ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಕೋವಿಡ್‌ ನಂತರ ಶಾಲೆಗಳಲ್ಲಿ ಮಕ್ಕಳ ಕಲರವ

ಶೇ 100ರಷ್ಟು ಹಾಜರಾತಿಗೆ ಸತತ ಯತ್ನ: ಆಫ್‌ಲೈನ್‌, ಆನ್‌ಲೈನ್‌ ತರಗತಿಗೆ ಮುಕ್ತಿ
Last Updated 15 ನವೆಂಬರ್ 2021, 3:16 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಮತ್ತು ಲಾಕ್‌ಡೌನ್‌ ಸಂಕಷ್ಟದಿಂದ ಶಾಲೆಗಳು ಕನಿಷ್ಠ ಎರಡು ವರ್ಷ ಬಂದ್‌ ಆಗಿದ್ದು, ವಿವಿಧ ಆತಂಕಗಳ ಮಧ್ಯೆಯೇ ಭೌತಿಕ ತರಗತಿಗಳು ಆರಂಭಗೊಂಡಿವೆ.

ಎಲ್‌ಕೆಜಿಯಿಂದ ಪದವಿತರಗತಿಗಳು ಆರಂಭವಾಗಿದ್ದು, ಶೇ 80ರಷ್ಟು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಅಂಗನವಾಡಿಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸುವಲ್ಲಿ ಶಾಲಾ ಶಿಕ್ಷಕರು ನಿರತರಾಗಿದ್ದಾರೆ.

ಕೋವಿಡ್‌ ಕಾರಣದಿಂದ ಅಂದಾಜು ಒಂದೂವರೆ ವರ್ಷದ ಬಳಿಕ ಹಂತ ಹಂತವಾಗಿ ದ್ವಿತೀಯ ಪಿಯುಸಿಯಿಂದ ಪೂರ್ವ ಪ್ರಾಥಮಿಕ ಶಾಲೆವರೆಗೂ ಎಲ್ಲಾ ತರಗತಿಗಳನ್ನು ಆರಂಭಿಸಲಾಗಿದೆ. ಪೋಷಕರು ಮಕ್ಕಳನ್ನು ತರಗತಿಗಳಿಗೆ ಕಳುಹಿಸಲು ನಿಧಾನವಾಗಿ ಆರಂಭಿಸಿದ್ದು, ಮಾಸ್ಕ್‌ ಹಾಕಿ ಮಕ್ಕಳನ್ನು ಕಳುಹಿಸುವುದೇ ಹೊಸ ವ್ಯವಸ್ಥೆಯಾಗಿದೆ.

ಜಿಲ್ಲೆಯಲ್ಲಿ400ಕ್ಕೂ ಹೆಚ್ಚು ಪ್ರೌಢ ಶಾಲೆಗಳು ಹಾಗೂ 3,006 ಪ್ರಾಥಮಿಕ ಶಾಲೆಗಳಿದ್ದು, ಅ. 25ರಿಂದಲೇ 1ರಿಂದ 5ನೇ ತರಗತಿ ಶಾಲೆಗಳು ಆರಂಭವಾಗಿವೆ. ಇನ್ನೂ ನ. 2ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಜತೆಗೆ ಮಧ್ಯಾಹ್ನ ತರಗತಿ ಜತೆಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗಿದೆ.

ಗ್ರಾಮೀಣ ಭಾಗದ ಹಾಗೂ ಸರ್ಕಾರಿ ಶಾಲೆಯ ಮಕ್ಕಳು ಅನ್‌ ಲೈನ್‌ ತರಗತಿಗಳಲ್ಲಿ ಭಾಗವಹಿಸಿಲು ತೊಂದರೆಯಾಗಿತ್ತು. ಈ ಕಾರಣದಿಂದ ಬಹುತೇಕ ಮಕ್ಕಳು ಕಲಿತಿದ್ದನ್ನು ಮರೆತಿದ್ದಾರೆ. ಮಕ್ಕಳಲ್ಲಿ ಮತ್ತೆ ಸಾಮರ್ಥ್ಯ ತುಂಬುವ ಕೆಲಸ ಶಿಕ್ಷಕರು ಮಾಡುತ್ತಿದ್ದಾರೆ. ಪಠ್ಯದ ಜೊತೆಗೆ ಹಾಡು, ಕತೆ, ನೃತ್ಯ ಇತರೇ ಚಟುವಟಿಕೆಗಳ ಮೂಲಕ ಮಕ್ಕಳನ್ನು ಪಾಠದೆಡೆಗೆ ಆಕರ್ಷಿಸಲಾಗುತ್ತಿದೆ.

ವಿವಿಧತಾಲ್ಲೂಕಿನಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಬಸ್‌ನ ತೊಂದರೆ ಕೂಡಾ ಕಂಡು ಬಂದಿದೆ. ಕೆಲ ಮಕ್ಕಳು ನಡೆದುಕೊಂಡು ಹೋಗುವುದು, ಖಾಸಗಿ ವಾಹನಗಳಲ್ಲಿ ತುಂಬಿಕೊಂಡು ಹೋಗುವುದು ಗಮನಕ್ಕೆ ಬಂದಿದ್ದು, ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಮಕ್ಕಳ ಪೋಷಕರು ಹೇಳುತ್ತಾರೆ.

ಕೆಲ ಕಡೆ ಶಿಕ್ಷಕರ ಕೊರತೆ ಉಂಟಾಗಿರುವುದರಿಂದ ಅ ತಿಥಿ ಶಿಕ್ಷಕರನ್ನು ಸದ್ಯದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಶಾಲೆಗಳಿಗೆ ಅವಶ್ಯಕತೆ ಇರುವ ಕಡೆ ಗ್ರಾಮ ಪಂಚಾಯಿತಿ ವತಿಯಿಂದ ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಕೆಲ ಕಡೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಾಲೆಗೆ ಅಗತ್ಯ ಇರುವ ಸವಲತ್ತು ಒದಗಿಸಲಾಗುತ್ತಿದೆ.

‘ಶಾಲೆಗಳಲ್ಲಿ ಶೇ 98 ರಷ್ಟು ಹಾಜರಾತಿ ಇದ್ದು, ಥರ್ಮಲ್‌ ಸ್ಕ್ಯಾನರ್ ಮೂಲಕ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷಿಸಿ ತರಗತಿಗೆ ಕಳುಹಿಸಲಾಗುತ್ತದೆ’ ಎಂದುಸರ್ದಾರ್‌ ಗಲ್ಲಿ ಸರ್ಕಾರಿಶಾಲೆ ಮುಖ್ಯಶಿಕ್ಷಕ, ಹಾಗೂ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷಶರಣಬಸವನಗೌಡ ಪಾಟೀಲ ಹೇಳುತ್ತಾರೆ.

ಗಂಗಾವತಿ ತಾಲ್ಲೂಕಿನ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇ 100ರಷ್ಟು ಇದೆ. ಪೋಷಕರು ನಿರ್ಭಿತಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಮಕ್ಕಳು ಉತ್ಸಾಹದಿಂದ ಶಾಲೆಗಳಿಗೆ ಬರುತ್ತಿದ್ದಾರೆ. ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳು ಇನ್ನೂ ಪ್ರಾರಂಭವಾಗಿಲ್ಲ.

'ಕೆಲವು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಶಾಲಾ ಆವರಣ, ವರ್ಗ ಕೊಠಡಿ ನಿರ್ಮಾಣ, ಶೌಚಾಲಯ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಕಲ್ಯಾಣ ಕರ್ನಾಟಕ ಮಂಡಳಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶಾಲೆ ಮತ್ತು ಮಕ್ಕಳು, ಶಿಕ್ಷಕರ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲಿಂದ ಮೇಲೆ ಸಭೆ ನಡೆಸಲಾಗಿದೆ' ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಫೌಜೀಯಾ ತರುನ್ನುಮ್‌ ಅವರು ಸರ್ಕಾರಿ ಶಾಲೆಗಳ ಸುಧಾರಣೆಗೆ ಆಸಕ್ತಿ ವಹಿಸಿದ್ದು, ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ತಾವೇ ತರಗತಿಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ತಮ್ಮ ಆಸಕ್ತಿಯ ಬಗ್ಗೆ ಗಮನ ಸೆಳೆದಿದ್ದಾರೆ. ಪ್ರತಿ ವಾರದ ಒಂದು ಶಾಲೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಪರಿಶೀಲನೆಗೆ ಮೀಸಲಾಗಿಟ್ಟಿದ್ದಾರೆ. ಇದರಿಂದ ಶಿಕ್ಷಣ ಇಲಾಖೆ ಕೂಡಾ ಗಡಿಬಿಡಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿದೆ.

ಮೂರನೇ ಅಲೆ ದೂರವಾಗಿದ್ದರಿಂದ ಮಕ್ಕಳು ಮರಳಿ ಶಾಲೆಯತ್ತ ಉತ್ಸಾಹದಿಂದಲೇ ಬರುತ್ತಿದ್ದು, ಪೂರ್ಣಪ್ರಮಾಣದಲ್ಲಿ ಶಾಲೆಗಳು ಆರಂಭಕ್ಕೆ ಇನ್ನೂ ಕೆಲವು ವಾರ ಹಿಡಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT