ಶಾಲಾ ಸಮವಸ್ತ್ರದಲ್ಲೇ ಜನ್ಮನೀಡಿದ ವಿದ್ಯಾರ್ಥಿನಿ

7
ಬಾಲ್ಯ ವಿವಾಹಕ್ಕೊಳಗಾಗಿದ್ದ ಬಾಲಕಿ

ಶಾಲಾ ಸಮವಸ್ತ್ರದಲ್ಲೇ ಜನ್ಮನೀಡಿದ ವಿದ್ಯಾರ್ಥಿನಿ

Published:
Updated:

ಕುಷ್ಟಗಿ (ಕೊಪ್ಪಳ): ಶಾಲಾ ಸಮವಸ್ತ್ರದಲ್ಲಿಯೇ ಅವಧಿಪೂರ್ವ ಗಂಡುಮಗುವಿಗೆ ಜನ್ಮನೀಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ, ಹೆರಿಗೆ ನಂತರ ನವಜಾತ ಶಿಶುವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಲು ಯತ್ನಿಸಿರುವುದು ಶನಿವಾರ ಬೆಳಕಿಗೆ ಬಂದಿದೆ.

ಕುಷ್ಟಗಿ ಪೊಲೀಸ್‌ ಠಾಣೆಯ ಸಿಬ್ಬಂದಿ ವಿಶ್ರಾಂತಿ ಕೊಠಡಿಯ ಹಿಂಭಾಗದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದಾಗ ಹೆರಿಗೆಯಾಗಿದೆ. ನಂತರ ಬಾಲಕಿ ಅಲ್ಲಿಂದ ಅವಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ತೆರಳಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸುತ್ತಿದ್ದಾಗ ಟಂಟಂ ವಾಹನದಲ್ಲಿ ಶಾಲಾ ಬಿಳಿ ಸಮವಸ್ತ್ರದಲ್ಲಿದ್ದ ಬಾಲಕಿಯು ರಕ್ತಸಿಕ್ತ ಬಟ್ಟೆಯನ್ನು ಸುತ್ತಿಕೊಂಡು ಕುಳಿತಿದ್ದು ಗಮನಕ್ಕೆ ಬಂದಿದೆ. ವಿಚಾರಿಸಿದಾಗ ಬಾಲಕಿ ಸ್ವಗ್ರಾಮ ತಾಲ್ಲೂಕಿನ ವಣಗೇರಿ ಗ್ರಾಮಕ್ಕೆ ತರಾತುರಿಯಲ್ಲಿ ತೆರಳುತ್ತಿದ್ದುದು ತಿಳಿಯಿತು. ಆದರೆ, ಆಕೆಯನ್ನು ಹೋಗಲು ಬಿಡದ ಪೊಲೀಸರು ಬಲವಂತವಾಗಿ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು.

ಬಾಲಕಿಯ ಜತೆಗೆ ಶಿಶುವನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಗು ಕೆಲ ಸಮಯದ ನಂತರ ಅಸುನೀಗಿತು. ಆದರೆ, ಬಾಲಕಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯದಿಂದ ಇದ್ದಾಳೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಮಂತ್ರಿ ತಿಳಿಸಿದ್ದಾರೆ.

ಆಗಿದ್ದೇನು: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಈ ಬಾಲಕಿಗೆ ಮೂರು ವರ್ಷಗಳ ಹಿಂದೆ ವಿವಾಹ ಮಾಡಲಾಗಿತ್ತು. ಆದರೆ ಮನೆಯವರು ಆಕೆಯನ್ನು ಗಂಡನ ಮನೆಗೆ ಕಳುಹಿಸಿರಲಿಲ್ಲ. ಬಾಲಕಿಯ ಪತಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ನಂತರ ಆಕೆ ಗರ್ಭಧರಿಸಿ ಐದಾರು ತಿಂಗಳಾದರೂ ಪಾಲಕರಿಗೆ ತಿಳಿಸದೆ ಗೋಪ್ಯವಾಗಿರಿಸಿದ್ದಳು ಎನ್ನಲಾಗಿದೆ.

ಬಾಲಕಿಯು ಸ್ವತಃ ಗರ್ಭಪಾತಕ್ಕೆ ಪ್ರಯತ್ನಿಸಿದ್ದು ಅದಕ್ಕೆ ಸಂಬಂಧಿಸಿದ ಔಷಧಗಳನ್ನು ಸೇವಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ನಂತರ ಈ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾರೆ.

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !