ಗುಳೆ ಹೋದ ಪಾಲಕರ ಮಕ್ಕಳ ಕಾಳಜಿ ಅಗತ್ಯ: ಚಂದ್ರಕಾಂತ ನಾಯ್ಕ

7
ಸೇತುಬಂಧ ಕಾರ್ಯಕ್ರಮ

ಗುಳೆ ಹೋದ ಪಾಲಕರ ಮಕ್ಕಳ ಕಾಳಜಿ ಅಗತ್ಯ: ಚಂದ್ರಕಾಂತ ನಾಯ್ಕ

Published:
Updated:
Prajavani

ಕೊಪ್ಪಳ: ಗುಳೆ ಹೋದ ಪಾಲಕರ ಮಕ್ಕಳ ಶಿಕ್ಷಣ, ಪಾಲನೆ ಮತ್ತು ಪೋಷಣೆಗೆ 6 ತಿಂಗಳ ಋತುಮಾನ ವಸತಿಯುತ ಸೇತುಬಂಧು ಕೇಂದ್ರ ಜಾರಿಯಾಗಿರುವುದು ಉತ್ತಮ ಬೆಳವಣಿಗೆ. ಆದರೆ ಇನ್ನುಳಿದ ಶಾಲೆಯ ಪಾಲಕರ 43 ಮಕ್ಕಳಿಗೆ ಈ ಯೋಜನೆಯನ್ನು ಶಿಕ್ಷಣ ಇಲಾಖೆ ವಿಸ್ತರಣೆ ಮಾಡಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಚಂದ್ರಕಾಂತ ನಾಯ್ಕ ಮನವಿ ಮಾಡಿದರು.

ಅವರು ತಾಲ್ಲೂಕಿನ ಕುಣಿಕೇರಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಭೀಮರಾವ್ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ 6ನೇ ಎಸ್.ಆರ್.ಎಸ್.ಟಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಾವಿರಾರು ಪಾಲಕರು ಬರಗಾಲದಿಂದ ತತ್ತರಿಸಿ ದುಡಿಮೆ ಹರಸಿ ಹೊರ ರಾಜ್ಯಕ್ಕೆ, ದೊಡ್ಡ ದೊಡ್ಡ ನಗರಕ್ಕೆ ಗುಳೆ ಹೋಗಿದ್ದು, ಆ ಪಾಲಕರ ಮಕ್ಕಳು ಇಂದು ಪಾಲನೆ ಪೋಷಣೆ ಇಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಸಮಸ್ಯೆ ನಿವಾರಣೆಗೆ ಸರ್ಕಾರ ಎಸ್.ಆರ್.ಎಸ್.ಟಿ ಕೇಂದ್ರವನ್ನು ಜಾರಿಗೆ ತಂದಿರುವುದು ಸಂತಸದ ವಿಷಯ ಎಂದು ಹೇಳಿದರು.

ಆದರೆ ಈ ಕೇಂದ್ರಗಳು ಅಕ್ಟೋಬರ್ ವೇಳೆಗೆ ಪ್ರಾರಂಭವಾಗಬೇಕಿತ್ತು. ಶಿಕ್ಷಣ ಇಲಾಖೆಯ ತಾತ್ಸಾರ ಭಾವದಿಂದ ಮಕ್ಕಳ ಮಾಹಿತಿಯನ್ನು ಅಪೂರ್ಣವಾಗಿ ರಾಜ್ಯ ಕಚೇರಿಗೆ ಸಲ್ಲಿಸಿದ್ದರ ಪರಿಣಾಮ ಇಂದು ಜಿಲ್ಲೆಯ ಗಂಗಾವತಿ ಮತ್ತು ಕುಷ್ಟಗಿ ತಾಲ್ಲೂಕು ಅನ್ನು ಹೊರತುಪಡಿಸಿ ಕಾರ್ಯಕ್ರಮ ಅನುಷ್ಟಾನವಾಗಿದ್ದು, ಜಿಲ್ಲೆಯ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು.

ಕುಣಿಕೇರಿ ತಾಂಡಾದಲ್ಲಿ ಬಹುತೇಕ 104 ಮಕ್ಕಳ ಪಾಲಕರು ಗುಳೆ ಹೋಗಿದ್ದು, ಶಿಕ್ಷಣ ಇಲಾಖೆಯು ಈ ಶಾಲೆಯ ಕೇವಲ 60 ಮಕ್ಕಳಿಗೆ ಈ ಯೋಜನೆಗೆ ಒಳಪಡಿಸಿರುವುದರಿಂದ ಇನ್ನೂಳಿದ 43 ಮಕ್ಕಳು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಕೂಡಲೇ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಸ್ಯೆ ನಿವಾರಿಸಿ ಇನ್ನುಳಿದ ಮಕ್ಕಳನ್ನು ಈ ಕಾರ್ಯತಂತ್ರದಡಿಯಲ್ಲಿ ಸೇರಿಸಿ ನ್ಯಾಯ ಒದಗಿಸಿಕೊಡಬೇಕು ಎಂದರು.

ಸಿ.ಆರ್.ಸಿ ಹನುಮಂತಪ್ಪ ಕೆ.ಆರ್ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ತಾಂಡಾಗಳಲ್ಲಿ ಮತ್ತು ಮಳೆಯಾಶ್ರಿತ ಪ್ರದೇಶದ ಜನರು ಗುಳೆ ಹೋಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕುಂಠಿತವಾಗಬಾರದು ಎಂದು ಇಲಾಖೆ ಯೋಜನೆ ಜಾರಿಗೊಳಿಸಿದ್ದು, ಸ್ವಯಂ ಸೇವಾ ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ. ಇಲಾಖೆಯ ಕೆಲವೊಂದು ತಾಂತ್ರಿಕ ಕಾರಣದಿಂದ ಕಾರ್ಯಕ್ರಮ ವಿಳಂಬವಾಗಿದ್ದು, ಸಮುದಾಯದ ಜನರು, ಮಕ್ಕಳು ಯೋಜನೆಯ ಸದ್ಬಳಕೆಗೆ ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಣಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರವಿಕುಮಾರ ಹ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ನೀಲಾಬಾಯಿ ನಾಗರಾಜ ಮಾಳಗಿ, ಪರಶುರಾಮ ಕಟ್ಟಿಮನಿ, ನಾಗರಾಜ ಬಳ್ಳೊಳ್ಳಿ, ಮುಖ್ಯಶಿಕ್ಷಕ ರಂಗನಾಥ ಪಾಟೀಲ, ರವಿ ಜಾತೋಟ, ಸಂತೋಷ ರಾಠೋಡ್, ಟಿ.ಕೆ ನಾಯಕ, ಸಹ ಶಿಕ್ಷಕ ಲೋಕಪ್ಪ ಹಡಸೂರ, ಆರ್.ರವಿ.ಗಂಗಾಧರ ಕೊಡೇಕಲ್, ಹೆಚ್.ತಿಪ್ಪೆಸ್ವಾಮಿ, ಬಸವರಾಜ ಪತ್ತಾರಿ, ಸಂಸ್ಥೆಯ ಅಧ್ಯಕ್ಷ ಡಾ.ಬಿ.ಜ್ಞಾನಸುಂದರ, ರಾಜಶೇಖರ ಮುಳಗುಂದ ಹಾಗೂ ಶಾಲಾ ಮಕ್ಕಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !