ಹಿರಿಯರ ಯೋಚನೆಗಳು ಸಮಾಜದ ಅಭಿವೃದ್ಧಿಗೆ ಪೂರಕ: ಜಿಲ್ಲಾ ಅಧಿಕಾರಿ ಕೆ.ಜಗದೀಶ

7
ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಕುಣಿದು ಕುಪ್ಪಳಿಸಿದ ಅಜ್ಜಂದಿರು

ಹಿರಿಯರ ಯೋಚನೆಗಳು ಸಮಾಜದ ಅಭಿವೃದ್ಧಿಗೆ ಪೂರಕ: ಜಿಲ್ಲಾ ಅಧಿಕಾರಿ ಕೆ.ಜಗದೀಶ

Published:
Updated:
Deccan Herald

ಕೊಪ್ಪಳ: ಜೀವನದಲ್ಲಿ ಸಾಕಷ್ಟು ಅನುಭವ ಪಡೆದಿರುವ ಹಿರಿಯರ ಯೋಚನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು, ಅವುಗಳನ್ನು ಹೊರತರಲು ಎಲ್ಲರೂ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಜಗದೀಶ ಹೇಳಿದರು. 

ನಗರದ ಸಾರ್ವಜನಿಕ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಆಶ್ರಯದಲ್ಲಿ  ನಡೆದ ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಹಿರಿಯ ನಾಗರಿಕರು ಸಮಾಜದ ಭಾಗವಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಿನ ನಂತರ ಹೊಸ ಜೀವನ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಅವರು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಹಾಗೂ ಅವರಲ್ಲಿ ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಇಲಾಖೆ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. 

ಅ.1 ರಂದು ನಡೆಯಲಿರುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪೂರ್ವಾಭಾವಿಯಾಗಿ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಆ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.

ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಮಾತನಾಡಿ, ನಿವೃತ್ತಿ ನಂತರ ಜೀವನವೇ ಮುಗಿಯಿತು ಎನ್ನುವುದು ಬೇಡ. 60 ವರ್ಷಗಳ ನಂತರ ಎಲ್ಲರೂ ಹಿರಿಯ ನಾಗರಿಕರೆ. ಅವರಿಗೆ ಪುನಶ್ಚೇತನ ನೀಡುವ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕು. ಆ ಮೂಲಕ ಅವರನ್ನು ಮಾನಸಿಕ, ದೈಹಿಕವಾಗಿ ಸದೃಢರನ್ನಾಗಿಸಬೇಕು ಎಂದರು. 

ವಯಸ್ಸಾದಂತೆ ಸಾಕಷ್ಟು ಬದಲಾವಣೆಗಳು ಎದುರಾಗುತ್ತವೆ. ಅಲಕ್ಷ್ಯ ಮಾಡದೆ ಅವುಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಆರೋಗ್ಯದಿಂದಿರಬೇಕು. ದೈಹಿಕ ಪರಿಶ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಜೀವನೋತ್ಸಾಹ ಬೆಳೆಸಿಕೊಳ್ಳಬೇಕು. ವೃಥಾಃ ಕಾಲಹರಣ ಮಾಡದೇ ಜೀವನದ ಅಭಿವೃದ್ಧಿ ಕುರಿತು ಚರ್ಚೆ, ವಿಚಾರಗಳಲ್ಲಿ ತೊಡಗಿಸಿಕೊಳ್ಳಿ. ಕಿರಿಯರಿಗೆ ಆ ಮೂಲಕ ದಾರಿದೀಪವಾಗಿ. ಅಂದಾಗ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು. 

ಹಿರಿಯ ನಾಗರಿಕರಲ್ಲೂ ಸಹ ಶಕ್ತಿ, ಸಾಕಷ್ಟು ಕ್ರಿಯಾಶೀಲತೆ ಇದೆ. ಸಮಾಜ ಅವನ್ನು ಗುರುತಿಸಬೇಕಿದೆ. ಕೆಲವರಿಗೆ ಸಂಸಾರ, ಕೆಲಸದ ನಡುವೆ ಆಸಕ್ತಿಗಳಲ್ಲಿ ಸಾಧನೆ ಮಾಡಲು ಸಮಯ ಸಿಕ್ಕಿರುವುದಿಲ್ಲ. ಅಂಥವರು ಈ ಮುಪ್ಪಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ನೀವು ಸತ್ತ ನಂತರವೂ ಜೀವಂತವಾಗಿರಬೇಕು ಅಂಥಹ ಸಾಧನೆ ಮಾಡಿ ಹೋಗಿ. ಗಾಂಧಿ, ನೆಹರೂ ಇದಕ್ಕೆ ಉದಾಹರಣೆ ಎಂದರು.

ಸಿದ್ಧೇಶ್ವರ ವಿದ್ಯಾಪೀಠದ ಶರಣೇಗೌಡ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಬಿ.ಎಫ್‌.ಬೀರಾನಾಯಕ, ಎಸ್‌.ಎಂ.ಗೋನಾಳ, ಬ್ರಹ್ಮಾನಂದ ಕಟ್ಟಿ, ಮಂಜುನಾಥ ಹೊಸ್ಕೇರಾ, ಈರಣ್ಣ ಕರೆಕುರಿ ಇದ್ದರು 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !