ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹ ಕಲಾವಿದರಿಗೂ ದೊರಕದ ಸರ್ಕಾರದ ಸೌಲಭ್ಯ

ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಸಹಾಯಕತೆ
Last Updated 2 ಡಿಸೆಂಬರ್ 2020, 2:27 IST
ಅಕ್ಷರ ಗಾತ್ರ

ಕುಷ್ಟಗಿ: ಜಾನಪದ ಕ್ಷೇತ್ರ ಸಾಗರದಷ್ಟು ವಿಶಾಲವಾಗಿದೆ. ಕಲಾವಿದರ ಸಂಖ್ಯೆಯೂ ಅಷ್ಟೇ ಇದೆ. ಹಾಗಾಗಿ ಅನುದಾನದ ಕೊರತೆಯಿಂದ ಸರ್ಕಾರದಿಂದ ಕಲಾವಿದರಿಗೆ ಸೌಲಭ್ಯ ಹಾಗೂ ಮಾಸಾಶನ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ ಅಸಹಾಯಕತೆ ವ್ಯಕ್ತಪಡಿಸಿದರು.

ಅಕಾಡೆಮಿ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ‘ಸಮಕಾಲೀನ ಜಾನಪದ ಕಲಾವಿದರ ಸ್ಥಿತಿಗತಿ’ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಅಕಾಡೆಮಿಗೆ ನೀಡಿದ್ದ ₹ 2 ಕೋಟಿ ಅನುದಾನದ ಹಂಚಿಕೆ ವಿಚಾರದಲ್ಲಿ ಅನೇಕ ಗೊಂದಲಗಳು ಉಂಟಾದವು. ಅದರಿಂದ ಯಾವ ಕಲಾವಿದರಿಗೆ ಅನುಕೂಲ ಸಿಕ್ಕಿತೊ ಗೊತ್ತಾಗಲಿಲ್ಲ ಎಂದು ನೋವು ತೋಡಿಕೊಂಡರು.

ಎಲ್ಲರಿಗೂ ಪ್ರಶಸ್ತಿ ಕೊಡಲು ಸಾಧ್ಯವಾಗುವುದಿಲ್ಲ, ಎಲೆ ಮರೆಯ ಕಾಯಿಂತಿರುವ ಪ್ರಶಸ್ತಿ ವಂಚಿತ ಕಲಾವಿದರನ್ನು ಗುರುತಿಸಿ ಮುಂಬರುವ ದಿನಗಳಲ್ಲಿ ₹ 5,000 ನಗದು ಪುರಸ್ಕಾರ ದೊಂದಿಗೆ ಸನ್ಮಾನಿಸಲು ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ಮಾಸಾಶನಕ್ಕಾಗಿ ಅರ್ಹ ಕಲಾವಿದರಿಂದ ಬಹಳಷ್ಟು ಅರ್ಜಿಗಳು ಬರುತ್ತಿದ್ದರೂ ಎಲ್ಲರಿಗೂ ಮಾಸಾಶನ ಕೊಡಿಸಲು ಅಗುತ್ತಿಲ್ಲ. ಸಾವಿರಕ್ಕೂ ಅಧಿಕ ಕಲಾವಿದರ ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಿದರೂ ಕೇವಲ 150- 200 ಕಲಾವಿದರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ ಎಂದು ಹೇಳಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಯುವ ಜನಪದ ವಿದ್ವಾಂಸರನ್ನು ಗುರುತಿಸಿ ಅವರ ಜೀವನ ಚರಿತ್ರೆಯನ್ನು ಒಳಗೊಂಡ ದಾಖಲೆಯನ್ನು ಪ್ರಕಟಿಸುವ ಚಿಂತನೆ ಅಕಾಡೆಮಿಗೆ ಇದೆ ಎಂದು ವಿವರಿಸಿದರು.

ತೃತೀಯ ಲಿಂಗಿಯನ್ನು ಗುರುತಿಸಿ ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ದೇಶದಲ್ಲಿಯೇ ಕರ್ನಾಟಕ ರಾಜ್ಯ ಅಕಾಡೆಮಿ ಹೊಸ ಭಾಷ್ಯ ಬರೆದಿದೆ. ಕೆಳವರ್ಗದಿಂದ ಬಂದಿರುವ ತಮಗೆ ಕಲಾವಿದರ ಕಷ್ಟ, ನೋವಿನ ಅರಿವಿದೆ. ಹಾಗಾಗಿ ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಅಕಾಡೆಮಿ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿಯೂ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿದ್ದೇನೆ ಎಂದು ಹೇಳಿದರು.

ಜನಪದ ಕಲಾವಿದರ ಸವಾಲುಗಳು ವಿಷಯವಾಗಿ ಸಾಹಿತಿ ಪ್ರಮೋದ ತುರ್ವಿಹಾಳ, ಹೊಸ ತಲೆಮಾರಿನ ಜನಪದ ಕಲಾವಿದರ ಸಮಸ್ಯೆಗಳ ಕುರಿತು ಜನಪದ ತಜ್ಞ ಸಿ.ವಿ.ಜಡಿಯವರ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಆಕಳವಾಡಿ, ಜಾನಪದ ಅಕಾಡೆಮಿ ಸದಸ್ಯ ಚಂದ್ರಶೇಖರ ಲಿಂಗದಹಳ್ಳಿ ಇತರರು ಮಾತನಾಡಿದರು.

ಕಲಾವಿದರಾದ ವಾಲ್ಮೀಕಪ್ಪ ಯಕ್ಕರನಾಳ, ಶರಣಪ್ಪ ವಡಗೇರಿ, ಭೀಮಪ್ಪ ಪೂಜಾರ, ಕರವೇ ಜಿಲ್ಲಾ ಅಧ್ಯಕ್ಷ ಬಸನಗೌಡ ಪೊಲೀಸಪಾಟೀಲ, ರವೀಂದ್ರ ಬಾಕಳೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ ಹಿರೇಮಠ, ತಾಜುದ್ದೀನ ದಳಪತಿ, ಶರಣಪ್ಪ ಬನ್ನಿಗೋಳ, ಚೆನ್ನಪ್ಪ ಭಾವಿಮನಿ, ದೇವೇಂದ್ರಪ್ಪ ಕಮ್ಮಾರ, ಕೊಳ್ಳಪ್ಪ ಬೂದ, ಶುಕಮುನಿ ಗಡಗಿ ಇತರರು ಇದ್ದರು. ಶಿಕ್ಷಕ ಜೀವನಸಾಬ ವಾಲಿಕಾರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವೇದಿಕೆ ಭರ್ತಿಯಾಗಿದ್ದರೆ, ಕಲಾವಿದರು, ಸಾರ್ವಜನಿಕರು ಬೆರಳೆಣಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT