ಶನಿವಾರ, ಡಿಸೆಂಬರ್ 3, 2022
26 °C

ಪರದೇಶಿ ಗಿರಾಕಿಯಾದ ಸಿದ್ದರಾಮಯ್ಯ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಬದಾಮಿಯಿಂದ ಗೆದ್ದರೂ ಈಗ ಆ ಕ್ಷೇತ್ರ ಬಿಟ್ಟು ಬೇರೆ ಕಡೆ ಕ್ಷೇತ್ರ ಹುಡುಕಾಟ ನಡೆಸುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರದೇಶಿ ಗಿರಾಕಿಯಂತೆ ಆಗಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಟೀಕಿಸಿದರು.

ನಗರದಲ್ಲಿ ಗುರುವಾರ ನಡೆದ ಎಸ್‌.ಟಿ. ಸಮಾವೇಶದ ಪೂರ್ವಭಾವಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ‘ಚಾಮುಂಡೇಶ್ವರ ಕ್ಷೇತ್ರದಿಂದ ಸೋತಿದ್ದ ಸಿದ್ದರಾಮಯ್ಯ ಬದಾಮಿಯಲ್ಲಿ ಗೆಲುವು ಪಡೆದಿದ್ದರು. ಈಗ ಮತ್ತೆ ಪರದೇಶಿ ಗಿರಾಕಿಯ ಹಾಗೆ ಕ್ಷೇತ್ರವನ್ನು ಹುಡುಕಿ ಅಲೆದಾಡುತ್ತಿದ್ದಾರೆ. ಸಿ.ಎಂ. ಆಗಿದ್ದ ವ್ಯಕ್ತಿಗೆ ಯಾವ ಕ್ಷೇತ್ರವೆಂಬುದೇ ಖಚಿತವಿಲ್ಲ. ಅವರು ಮೊದಲು ತಮ್ಮ ಕ್ಷೇತ್ರ ಯಾವುದು ಎನ್ನುವುದನ್ನು ಹೇಳಲಿ. ಬಳಿಕ ನನ್ನ ಕ್ಷೇತ್ರದ ಬಗ್ಗೆ ಹೇಳುವೆ’ ಎಂದರು.

‘ನನ್ನನ್ನು ಆರ್‌ಎಸ್‌ಎಸ್‌ ಗಿರಾಕಿ ಎನ್ನುವ ಸಿದ್ದರಾಮಯ್ಯ ಮೂಲತಃ ಯಾವ ಗಿರಾಕಿ? ಎಲ್ಲಿಂದ ಬಂದ ಗಿರಾಕಿ? ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಏನೇ ಏಳುಬೀಳುಗಳು ಕಂಡರೂ ಬಿಜೆಪಿಯಲ್ಲಿಯೇ ಇದ್ದೇನೆ. ಮುಖ್ಯಮಂತ್ರಿ ಆಗಿಯೇ ಬಿಟ್ಟೆ ಎನ್ನುವ ಭ್ರಮೆಯಲ್ಲಿರುವ ಸಿದ್ದರಾಮಯ್ಯಗೆ ಆ ಖುರ್ಚಿ ಖಾಲಿ ಇಲ್ಲ ಎನ್ನುವ ಸತ್ಯ ಗೊತ್ತಿಲ್ಲ. ಕಾಂಗ್ರೆಸ್‌ನವರದ್ದು ಯಾವಾಗಲೂ 50:50 ಫಾರ್ಮುಲಾ. ರಾಜ್ಯದ ಹಲವು ಜಿಲ್ಲೆಗಳನ್ನು ಸಿದ್ದರಾಮಯ್ಯ, ಇನ್ನರ್ಧ ಜಿಲ್ಲೆಗಳನ್ನು ಡಿ.ಕೆ. ಶಿವಕುಮಾರ್‌ ನೋಡಿಕೊಳ್ಳುತ್ತಿದ್ದಾರೆ. ಇವರೆಲ್ಲಾ ಬೈ ಟು ಗಿರಾಕಿಗಳು. ಬೈ ಟು ಗಿರಾಕಿಗಳಿಗೆ ಕುರ್ಚಿ ಖಾಲಿ ಇಲ್ಲ’ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸುತ್ತಾರೆ, ನೀವೂ ಅಲ್ಲಿ ಸ್ಪರ್ಧಿಸುವಿರೇ ಎನ್ನುವ ಪ್ರಶ್ನೆಗೆ ‘ಹಾಗೇನೂ ಇಲ್ಲ. ಅದನ್ನು ಪಕ್ಷ ತೀರ್ಮಾನಿಸುತ್ತದೆ. ಸಿದ್ದರಾಮಯ್ಯ ನನ್ನನ್ನು ಟೀಕಿಸಿದ್ದಷ್ಟೂ ನಮ್ಮ ಸಮಾಜದಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ಉತ್ತರ ಕೊಡುತ್ತಾರೆ‘ ಎಂದು ತಿರುಗೇಟು ನೀಡಿದರು.

‘ಅನೇಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬರುತ್ತಿದ್ದಾರೆ. ಕಾಂಗ್ರೆಸ್‌ನಿಂದ ದೇಶ ಹಾಗೂ ರಾಜ್ಯಕ್ಕೆ ಭವಿಷ್ಯವಿಲ್ಲ. ಈ ಸತ್ಯವನ್ನು ಅರಿತು ಎಲ್ಲರೂ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಆದ್ದರಿಂದ ಡಿ.ಕೆ. ಶಿವಕುಮಾರ್‌ ಪಕ್ಷ ಬಿಟ್ಟು ಹೋದವರನ್ನು ವಾಪಸ್‌ ಕರೆಯುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಜನ ಸಂಪೂರ್ಣವಾಗಿ ಆಶೀರ್ವಾದ ಮಾಡುತ್ತಾರೆ. 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಬಸವರಾಜ ಬೊಮ್ಮಾಯಿ ಅವರೇ ಮತ್ತೆ ಮುಖ್ಯಮಂತ್ರಿಯಾಗಿ ಆಗುತ್ತಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು