ಮಂಗಳವಾರ, ಏಪ್ರಿಲ್ 7, 2020
19 °C

ಶಿವಾಜಿ ಪೂರ್ವಜರು ಮೂಲತಃ ಕನ್ನಡಿಗರು: ಸಾಹಿತಿ ವಿಠ್ಠಪ್ಪ ಗೋರಂಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ‘ಹದಿನಾಲ್ಕನೇ ವಯಸ್ಸಿನಿಂದಲೇ ತನ್ನ ಶೌರ್ಯ, ಸಾಹಸ ಮತ್ತು ಪರಾಕ್ರಮಗಳಿಂದ ಶತ್ರುಗಳ ಎದೆ ನಡುಗಿಸಿದ್ದ ಛತ್ರಪತಿ ಶಿವಾಜಿ ಪೂರ್ವಜರು ಮೂಲತಃ ಕನ್ನಡಿಗರು. ಅವರ ವ್ಯಕ್ತಿತ್ವ ಕೇವಲ ದೇಶದಲ್ಲಷ್ಟೇ ಅಲ್ಲ ಸಾಗರದಾಚಿನ ನಾಡಿನವರೆಗೂ ಹಬ್ಬಿದೆ’ ಎಂದು ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಕ್ಷತ್ರಿಯ ಒಕ್ಕೂಟದ ತಾಲ್ಲೂಕು ಮತ್ತು ರಾಜ್ಯ ಘಟಕಗಳ ವತಿಯಿಂದ ಆಯೋಜಿಸಲಾಗಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಾಜಿ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಅವರ ಪರಾಕ್ರಮ, ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯ ಅಳವಡಿಸಿಕೊಳ್ಳಬೇಕು ಎಂದರು.

ಶಿವಾಜಿ ಮಹಾರಾಜ ಬದುಕಿದ್ದು ಕೇವಲ ಐವತ್ತು ವರ್ಷಗಳಾದರೂ 36 ವರ್ಷಗಳವರೆಗೂ ವೈರಿಗಳೊಂದಿಗೆ ಸೆಣಸಾಡಿದ್ದರು. ದೆಹಲಿ ಮತ್ತು ದಕ್ಷಿಣದ ತಂಜಾವೂರು, ತಿರುಚನಾಪಳ್ಳಿವರೆಗೂ ಸಾಮ್ರಾಜ್ಯ ವಿಸ್ತರಿಸಿದ್ದರು. ಯುವಕನಾಗಿರುವಾಗಲೇ ಯುದ್ಧದ ಮೂಲಕ ಅನೇಕ ರಾಜ್ಯಗಳನ್ನು ಗೆದ್ದ ಏಕೈಕ ವೀರ ಎಂದು ಹೇಳಿದರು.

ಶಿವಾಜಿಯವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದ ವಿಯೇಟ್ನಾಂ ದೇಶದ ಅಧ್ಯಕ್ಷ ತನ್ನ ಸಮಾಧಿಯ ಮೇಲೆ ಶಿವಾಜಿಯ ಶಿಷ್ಯ ಎಂದು ಬರೆಯಿಸಿಕೊಂಡಿದ್ದಾರೆ. ಭಾರತಕ್ಕೆ ಬಂದು ಮಹಾರಾಷ್ಟ್ರದಲ್ಲಿರುವ ಶಿವಾಜಿ ಅವರ ಸಮಾಧಿ ಮಣ್ಣನ್ನು ತೆಗೆದುಕೊಂಡು ಹೋಗಿದ್ದ ಅಲ್ಲಿಯ ವಿದೇಶಾಂಗ ಸಚಿವ ತಮ್ಮ ನೆಲದಲ್ಲಿ ಹಾಕಿ ಶಿವಾಜಿ ಅವರಂಥ ಮಕ್ಕಳು ತಮ್ಮ ದೇಶದಲ್ಲಿ ಹುಟ್ಟುತ್ತಾರೆ ಎಂದು ಹೇಳಿದ್ದನ್ನು ವಿಠ್ಠಪ್ಪ ನೆನಪಿಸಿದರು.

ಶಿವಾಜಿ ಅವರ ಪೂರ್ವಜರು ಮೂಲತಃ ಗದಗ ಜಿಲ್ಲೆ ಸೊರಟೂರು ಗ್ರಾಮದವರು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ವಿವರಿಸಿದರು.

ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ,‘ಶಿವಾಜಿ ಮಹಾರಾಜರು ಸೇರಿದಂತೆ ಎಲ್ಲ ದಾರ್ಶನಿಕರು, ಶರಣರು, ಸಂತರು, ಮಹಾತ್ಮರ ಜೀವನ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಕ್ಷತ್ರಿಯ ಒಕ್ಕೂಟದ ರಾಜ್ಯ ಯುವ ಘಟಕದ ಅಧ್ಯಕ್ಷ ಕೃಷ್ಣಾಸಾ ಧಲಬಂಜನ, ರವೀಂದ್ರಸಾ ಬಾಕಳೆ, ಮಂಜುನಾಥ ನಾಲಗಾರ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯ ನಾಯಕ, ಪ್ರಮುಖರಾದ ದೇವೇಂದ್ರಪ್ಪ ಬಳೂಟಗಿ, ಲಾಡ್ಲೇಮಷಾಕ್ ಯಲಬುರ್ಗಿ, ಲಕ್ಷ್ಮಣ ಗಂಡಗಾಳೇಕರ, ರಮೇಶ ಕಾಪ್ಸೆ, ಅಮೃತರಾಜ ಜ್ಞಾನಮೋಟೆ, ಪ್ರವೀಣ ಕಲಾಲ ಇದ್ದರು. ಎ.ವೈ.ಲೋಕರೆ ಸ್ವಾಗತಿಸಿದರು.

ಅದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಮಾಜಿ ಶಾಸಕ ಕೆ.ಶರಣಪ್ಪ ಚಾಲನೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)