ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Asian Games | ಸಂಗೀತಾ ಹ್ಯಾಟ್ರಿಕ್; ಭಾರತ ಹಾಕಿ ತಂಡದ ಜಯಭೇರಿ

Published : 27 ಸೆಪ್ಟೆಂಬರ್ 2023, 15:48 IST
Last Updated : 27 ಸೆಪ್ಟೆಂಬರ್ 2023, 15:48 IST
ಫಾಲೋ ಮಾಡಿ
Comments

ಹಾಂಗ್‌ಝೌ: ಸ್ಟ್ರೈಕರ್‌ ಸಂಗೀತಾ ಕುಮಾರಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಮಹಿಳೆಯರ ಹಾಕಿ ತಂಡವು ಏಷ್ಯನ್ ಕ್ರೀಡಾಕೂಟದ ಎ ಗುಂಪಿನಲ್ಲಿ ಜಯ ಸಾಧಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 13–0 ಗೋಲುಗಳಿಂದ ಸಿಂಗಪುರ ವಿರುದ್ಧ ಜಯಿಸಿತು.

ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳಲ್ಲಿಯೇ ಭಾರತದ ಆಟಗಾರ್ತಿಯರು ಎಂಟು ಗೋಲುಗಳನ್ನು ದಾಖಲಿಸಿದರು. ದ್ವಿತೀಯಾರ್ಧದದಲ್ಲಿ ಸಿಂಗಪುರ ತಂಡದ ಆಟಗಾರ್ತಿಯರು ಒಂದಿಷ್ಟು ಪ್ರತಿರೋಧ ತೋರಿದರು. ಅದರಿಂದಾಗಿ ಈ ಅವಧಿಯಲ್ಲಿ ಭಾರತಕ್ಕೆ ಐದು ಗೋಲು ಗಳಿಸಲು ಮಾತ್ರ ಸಾಧ್ಯವಾಯಿತು.

ಸಂಗೀತಾ ಕುಮಾರಿ (23ನೇ ನಿಮಿಷ, 47ನಿ, 56ನಿ) ಮೂರು ಗೋಲು ಗಳಿಸಿದರು. ನವನೀತ್ ಕೌರ್ ಅವರು 14ನೇ ನಿಮಿಷದಲ್ಲಿಯೇ ಎರಡು ಗೋಲು ಹೊಡೆದರು. ಉದಿತಾ (6ನಿ), ಸುಶೀಲಾ ಚಾನು (8ನಿ), ದೀಪಿಕಾ (11ನಿ), ದೀಪ್ ಗ್ರೇಸ್ ಎಕ್ಕಾ (17ನಿ), ನೇಹಾ (19ನಿ), ಸಲೀಮಾ ಟೆಟೆ (35ನಿ), ಮೊನಿಕಾ (52ನಿ) ಮತ್ತು ವಂದನಾ ಕಟಾರಿಯಾ (56ನಿ) ಗೋಲು ಗಳಿಸಿದರು.

ಶುಕ್ರವಾರ ನಡೆಯುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಮಲೇಷ್ಯಾ ಎದುರು ಆಡಲಿದೆ.

‘ಇವತ್ತಿನ ಪಂದ್ಯದಲ್ಲಿ ಚೆನ್ನಾಗಿ ಆಡಿದ ತೃಪ್ತಿ ಇದೆ. ಯುವ ಆಟಗಾರ್ತಿಯರು ಸೀನಿಯರ್ ಆಟಗಾರ್ತಿಯರೊಂದಿಗೆ ಉತ್ತಮ ಹೊಂದಾಣಿಕೆಯಿಂದ ಆಡಿದರು. ಇದರಿಂದಾಗಿ ಎಲ್ಲವೂ ಸಾಂಗವಾಗಿ ನೆರವೇರಿತು‘ ಎಂದು ಭಾರತ ತಂಡದ ನಾಯಕಿ ಸವಿತಾ ಪೂನಿಯಾ ಹೇಳಿದರು.

‘ಮುಂದಿನ ಪಂದ್ಯ ಮಲೇಷ್ಯಾದ ಎದುರು ಆಡಲಿದ್ದೇವೆ. ಆ ಪಂದ್ಯದ ಕುರಿತು ಸದ್ಯ ನಮ್ಮ ಯೋಚನೆ ಮತ್ತು ಯೋಜನೆ ಇದೆ. ಮಲೇಷ್ಯಾದ ಆಟವನ್ನು ಅರಿಯಲು ನಮಗೆ ಲಭ್ಯವಿರುವ ಒಂದು ದಿನದ ಅವಕಾಶದಲ್ಲಿ ಪ್ರಯತ್ನಿಸುತ್ತವೆ. ಅದಕ್ಕೆ ತಕ್ಕಂತೆ ತಂತ್ರಗಾರಿಕೆ ರೂಪಿಸುತ್ತೇವೆ. ನಮ್ಮ ಗುಂಪಿನಲ್ಲಿ ಕೊರಿಯಾ ಕೂಡ ಇದೆ. ಅವರದ್ದು ಒಳ್ಳೆಯ ಬಳಗವೇ ಇದೆ. ಆದರೆ ಎದುರಿಸಿ ನಿಲ್ಲುವ ವಿಶ್ವಾಸ ನಮಗೆ ಇದೆ‘ ಎಂದೂ ಸವಿತಾ ಹೇಳಿದರು.

ಸವಿತಾ ಬಳಗವು ಪೆನಾಲ್ಟಿ ಕಾರ್ನರ್‌ಗಳಲ್ಲಿ ನಿಖರ ಆಟ ತೋರಿತು. ಹೀಗಾಗಿ ಐದು ಪೆನಾಲ್ಟಿಗಳು ಗೋಲುಗಳಲ್ಲಿ ಪರಿವರ್ತನೆಗೊಂಡವು. ಪಂದ್ಯದ ಆರಂಭದಿಂದಲೇ ಆಕ್ರಮಣಶೈಲಿಯ ಅಟವನ್ನು ಆಡಿದ ಭಾರತ ಕೊನೆಯವರೆಗೂ ಸಿಂಗಪುರದ ಮೇಲೆ ಒತ್ತಡ ಹೇರಿತ್ತು.

ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್
ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್

ಭಾರತಕ್ಕೆ ಜಪಾನ್ ಸವಾಲು ಇಂದು

ಹಾಂಗ್‌ಝೌ: ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡವು ಗುರುವಾರ  ಬಲಿಷ್ಠ ಜಪಾನ್ ತಂಡವನ್ನು ಎದುರಿಸಲಿದೆ.

ಪುರುಷರ ಹಾಕಿ ವಿಭಾಗದ ಎ ಗುಂಪಿನಲ್ಲಿ ಭಾರತ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಉಜ್ಬೇಕಿಸ್ತಾನ ಮತ್ತು ಸಿಂಗಪುರ ಎದುರು ಭರ್ಜರಿ ಜಯ ಸಾಧಿಸಿತ್ತು.  ಆದರೆ ಜಪಾನ್ ಕಠಿಣ ಸವಾಲು ಒಡ್ಡುವ ತಂಡವಾಗಿದೆ. ಜಪಾನ್ ತಂಡವು ಹಾಲಿ ಚಾಂಪಿಯನ್ ಕೂಡ ಆಗಿದೆ. ತಂಡವು 2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿತ್ತು.

‘ಈ ಕಠಿಣ ಸವಾಲಿನ ಬಗ್ಗೆ ನಮಗೆ ಸಂಪೂರ್ಣ ಅರಿವು ಇದೆ. ಜಪಾನ್ ಬಲಾಢ್ಯ ಆಟಗಾರರನ್ನೊಳಗೊಂಡಿದೆ. ಅವರ ಸಾಮರ್ಥ್ಯ ಮತ್ತು ಲೋಪಗಳ ಅರಿವು ನಮಗಿದೆ‘ ಎಂದು ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಇಲ್ಲಿ ಜಪಾನ್ ತಂಡವೂ ಎರಡು ಪಂದ್ಯಗಳಲ್ಲಿ ಆಡಿದೆ. ಬಾಂಗ್ಲಾದೇಶ ವಿರುದ್ಧ (7–2) ಮತ್ತು ಉಜ್ಭೇಕಿಸ್ತಾನ (10–1) ವಿರುದ್ಧ ಪಂದ್ಯಗಳನ್ನು ಜಯಿಸಿದೆ. ಹೋದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ಏಷ್ಯನ್ ಹಾಕಿ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡವು ಜಪಾನ್ ವಿರುದ್ಧ ಗೆದ್ದಿತ್ತು.

ಅದೇ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಉಭಯ ತಂಡಗಳ ಪಂದ್ಯ ಡ್ರಾ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT