ಶೀಘ್ರ ತಲೆ ಎತ್ತಲಿದೆಯೇ ವಿಜ್ಞಾನ ಕೇಂದ್ರ..?

7
ವೈಜ್ಞಾನಿಕ ಜಾಗೃತಿ ಕೇಂದ್ರ ಶೀಘ್ರ ಪೂರ್ಣಗೊಳ್ಳಲಿ: ವಿಜ್ಞಾನ ಶಿಕ್ಷಕರ ಆಶಯ

ಶೀಘ್ರ ತಲೆ ಎತ್ತಲಿದೆಯೇ ವಿಜ್ಞಾನ ಕೇಂದ್ರ..?

Published:
Updated:
Prajavani

ಕೊಪ್ಪಳ: ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ವಿಜ್ಞಾನ ಕೇಂದ್ರ ಫೆಬ್ರುವರಿ ತಿಂಗಳಲ್ಲಿ ಬಹುತೇಕ ಪೂರ್ಣಗೊಳ್ಳಲಿದ್ದು, ಮಕ್ಕಳ ವೈಜ್ಞಾನಿಕ ಜಾಗೃತಿಗೆ ಚಟುವಟಿಕೆ ಆರಂಭವಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಈ ವಿಜ್ಞಾನ ಕೇಂದ್ರ ಅಂದಾಜು 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಾಮಗಾರಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು, ಶೀಘ್ರ ಕೇಂದ್ರ ಪೂರ್ಣಗೊಳ್ಳಲಿ ಎಂಬುವುದೇ ಬಹುತೇಕ ವಿಜ್ಞಾನ ಶಿಕ್ಷಕರ ಆಗ್ರಹವಾಗಿದೆ.

ಹಿಂದುಳಿದ ಈ ಭಾಗದಲ್ಲಿ ವಿಜ್ಞಾನ ಕೇಂದ್ರ ಇಲ್ಲದ ಅಭಾವ ಅನೇಕರನ್ನು ಕಾಡುತ್ತಿತ್ತು. ರಾಜ್ಯ ವಿಜ್ಞಾನ ಪರಿಷತ್ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ ವಿವಿಧ ವೈಜ್ಞಾನಿಕ ಉಪಕರಣಗಳ ಪ್ರದರ್ಶನ ಮತ್ತು ವಿಜ್ಞಾನ ಚಟುವಟಿಕೆ ನಡೆಸಲು ಕೇಂದ್ರದ ಅವಶ್ಯಕತೆ ಹೆಚ್ಚಾಗಿತ್ತು.

ವಿಜ್ಞಾನ ಪರಿಷತ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರಿಗೆ ವಿಜ್ಞಾನ ಸಮಿತಿ ಪರಿಷತ್ ಸದಸ್ಯರು ಈಚೆಗೆ ಕೇಂದ್ರದ ಆರಂಭದ ಕುರಿತು ಅವರ ಗಮನ ಸೆಳೆದಿದ್ದರು. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಕೂಡಾ ಗಮನಕ್ಕೆ ಬಂದಿದ್ದು, ಕೇಂದ್ರದ ಚಟುವಟಿಕೆ ಕುರಿತು ಶೀಘ್ರ ಸಭೆ ನಡೆಸಿ ಮಾದರಿ ಕೇಂದ್ರ ಹೇಗಿರಬೇಕು ಎಂಬ ಸಭೆಯನ್ನು ಕರೆದು ನಿರ್ಧರಿಸಿರುವುದಾಗಿ ಹೇಳಿದ್ದರು.

ತಹಶೀಲ್ದಾರ್ ಕಚೇರಿ ಆವರಣದಲ್ಲಿ 100 ಮೀಟರ್ ಉದ್ದ, 30 ಮೀಟರ್ ಅಗಲದಲ್ಲಿ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ₹ 1.25 ಕೋಟಿ ವೆಚ್ಚದಲ್ಲಿ ಕಟ್ಟಡ, ಆವರಣ ಗೋಡೆ ನಿರ್ಮಾಣಕ್ಕೆ ₹ 22 ಲಕ್ಷ ಹಣ ಬಿಡುಗಡೆಯಾಗಿದೆ. ಕಟ್ಟಡದ ಕಾಮಗಾರಿ ಬಹುತೇಕ ಮುಗಿದಿದ್ದು, ಒಳಾಂಗಣ ಅಲಂಕಾರ ಇನ್ನೂ ಬಾಕಿ ಇದೆ. ಅಲ್ಲದೆ ಉದ್ಯಾನ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.

ಒಳಾಂಗಣಕ್ಕೆ ಸುಣ್ಣ-ಬಣ್ಣ ಹಚ್ಚುವ ಕೆಲಸ ಇನ್ನೂ ನಡೆದಿಲ್ಲ. ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಅಲಂಕಾರ ಮಾಡಿ ನೀಡಲಾಗುತ್ತದೆ. ಮೊದಲೇ ಪೇಂಟಿಂಗ್ ಮಾಡಿದರೆ ಹಾಳಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಂತಿಮ ಹಂತದಲ್ಲಿ ಅಲಂಕಾರ ಮಾಡಲಾಗುವುದು ಎಂದು ಮಂಡಳಿ ಎಂಜಿನಿಯರ್ ಶಿವಾನಂದ ಗಾಳಿ ಮಾಹಿತಿ ನೀಡಿದ್ದಾರೆ.

ಮಾದರಿ ವಿಜ್ಞಾನ ಕೇಂದ್ರವಾಗಲಿ: ಭೌತಿಕ ಕಟ್ಟಡವನ್ನು ನಿರ್ಮಿಸಬಹುದು. ಆದರೆ ವಿಜ್ಞಾನ ಚಟುವಟಿಕೆಗೆ ಪೂರಕವಾಗುವ ಉಪಕರಣಗಳ ವ್ಯವ್ಯಸ್ಥೆ, ಮಾಹಿತಿ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು. ಮಕ್ಕಳಲ್ಲಿ ಮೂಡುವ ಪ್ರಶ್ನೆಗೆ ವಿಜ್ಞಾನ ಉತ್ತರ ನೀಡುವಂತಹ ಮಾದರಿ ಕೇಂದ್ರ ನಿರ್ಮಾಣವಾಗಲಿ ಎಂಬುವುದು ವಿಜ್ಞಾನ ಶಿಕ್ಷಕರ ಅಭಿಮತವಾಗಿದೆ.

ಕಲಬುರ್ಗಿ ವಿಭಾಗ ಕೇಂದ್ರದಲ್ಲಿ ಇರುವ ವಿಜ್ಞಾನ ಕೇಂದ್ರ ಮಾದರಿಯಾಗಿದ್ದು, ಅನೇಕ ವಿಜ್ಞಾನ ಪ್ರದರ್ಶನಗಳ ಮೂಲಕ ಗುರುತಿಸಿಕೊಂಡಿದೆ. ಅದೇ ರೀತಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರ ಮಾದರಿ ಕೇಂದ್ರವಾಗಿ ರೂಪಗೊಳ್ಳಲಿದೆ ಎನ್ನುತ್ತಾರೆ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ದಾದ್ಮಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !