ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನೆಮ್ಮದಿ ಕಸಿದ ಬೆಲೆ ಏರಿಕೆ

ಅಂಕೆಯಿಲ್ಲದೇ ಏರುತ್ತಿರುವ ತೈಲೋತ್ಪನ್ನಗಳ ದರ; ₹ 100 ದಾಟಿದ ಡೀಸೆಲ್
Last Updated 21 ಅಕ್ಟೋಬರ್ 2021, 8:33 IST
ಅಕ್ಷರ ಗಾತ್ರ

ಕಲಬುರಗಿ: ತೈಲೋತ್ಪನ್ನಗಳ ಬೆಲೆಯ ಮೇಲೆ ಮೊದಲು ಇದ್ದ ನಿಯಂತ್ರಣವನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ನಿರಂತರವಾಗಿ ಏರಿಕೆ ಯಾಗುತ್ತಿದೆ. ಇದರ ಪರಿಣಾಮ ಬಡವರು, ಮಧ್ಯಮವರ್ಗದವರು ನೆಮ್ಮದಿಯ ಬದುಕು ಕಳೆದುಕೊಂಡಿದ್ದಾರೆ.

ಪೆಟ್ರೋಲ್ ದರ ₹ 110 ತಲುಪಿದ್ದರೆ, ಡೀಸೆಲ್ ಬೆಲೆ ₹ 100 ದಾಟಿದೆ. ಅಡುಗೆ ಅನಿಲ ಬೆಲೆ ₹ 950 ದಾಟಿದೆ. ಆದರೆ, ಜನರ ಆದಾಯ ಇದ್ದಷ್ಟೇ ಇದೆ. ಕೆಲವರ ಆದಾಯ ಲಾಕ್‌ಡೌನ್‌ ಕಾರಣದಿಂದ ಅರ್ಧಕ್ಕರ್ಧ ಕುಸಿದಿದೆ.

ಪತಿ, ಪತ್ನಿ, ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ಮನೆ ಬಾಡಿಗೆ, ಅಡುಗೆ ಅನಿಲ ಸಿಲಿಂಡರ್, ದಿನಸಿ ಸೇರಿ ಸುಮಾರು ₹ 15 ಸಾವಿರದಲ್ಲಿ ಇದ್ದುದರಲ್ಲೇ ಸಮಾಧಾನಕರ ಜೀವನ ನಡೆಸಬಹುದಿತ್ತು. ಆದರೆ, ಕೊರೊನಾ ಎರಡನೇ ಅಲೆ ಬಳಿಕ ಆದಾಯಕ್ಕೆ ಹೊಡೆತ ಬಿದ್ದಿದ್ದು, ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಬೆಲೆ ಏರಿಕೆ ಹೊಡೆತ ತಾಳಲಾ ರದೇ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಕಲಬುರಗಿಯಲ್ಲಿ ಓದಿಸುತ್ತಿದ್ದ ಜಿಲ್ಲೆಯ ವಿವಿಧ ತಾಲ್ಲೂಕಿನವರು ವಾಪಸ್‌ ತಮ್ಮ ಊರುಗಳನ್ನು ಸೇರಿರುವ ವಿದ್ಯಮಾನಗಳೂ ಜರುಗಿವೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ಅಡುಗೆ ಅನಿಲದ ಬೆಲೆ ₹ 205ರಷ್ಟು ಹೆಚ್ಚಳ ಕಂಡಿದೆ.

ಡೀಸೆಲ್ ಬೆಲೆ ಸರಾಸರಿ ₹ 30 ಹೆಚ್ಚಿದೆ. ಪೆಟ್ರೋಲ್ ದರವೂ ಇದೇ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಕೈಗೆಟುಕದಷ್ಟು ಹೆಚ್ಚಳ ಕಂಡಿದ್ದರೆ, ಕಟ್ಟಡ ನಿರ್ಮಾಣ ವಲಯವು ದುಬಾರಿ ಎನಿಸಿಕೊಂಡಿದೆ. ಜೀವನಪೂರ್ತಿ ದುಡಿದು ಉಳಿಸಿದ ದುಡ್ಡಿನಲ್ಲಿ ಒಂದು ಉತ್ತಮ ಮನೆಯನ್ನು ಕಟ್ಟಿಸಿಕೊಳ್ಳಬೇಕೆಂದರೂ ಆಗದಷ್ಟು ಪ್ರಮಾಣದಲ್ಲಿ ಸಿಮೆಂಟ್, ಕಬ್ಬಿಣ, ಮರಳಿನ ದರ ಏರಿಕೆ ಕಂಡಿದೆ. ಇದಕ್ಕೆ ಕಾರಣ ಮತ್ತೆ ಡೀಸೆಲ್ ದರವೇ ಹೆಚ್ಚಳ ಎನ್ನುತ್ತಾರೆ ಸಿವಿಲ್‌ ಎಂಜಿನಿಯರ್‌ಗಳು ಹಾಗೂ ವಾಸ್ತುಶಿಲ್ಪಿಗಳು.

ದಿನಸಿ ವಸ್ತುಗಳ ಬೆಲೆ ಏರಿಕೆ: ಜಿಲ್ಲೆಯ ಲ್ಲಿ ತೊಗರಿ ಹಾಗೂ ಸಿಮೆಂಟ್‌ ಹೊರತುಪಡಿಸಿ ಎಲ್ಲ ಅತ್ಯಗತ್ಯ ವಸ್ತುಗಳನ್ನು ಬೇರೆಡೆಯಿಂದ ಆಮದು ಮಾಡಿಕೊಳ್ಳಬೇಕು. ಅಪಾರ ಪ್ರಮಾಣದ ತಾಳೆ ಎಣ್ಣೆಯನ್ನು ಭಾರತವು ಇಂಡೋನೇಷ್ಯಾ ಹಾಗೂ ಮಲೇಷಿಯಾಗಳಿಂದ ತರಿಸಿಕೊಳ್ಳುತ್ತಿದೆ. ದೇಶದ ಪ್ರಮುಖ ಬಂದರುಗಳಿಗೆ ಬರುವ ತಾಳೆಣ್ಣೆಯನ್ನು ಆಯಾ ರಾಜ್ಯಗಳಿಗೆ ಸಾಗಿಸಲು ಭಾರತ ಸರ್ಕಾರ ಲಾರಿಗಳನ್ನು ಆಶ್ರಯಿಸಿದೆ. ನಿರಂತರವಾಗಿ ಏರುತ್ತಿರುವ ಡೀಸೆಲ್ ದರದಿಂದಾಗಿ ಈ ಖಾದ್ಯ ತೈಲದ ಬೆಲೆ ಸೇರಿದಂತೆ ಆಹಾರ ಧಾನ್ಯ, ಬಟ್ಟೆ, ದಿನಬಳಕೆಯ ವಸ್ತುಗಳ ಬೆಲೆಯೂ ನಿರಂತರವಾಗಿ ಹೆಚ್ಚಾಗುತ್ತಿದೆ.

‘ಡೀಸೆಲ್ ದರ ಹೆಚ್ಚಳದ ಜೊತೆಗೆ ಇಂಡೋನೇಷ್ಯಾ ಮತ್ತು ಮಲೇಷಿಯಾ ದೇಶಗಳು ಇತ್ತೀಚೆಗೆ ತಾಳೆ ಎಣ್ಣೆಯ ದರವನ್ನು ಹೆಚ್ಚಳ ಮಾಡಿದ್ದರಿಂದ ಪ್ರತಿ ಲೀಟರ್‌ಗೆ ₹ 125 ಆಗಿದೆಕೇಂದ್ರ ಸರ್ಕಾರ ತಾಳೆ ಎಣ್ಣೆ ಮೇಲೆ ವಿಧಿಸಿದ್ದ ಸುಂಕವನ್ನು ಕಡಿಮೆ ಮಾಡಿದ್ದರೂ ಅದರ ಲಾಭ ಸಿಕ್ಕಿಲ್ಲ’ ಎನ್ನುತ್ತಾರೆ ಕಲಬುರಗಿ ಜಿಲ್ಲಾ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ.

ಉದ್ಯೋಗ ಕಡಿತದ ಬರೆ

ಒಂದೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕುಟುಂಬದ ತಿಂಗಳ ಬಜೆಟ್‌ ಏರುಪೇರಾಗಿದ್ದರೆ, ಇನ್ನೊಂದೆಡೆ ಲಾಕ್‌ಡೌನ್‌ ಕಾರಣಕ್ಕೆ ಹಲವು ಉದ್ಯಮಗಳು ನೆಲಕಚ್ಚಿದ್ದು, ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇದರ ಪರಿಣಾಮ ನಗರದಲ್ಲಿ ಇದ್ದು ದುಬಾರಿ ಮನೆ ಬಾಡಿಗೆ ಕಟ್ಟಲಾಗದೇ ಗ್ರಾಮಗಳಿಗೆ ತೆರಳಿ ಅಲ್ಲಿಯೇ ಹೊಲ, ಮನೆ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ತೆರವುಗೊಳ್ಳುತ್ತಿದ್ದಂತೆಯೇ ಶಾಲೆಗಳೂ ಆರಂಭವಾಗಿದ್ದು, ಶುಲ್ಕ ಪಾವತಿಸುವುದಕ್ಕೂ ಪರದಾಡುತ್ತಿದ್ದಾರೆ.

ಫೈನಾನ್ಸ್‌ಗಳ ವಶಕ್ಕೆ ಟ್ಯಾಕ್ಸಿ!

ಜೀವನೋಪಾಯಕ್ಕಾಗಿ ಆಟೊ, ಟ್ಯಾಕ್ಸಿಗಳನ್ನೇ ನಂಬಿಕೊಂಡಿರುವ ಸಾವಿರಾರು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಿಗೆ ಡೀಸೆಲ್ ಬೆಲೆ ಭಾರಿ ಹೊಡೆತ ನೀಡಿದೆ. ಸರಾಸರಿ ನಾಲ್ಕು ಸೀಟಿನ ಕಾರನ್ನು ಈ ಮುಂಚೆ ಪ್ರತಿ ಕಿ.ಮೀ.ಗೆ ₹ 9 ದರ ನಿಗದಿ ಮಾಡಲಾಗಿತ್ತು. ಇದೀಗ ಅನಿವಾರ್ಯವಾಗಿ ₹ 12ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಹಕರು ಬಸ್‌ಗೆ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಕಲಬುರಗಿಯ ಟ್ಯಾಕ್ಸಿ ಚಾಲಕ ಭೀಮರಾಯ ದೊರೆ.

‘ಬಹುತೇಕ ಟ್ಯಾಕ್ಸಿ ಮಾಲೀಕರು ನಗರದ ಎರಡು ಪ್ರಮುಖ ಖಾಸಗಿ ಫೈನಾನ್ಸರ್‌ಗಳಿಂದ ಸಾಲ ಮಾಡಿ ಕಾರನ್ನು ಖರೀದಿಸಿರುತ್ತಾರೆ. 3 ತಿಂಗಳ ಕಂತು ಕಟ್ಟದಿದ್ದರೆ ಫೈನಾನ್ಸ್‌ನವರು ಕಾರುಗಳನ್ನು ಬಲವಂತವಾಗಿ ಜಪ್ತಿ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ಮತ್ತೊಬ್ಬ ಟ್ಯಾಕ್ಸಿ ಚಾಲಕ ವಿವೇಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT