯಾಸ ಮಾಡಿಸುತ್ತಿದ್ದರು. ಇದೀಗ ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದು, ಪ್ರತಿ ದಿನ ಮೂರು ಅವಧಿಯಲ್ಲಿ ಉಚಿತವಾಗಿ ಸಂಸ್ಕೃತ ಅಭ್ಯಾಸ ಮಾಡಿಸಲಾಗುತ್ತಿದೆ’ ಎಂದು ಸಂಸ್ಕೃತ ಶಿಕ್ಷಕ ಪಂ.ಪ್ರಹ್ಲಾದಾಚಾರ್ಯ ಪೂಜಾರ ತಿಳಿಸಿದರು.

1995ರಲ್ಲಿ ಜ್ಞಾನದಾಯಿನಿ ಎಂಬ ಹೆಸರಿನಡಿ ಮನೆಯಲ್ಲಿ ಆರಂಭವಾದ ಈ ಪಾಠಶಾಲೆ ಈಗಲೂ ತಮ್ಮ ಮನೆಯ ಮುಂಭಾಗದಲ್ಲಿರುವ ಒಂದು ಹಾಲ್‍ನಲ್ಲಿ ವ್ಯಾಸಂಗ ನಡೆಯುತ್ತಿದೆ. ಪ್ರಥಮ 1, 2 ಹಾಗೂ 3ನೇ ವಿಭಾಗಕ್ಕೆ 130 ವಿದ್ಯಾರ್ಥಿಗಳು ಇದ್ದಾರೆ. ಕಾವ್ಯ 1 ಮತ್ತು 2 ವಿಭಾಗಕ್ಕೆ 35 ವಿದ್ಯಾರ್ಥಿಗಳು ಹಾಗೂ ಸಾಹಿತ್ಯ, ವಿದ್ವತ್ ವಿಭಾಗದಲ್ಲಿ 6 ವಿದ್ಯಾರ್ಥಿಗಳು ಇದ್ದಾರೆ.

ಇಲ್ಲಿ ವ್ಯಾಸಂಗ ಮಾಡಿದ ಬಳಿಕ ಸಮೀಪದಲ್ಲಿರುವ ರಾಜ್ಯ ಸರ್ಕಾರದಿಂದ ಅಧಿಕೃತಗೊಂಡಿರುವ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪರೀಕ್ಷೆ ಬರೆಯಿಸುತ್ತಾರೆ. ಇಲ್ಲಿಂದ ದೂರದ ಬೇರೆ ಕಾಲೇಜಿಗೆ ಹೋದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಅದು ಉಚಿತವಾಗಿಯೇ ವಾರಕ್ಕೆ 2 ಬಾರಿಯಂತೆ ಪಾಠ ಮಾಡುತ್ತಾರೆ.

2017ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದುಕೊಂಡು ವಿದ್ಯಾವಾರಿಧಿ ಎಂಬ ಹೆಸರಿನ ಖಾಸಗಿ ಶಾಲೆಯನ್ನು ಆರಂಭಿಸಿದ್ದರೂ ಇದುವರೆಗೂ ಯಾವ ವಿದ್ಯಾರ್ಥಿಯಿಂದ ಶುಲ್ಕ ಪಡೆದುಕೊಂಡಿಲ್ಲ. ಆದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ತುಂಬುತ್ತಾರೆ.

‘12ನೇ ವಯಸ್ಸಿನಿಂದ ಸಂಸ್ಕೃತ ಪ್ರಥಮ ಭಾಷೆ ಆರಂಭವಾಗುತ್ತದೆ, ಆದಾಗ್ಯೂ ಸಣ್ಣ ಮಕ್ಕಳೂ ಪಾಠಕ್ಕೆ ಬರುತ್ತಾರೆ. ಬಂದ ಮಕ್ಕಳಿಗೆ ಮೂಲಾಕ್ಷರ, ಸಣ್ಣ ಪದಗಳು, ವಾಕ್ಯಗಳು, ಸರಳ ವ್ಯಾಕರಣ ಬೋಧನೆ ಮಾಡುತ್ತಿದ್ದೇವೆ. ಶ್ರೀಮದುತ್ತರಾಧಿಮಠಾಧೀಶರಿಂದ ವಿದ್ಯೆ ಪಡೆದ ನಾನು ಅವರ ಅಪ್ಪಣೆಯಂತೆ ಸಾರ್ವಜನಿಕರಿಗೆ ಉಚಿತ ಅಭ್ಯಾಸ ಮಾಡಿಸುತ್ತಿದ್ದೇವೆ. ಇದು ನಮ್ಮ ಗುರುಗಳ ಕೃಪೆ’ ಎಂದು ಪಂ.ಧಿರೇಂದ್ರಾಚಾರ ಪೂಜಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT