ಮಂಗಳವಾರ, ಸೆಪ್ಟೆಂಬರ್ 28, 2021
21 °C
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಗ್ರಹಣ ವೀಕ್ಷಣೆಗೆ ವ್ಯವಸ್ಥೆ

ಕೊಪ್ಪಳದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಜ್ಞಾನ ವಿಜ್ಞಾನ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಜಿಲ್ಲೆಯ ಹಿರೇವಂಕಲಕುಂಟಾ ಗ್ರಾಮದಲ್ಲಿ ಇಂದು ಪಾರ್ಶ್ವ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಇದಕ್ಕಾಗಿ ಪುಣೆ ಮತ್ತು ದೆಹಲಿಯಿಂದ ವಿಶೇಷ ಹಾಗೂ ಸುರಕ್ಷಿತ ಸೋಲಾರ್ ಫಿಲ್ಟರ್ ಗ್ಲಾಸ್ (ಸನ್ ಗ್ಲಾಸ್) ತರಿಸಲಾಗಿದ್ದು, ರಾಜ್ಯದ ನೂರು ಸ್ಥಳಗಳಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮದಲ್ಲಿ ಬೆಳಿಗ್ಗೆ 10.15 ರಿಂದ ಆರಂಭವಾದ ಗ್ರಹಣ ವೀಕ್ಷಣೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಗ್ರಾಮದ ಎಲ್ಲ ವಯೋಮಾನದವರು ಸುರಕ್ಷತಾ ಕನ್ನಡಕಗಳನ್ನು ಧರಿಸಿ ಭಾನುವಾರ ಆಗಸದಲ್ಲಿ ನಡೆದ ಗ್ರಹಣ ಕೌತುಕವನ್ನು ಕಣ್ತುಂಬಿಕೊಂಡರು. 

ಗ್ರಹಣ ಸಂದರ್ಭದಲ್ಲಿ ಇಡ್ಲಿ, ವಡೆ, ಪಾನೀಯಗಳನ್ನು ಸೇವಿಸುತ್ತಾ, ದೈಹಿಕ ಅಂತರ ಕಾಪಾಡಿಕೊಂಡು ಗ್ರಾಮದ ಜನರು ಗ್ರಹಣ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ಪಿನ್ ಹೋಲ್ ಕ್ಯಾಮೆರಾ ಮತ್ತು ಬಾಲ್ ಮಿರರ್ ಮೂಲಕವೂ ಗ್ರಹಣದ ಬಿಂಬವನ್ನು ಗೋಡೆಯ ಮೇಲೆ ಸೆರೆಹಿಡಿದು ಸಹ ಸುರಕ್ಷಿತವಾಗಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಬಳಿಕ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ದೇವೇಂದ್ರ ಜಿರ್ಲಿ, ನಿಸರ್ಗದಲ್ಲಿ ನಡೆಯುವ ಅತ್ಯಂತ ರೋಮಚನಕಾರಿ ಹಾಗೂ ಕುತೂಹಲಕಾರಿ ವಿದ್ಯಮಾನಗಳಲ್ಲಿ ಚಂದ್ರಗ್ರಹಣ, ಸೂರ್ಯಗ್ರಹಣ ಮತ್ತು ಶುಕ್ರಸಂಕ್ರಮಣಗಳು ಪ್ರಮುಖವಾದುವುಗಳು. ಸೂರ್ಯಗ್ರಹಣ ಪ್ರಕೃತಿಯ ಅತ್ಯಂತ ಸಹಜ ಹಾಗೂ ಸರಳ ಪ್ರಕ್ರಿಯೆಯಾಗಿದೆ. ಆಕಾಶಕಾಯಗಳು ಚಲಿಸುವಾಗ ಒಂದರ ನೆರಳು ಮತ್ತೊಂದರ ಮೇಲೆ ಬಿದ್ದು, ಸ್ವಲ್ಪ ಹೊತ್ತು ಮತ್ತೊಂದು ಆಕಾಶಕಾಯ ಮರೆಯಾಗುತ್ತಿರುತ್ತವೆ.

ಅಂತೆಯೇ ಇಂದು ಕೂಡಾ ಅಂತಹದ್ದೊಂದು ಕುತೂಹಲಕಾರಿ ಘಟನೆ ಖಗೋಳದಲ್ಲಿ ನಡೆಯುತ್ತಿದೆ. ಅದನ್ನು ನಾವೆಲ್ಲ ನೋಡಿ ಖುಷಿಪಡಬೇಕು. ಈ ಕುರಿತು ಅನಗತ್ಯವಾಗಿ ಭಯ ಮತ್ತು ಮೌಢ್ಯವನ್ನು ನಮ್ಮ ಸಮಾಜದಲ್ಲಿ ಬಿತ್ತಲಾಗಿದೆ. ಗ್ರಹಣ ಸಮಯದಲ್ಲಿ ಆಹಾರ, ನೀರು ಸೇವಿಸಬಾರದು ಎಂಬ ಮಿಥ್ಯೆಗಳನ್ನು ಜನರ ತಲೆಯಲ್ಲಿ ತುಂಬಲಾಗಿದೆ. ಅಂತಹ ಮೌಢ್ಯಗಳಿಂದ ಜನರು ಹೊರಬರಬೇಕು. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು. 

ಗ್ರಾಮದ ಮುಖಂಡರಾದ ರಮೇಶ್ ವಾಲ್ಮೀಕಿ, ಹನುಮೇಶ್ ಚಿಣಗಿ, ಕೇಶವ ಜ್ಞಾನಮೋಟೆ, ಹನುಮೇಶ ದಾಸರ್, ಶಿಕ್ಷಕರಾದ ಸಿದ್ದಯ್ಯ ಮಠದ, ಆಂಜನೇಯ ಈಳಗೇರ, ಮಲ್ಲಿಕಾರ್ಜುನ ಗಂಗನಾಳ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು