ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕೊಟ್ಟ ಮಸಾಲ ಮಜ್ಜಿಗೆ

ಬೇಸಿಗೆಯಲ್ಲಿ ಉತ್ತಮ ಆದಾಯ‘ ತಳ್ಳುಗಾಡಿಯಲ್ಲಿ ವ್ಯಾಪಾರ
Last Updated 6 ಮೇ 2018, 7:23 IST
ಅಕ್ಷರ ಗಾತ್ರ

ಸಿರುಗುಪ್ಪ: ಮಜ್ಜಿಗೆ ಮಾರಿ ಬರುವ ಆದಾಯದಲ್ಲಿಯೇ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮಸ್ತಾನ್‌ ಮನೆ ಮಾತಾಗಿದ್ದಾರೆ.

2ನೇ ವಾರ್ಡಿನ ನಿವಾಸಿ ಮಸ್ತಾನ್‌ ತಳ್ಳುಗಾಡಿಯಲ್ಲಿ ತಂಪಾದ ಮಜ್ಜಿಗೆಯನ್ನು ಸಿದ್ದಾಪಡಿಸಿಕೊಂಡು ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿ, ಜನರಿಗೆ ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಬಿಸಿಲಿನ ತಾಪ ಹೆಚ್ಚಾಗಿದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದನ್ನು ತಡೆಯಲು ಜನ ತಂಪುಪಾನೀಯಗಳ ಮೊರೆಹೋಗುವುದು ಸಾಮಾನ್ಯ. ಹೆಚ್ಚಿನ ಜನ ಮಡಕೆಗಳಲ್ಲಿನ ತಂಪಾದ ನೀರು, ಶರಬತ್ತು ಸೇರಿದಂತೆ ವಿವಿಧ ಕಂಪನಿಗಳ ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಕೆಲವರು ದೇಶೀಯವಾಗಿ ತಯಾರಾಗುವ ಮಜ್ಜಿಗೆಯನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ ಮಸ್ತಾನ್‌.

ಸಂಜೆ ತಾಲ್ಲೂಕಿನ ಇಬ್ರಾಂಪುರ ಗ್ರಾಮದ ರೈತರ ಮನೆಗಳಿಗೆ ತೆರಳಿ 20ರಿಂದ 30 ಲೀಟರ್ ಹಾಲು ಖರೀದಿಸಿ, ಮಡಿಕೆಯಲ್ಲಿ ಹೆಪ್ಪು ಹಾಕಿ ರುಚಿಕರವಾದ ಗಟ್ಟಿಮೊಸರು ಸಿದ್ಧಪಡಿಸುತ್ತಾರೆ. ಕೆನೆಭರಿತ ಮೊಸರಿನಿಂದ ತಯಾರಿಸಿದ ಮಜ್ಜಿಗೆಗೆ ಸ್ವಲ್ಪ ಮೆಣಸಿನಕಾಯಿ, ಹಸಿಶುಂಠಿ , ಬೊಳ್ಳುಳ್ಳಿ, ಕರಿಬೇವು, ಕೊತ್ತಂಬರಿ ಸೇರಿಸಿ ಒಗ್ಗರಣೆಯನ್ನು ಹಾಕುತ್ತಾರೆ. ಹೀಗೆ ಸಿದ್ಧವಾದ ಮಜ್ಜಿಗೆ ಬಲು ರುಚಿಕರ.

‘ತಳ್ಳುವ ಗಾಡಿಯಲ್ಲಿ ಮಡಕೆಗಳಲ್ಲಿ ಇಟ್ಟುಕೊಂಡು ತಂಪಾದ ಮಜ್ಜೆಗೆಯನ್ನು ಗ್ಲಾಸಿಗೆ ₹5ರಂತೆ 200 ಗ್ಲಾಸ್‌ಗಳ ವರೆಗೂ ಮಾರಾಟ ಮಾಡುತ್ತೇನೆ. ನಿತ್ಯವೂ ಹಾಲು ಹಾಗೂ ಮಜ್ಜಿಗೆ ತಯಾರಿಸುವ ವೆಚ್ಚ ನೀಗಿ ₹300ರಿಂದ ₹400ರ ವರೆಗೂ ಲಾಭ ದೊರೆಯುತ್ತದೆ, ಬಿಸಿಲು ಹೆಚ್ಚಾದಂತೆ ಮಜ್ಜಿಗೆಗೆ ಉತ್ತಮ ಬೇಡಿಕೆ ಇದೆ’ ಎನ್ನುತ್ತಾರೆ ಮಸ್ತಾನ್‌.

‘ಬೇಸಿಗೆಯಲ್ಲಿ ಬಾಯಾರಿಕೆ ಸಹಜ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳ ತಂಪಾದ ಪಾನೀಯ ಸೇವನೆಗಿಂತ ಸ್ಥಳಿಯವಾಗಿ ಲಭಿಸುವ ಈ ಮಜ್ಜಿಗೆ ರುಚಿಕರ’ ಎಂದು ಗ್ರಾಹಕ ರಫಿ ತಿಳಿಸಿದರು. ‘ಈ ಮಜ್ಜಿಗೆ ಸೇವಿಸುವುದರಿಂದ ದೇಹ ತಂಪಾಗುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ’ ಎನ್ನುತ್ತಾರೆ ಅವರು.
**
ರೈತರಿಂದಲೇ ಹಾಲು ಖರೀದಿ ಮಾಡುವೆ. ಕೆನೆಭರಿತ ಮೊಸರು ತಯಾರಿಸಿ ಮಸಾಲ ಮಜ್ಜಿಗೆ ಮಾಡಿ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸುತ್ತೇನೆ
- ಮಸ್ತಾನ್‌, ಮಜ್ಜಿಗೆ ವ್ಯಾಪಾರಿ
**

ಎಂ.ಬಸವರಾಜಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT