ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಹಾಕಿದ್ದು ಸಿದ್ದರಾಮಯ್ಯಗೆ ಅಲ್ಲ, ಕಾಂಗ್ರೆಸ್‌ಗೆ: ಶ್ರೀರಾಮುಲು

Last Updated 28 ನವೆಂಬರ್ 2022, 11:41 IST
ಅಕ್ಷರ ಗಾತ್ರ

ಕೊಪ್ಪಳ: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಎಸ್.ಟಿ. ಸಮಾವೇಶದಲ್ಲಿ ‘ತಾಕತ್ತು ಇದ್ದರೆ ಬಳ್ಳಾರಿಗೆ ಬನ್ನಿ‘ ಎಂದು ಸವಾಲು ಹಾಕಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಹೊರತು ಸಿದ್ದರಾಮಯ್ಯ ಅವರಿಗೆ ಅಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ ‘ಬಿಜೆಪಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವುದಿಲ್ಲ ಎಂದು ಕಾಂಗ್ರೆಸ್ ಅನೇಕ ಬಾರಿ ಟೀಕೆ ಮಾಡಿತ್ತು. ಅಂದಿನ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರದ ನಡುವೆ ತಾಕತ್ತು ಇದ್ದರೆ ಬನ್ನಿ ಎಂದು ಕಾಂಗ್ರೆಸ್‌ ಪಕ್ಷಕ್ಕೆ ಸವಾಲು ಹಾಕಿದ್ದೇನೆ. ಹಿಂದುಗಳಿದ ವರ್ಗಗಳ ನಾಯಕ ಎಂದು ಬಿಂಬಿಸಿಕೊಂಡ ಸಿದ್ದರಾಮಯ್ಯನವರೇ ಇಲ್ಲಿ ಸೇರಿರುವ ಜನಸಾಗರ ನೋಡಿ ಎಂದು ಹೇಳಿದ್ದೇನೆ. ವೈಯಕ್ತಿಕವಾಗಿ ಯಾರಿಗೂ ನಾನು ಸವಾಲು ಹಾಕಿಲ್ಲ. ನಿಮ್ಮನ್ನು ನೋಡಿಕೊಳ್ಳುತ್ತೇನೆ ಎನ್ನುವ ಪದವನ್ನು ಸಿದ್ದರಾಮಯ್ಯ ಅವರಿಗೆ ಬಳಸಿಲ್ಲ. ಆಕಸ್ಮಿಕವಾಗಿ ಬಳಸಿದ್ದರೆ ಆ ಪದವನ್ನು ವಾಪಸ್‌ ಪಡೆಯುತ್ತೇನೆ’ ಎಂದರು.

‘ನಾವು ಮಾಡುತ್ತಿರುವ ಸಮಾವೇಶಗಳಿಗೆ ಪೈಪೋಟಿಯಾಗಿ ಕಾಂಗ್ರೆಸ್‌ ಕೂಡ ಸಮಾವೇಶಗಳನ್ನು ನಡೆಸುತ್ತದೆ. ಮುಂಬರುವ ದಿನಗಳಲ್ಲಿ ಬಿಜೆಪಿ ವತಿಯಿಂದ ಮೈಸೂರು, ಚಾಮರಾಜನಗರ ಅಥವಾ ಚಿತ್ರದುರ್ಗದಲ್ಲಿ ಎಸ್‌ಸಿ ಸಮಾಜದ ಸಮಾವೇಶ ಆಯೋಜಿಸಲಾಗುವುದು’ ಎಂದು ತಿಳಿಸಿದರು.

‘ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವ ಜೋಡೆತ್ತುಗಳು ಅಲ್ಲ. ಅವರು ಚಿರತೆಗಳಾಗಿದ್ದು ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, 2023ರ ಚುನಾವಣೆಯಲ್ಲಿಯೂ 150 ಸ್ಥಾನಗಳನ್ನು ಗೆದ್ದು ಮತ್ತೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಬಸವರಾಜ ಬೊಮ್ಮಾಯಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಭವಿಷ್ಯ ನುಡಿದರು.

‘ಬಿಜೆಪಿ ಯಾವುದೇ ಸಮುದಾಯಗಳನ್ನು ತಿರಸ್ಕರಿಸುವುದಿಲ್ಲ. ನಮ್ಮ ಪಕ್ಷದ ಸಿದ್ದಾಂತಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ದೇಶದ ಹಲವು ಕಡೆ ಜನ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದು, ರಾಜ್ಯದಲ್ಲಿಯೂ ಇದು ಮುಂದುವರಿಯಲಿದೆ. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್‌ ಸಮುದಾಯ ರಾಜಕಾರಣ ಮಾಡುತ್ತಿದೆ. ಆದರೆ, ನಾವು ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ’ ಎಂದರು.

‘ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕು ಎನ್ನುವ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ಗುಜರಾತ್‌ನಲ್ಲಿ ಮಾಡಿದಂತೆ ರಾಜ್ಯದಲ್ಲಿಯೂ ಹೊಸಬರಿಗೆ ಅವಕಾಶ ಕೊಡಬಹುದು. ಈ ಕುರಿತು ಬಿ.ಎಲ್‌. ಸಂತೋಷ್‌ ಅವರ ಹೇಳಿಕೆಗೆ ನನ್ನ ಸಹಮತವಿದೆ’ ಎಂದರು.

‘ಜನಾರ್ದನ ರೆಡ್ಡಿ ಈ ಭಾಗದ ಹಿರಿಯ ನಾಯಕರು. ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಇದ್ದರೆ ಒಳ್ಳೆಯದು ಎನ್ನುವುದು ನನ್ನ ಭಾವನೆ. ಇದನ್ನು ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT