ಶನಿವಾರ, ಜೂನ್ 12, 2021
24 °C
ಸ್ಮಾರಕಗಳ ಊರಿನ ಸೃಜನಶೀಲ ಚಿತ್ರಕಲಾ ಶಿಕ್ಷಕ ಯಲ್ಲಪ್ಪ

ಶಾಲೆಗೆ ಬಣ್ಣದ ಚಿತ್ತಾರಗಳ ಮೆರುಗು

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮನುಷ್ಯರ ಸೃಜನಶೀಲ ಹವ್ಯಾಸಗಳಲ್ಲಿ ಚಿತ್ರಕಲೆಯೂ ಒಂದು. ಮಕ್ಕಳ ಮನೋವಿಕಾಸಕ್ಕೆ ಚಿತ್ರಗಳೇ ಮಾಧ್ಯಮ. ಅಂಥ ಕಲೆಯನ್ನು ಸಿದ್ಧಿಸಿಕೊಂಡವರು ಅಪರೂಪ. ಶಾಲಾ ಶಿಕ್ಷಕರು ಚಿತ್ರಕಲಾವಿದರಾಗಿದ್ದರೆ ಕಲಿಕೆಯಲ್ಲಿ ಅದು ಪ್ರಭಾವ ಬೀರುತ್ತದೆ ಎಂಬುವುದನ್ನು ಶಿಕ್ಷಕರೊಬ್ಬರು ಮಾಡಿ ತೋರಿಸಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿಯವರಾದ ಯಲ್ಲಪ್ಪ ಎಂ, ಅಲ್ಲಿನ ಸ್ಮಾಕರಗಳು, ಐಹೊಳೆ ಪಟ್ಟದಕಲ್ಲಿನ ಶಿಲ್ಪ ವೈಭವವನ್ನು ಬಾಲ್ಯದಲ್ಲಿಯೇ ಕಣ್ತುಂಬಿಕೊಂಡು ಹವ್ಯಾಸವಾಗಿ ಮಾಡಿಕೊಂಡು ನಂತರ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ಚಿತ್ರಕಲಾ ಶಿಕ್ಷಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಸದ್ಯ ಭಾಗ್ಯನಗರ ಸರ್ಕಾರಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಕೈಚಳಕದ ಮೂಲಕ ಶಾಲೆಯನ್ನು ಇನ್ನಷ್ಟು ಅಂದವಾಗಿಸುವಲ್ಲಿ ಶ್ರಮಿಸಿದ್ದಾರೆ. ಕುಂಚಗಳೊಂದಿಗೆ ಮಕ್ಕಳ ಮನಸ್ಸು ಗೆದ್ದಿರುವ ಅವರು ಚಿತ್ರಗಳನ್ನು ರಚಿಸುವಲ್ಲಿ ಸಿದ್ಧ ಹಸ್ತರು. ಶಾಲೆಯ ಗೋಡೆಯ ಮೇಲೆ ಪಶು, ಪಕ್ಷಿ, ಪ್ರಾಣಿ, ಸ್ಮಾರಕ, ರಾಷ್ಟ್ರೀಯ ನಾಯಕರು ಸೇರಿದಂತೆ ಕಲೆಯ ವಿವಿಧ ಪ್ರಕಾರಗಳನ್ನು ಬರೆದು ಅದಕ್ಕೆ ಹೆಚ್ಚಿನ ಮೌಲ್ಯವನ್ನು ತಂದು ಕೊಟ್ಟಿದ್ದಾರೆ.

ಬಡ ಮತ್ತು ರೈತ ಕುಟುಂಬದಲ್ಲಿ ಜನಿಸಿದ ಅವರು ಬಾದಾಮಿಯ ‘ಚಾಲುಕ್ಯ ಚಿತ್ರ ಕಲಾ ಮಂದಿರ’ದಲ್ಲಿ ಚಿತ್ರಕಲೆಯಲ್ಲಿ ಡಿ.ಎಂ.ಸಿ. ಪದವಿ ಮುಗಿಸಿ ಉದ್ಯೋಗಕ್ಕೆ ಅಲೆಯುತ್ತಿದ್ದಾಗ ಪೊಲೀಸ್‌ ನೌಕರಿ ದೊರೆಯಿತು. ಆ ನೌಕರಿಯಲ್ಲಿಯೇ ಕಲೆಯನ್ನು ಮುಂದುವರಿಸಿಕೊಂಡು ಹೋದರು. ಒತ್ತಡ ಮತ್ತು ಕಾರ್ಯಾರಂಭದಿಂದ ತಾವು ಕಲಿತ ವಿದ್ಯೆಗೆ ಇದು ಸರಿ ಹೊಂದುವುದಿಲ್ಲ ಎಂದು ಸರ್ಕಾರಿ ಶಾಲಾ ಶಿಕ್ಷಕರಾಗಿ ನೇಮಕ ಹೊಂದಿದರು.

ಕೊಪ್ಪಳದ ಶಾಸಕರ ಮಾದರಿ ಸರ್ಕಾರಿ ಶಾಲೆಯಲ್ಲಿ 10 ವರ್ಷ ಚಿತ್ರಕಲಾ ಶಿಕ್ಷಕರಾಗಿ ಮಕ್ಕಳ ಮನಸ್ಸನ್ನು ಗೆದ್ದರು. ಅಲ್ಲದೆ ಇಲಾಖೆಯ ಅಭ್ಯಾಸ ಪುಸ್ತಕಗಳು, ನಲಿ–ಕಲಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಆಕರ್ಷಕ ಚಿತ್ರ ಬಿಡಿಸಿ ಸೈ ಎನಿಸಿಕೊಂಡರು. 

‘ಚಿತ್ರಕಲೆಯು ಮಕ್ಕಳ ಮನಸ್ಸನ್ನು ಅರಳಿಸಿ ಕಲಿಕೆಗೆ ಪ್ರಚೋದಿಸುತ್ತದೆ. ಬರೀ ಪಾಠ-ಪ್ರವಚನ ಕೇಳಿ ಬೇಸತ್ತ ಮಕ್ಕಳು ನನ್ನ ತರಗತಿ ಎಂದರೆ ಅತ್ಯಂತ ಸಂತಸದಿಂದ ಇರುತ್ತಿದ್ದರು. ಬಣ್ಣಗಳ ಆಕರ್ಷಣೆ, ಚಿತ್ತಾರದ ಚಮತ್ಕಾರವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಅನೇಕ ಮಕ್ಕಳು ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿ ಪ್ರತಿಭಾ ಕಾರಂಜಿಯಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದಿರುವುದು ನನ್ನಲ್ಲಿ ಸಾರ್ಥಕತೆ ಮೂಡಿಸಿದೆ’ ಎಂದು ಅಭಿಮಾನದಿಂದ ಹೇಳುತ್ತಾರೆ.

ವಿವಿಧ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ಅವರು ಬಹುಮಾನ ಪಡೆದಿದ್ದಾರೆ. ಶಿಕ್ಷಕರ ಸಹಪಠ್ಯ ಚಟುವಟಿಕೆಯ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

‘ಅವರು ರಚಿಸಿದ ಹಂಪಿಯ ಕಲ್ಲಿನ ರಥ, ವಿಜಯವಿಠ್ಠಲ ದೇವಾಲಯ, ದೇವಾಲಯದ ಚಕ್ರವರ್ತಿ ಎಂದೇ ಹೆಸರಾದ ಐಹೊಳೆ, ಪಟ್ಟದಕಲ್ಲಿನ ದೇವಾಲಯಗಳು, ನಿಸರ್ಗ ಚಿತ್ರಗಳು ರಾಷ್ಟ್ರೀಯ ಹಬ್ಬಗಳಂದು ಸರ್ಕಾರದ ವತಿಯಿಂದ ಪ್ರದರ್ಶನಗೊಂಡು ಅವರ ಕಲೆಗೆ ಮೆಚ್ಚುಗೆ ವ್ಯಕ್ತವಾಗಿವೆ' ಎಂದು ಶಿಕ್ಷಕ ಪ್ರಾಣೇಶ ಪೂಜಾರ್ ಹೆಮ್ಮೆಯಿಂದ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.