ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ತಾಂತ್ರಿಕ ದೋಷವೇ ಅಡ್ಡಿ

ಶುಕ್ರವಾರ, ಏಪ್ರಿಲ್ 26, 2019
35 °C
ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೊಸ ಯೋಜನೆಯಿಂದ ಗೊಂದಲ

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ತಾಂತ್ರಿಕ ದೋಷವೇ ಅಡ್ಡಿ

Published:
Updated:
Prajavani

ಕೊಪ್ಪಳ: ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಹೊಸ ಯೋಜನೆಯ ವೆಬ್‌ಪೇಜ್‌ ತೆರೆದುಕೊಳ್ಳದ ಕಾರಣ ಶಿಕ್ಷಕರು ಬುಧವಾರ ರಾತ್ರಿವರೆಗೂ ಪರದಾಡಿದರು. ಉತ್ತರ ಪತ್ರಿಕೆಯನ್ನು ಅಲ್ಲಿಯೇ ಇಟ್ಟು ಶಿಕ್ಷಕರು ತೆರಳಿದರು.

ನಗರದ ಗವಿಸಿದ್ಧೇಶ್ವರ ಪ್ರೌಢಶಾಲೆ, ಎಸ್‌ಎಫ್‌ಎಸ್‌ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮೌಲ್ಯಮಾಪನ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 2 ವಿಷಯಗಳನ್ನು ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ.

ಏನಿದು ಹೊಸ ಯೋಜನೆ?: ಪ್ರತಿ ವರ್ಷ ಮೌಲ್ಯಮಾಪನವನ್ನು ಮ್ಯಾನುವಲ್ ವಿಧಾನದ ಮೂಲಕ ಮಾಡಿ ಕಳುಹಿಸಲಾಗುತ್ತಿತ್ತು. ಈಗ ಹೊಸ ವೆಬ್‌ಸೈಟ್‌ನಲ್ಲಿ ಮೌಲ್ಯಮಾಪನ ಮಾಡುವ ಖಾತೆ ತೆರೆದು, ಅದಕ್ಕೆ ನೀಡಿದ ಪಾಸ್‌ ವರ್ಡ್ ಮೂಲಕ ಪುಟ ತೆರೆದು ಅದರಲ್ಲಿ ಅಂಕಗಳನ್ನು ದಾಖಲಿಸಬೇಕು ಈ ಡಿಜಿಟಲ್ ವ್ಯವಸ್ಥೆಯಿಂದ ಶಿಕ್ಷಕರು ಇಡೀ ದಿನ ಪರದಾಡಿ, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವಂತಾಯಿತು.

ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯಾದರೂ ವೈಬ್‌ಸೈಟ್‌ ಆರಂಭವಾಗಲಿಲ್ಲ. ಇದರಿಂದ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆ ಕೈಯಲ್ಲಿ ಹಿಡಿದು, ಸರತಿ ಸಾಲಿನಲ್ಲಿ ಶಿಕ್ಷಕರು ನಿಂತುಕೊಳ್ಳಬೇಕಾಯಿತು. ಕೆಲ ಸಮಯದ ನಂತರ ವೈಬ್‌ಸೈಟ್‌ ಆರಂಭವಾಗದ ಕಾರಣಕ್ಕೆ ಸಮಯ ಹೋಗುತ್ತಿದ್ದಂತೆ ಶಿಕ್ಷಕರು ಅಂಕಗಳನ್ನು ದಾಖಲಿಸಲು ಮುಗಿಬಿದ್ದರು. ಅಲ್ಲದೇ ಕೊನೆಗೆ ಹೊಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಅಲ್ಲದೇ ಬಹುತೇಕ ಶಿಕ್ಷಕರಿಗೆ ಗಣಕಯಂತ್ರದ ಜ್ಞಾನ ಇಲ್ಲ. ಇವರಿಗೆ ಮಾಹಿತಿ ನೀಡಲು ಗಣಕಯಂತ್ರ ತಜ್ಞರು ಇರಲಿಲ್ಲ. ಅಲ್ಲದೆ ಅತ್ಯಾಧುನಿಕ ವ್ಯವಸ್ಥೆ, ವೇಗದ ಇಂಟರ್‌ನೆಟ್‌ ಇಲ್ಲದೆ ಸಮಸ್ಯೆಯಾಯಿತು ಎಂದು ಮೌಲ್ಯಮಾಪನಕ್ಕೆ ಬಂದಿದ್ದ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಗಣಕಯಂತ್ರದಲ್ಲಿ ಇಂಟರ್‌ನೆಟ್‌ ನಿಧಾನವಾಗಿದೆ. ಅಲ್ಲದೇ ಸರ್ವರ್‌ ಬ್ಯೂಸಿ ಎಂದು ತೋರಿಸುತ್ತಿದೆ. ಇದರಿಂದಾಗಿ ಬಹಳಷ್ಟು ಸಮಸ್ಯೆಯಾಗಿದೆ. ಇದಕ್ಕೆ ಬೋರ್ಡಿನವರೇ ಪರಿಹಾರ ತಿಳಿಸಬೇಕು. ಅಲ್ಲದೇ ಗಣಕಯಂತ್ರ ತಜ್ಞರು ಕೇವಲ ಒಬ್ಬರಿದ್ದಾರೆ. ಅದಕ್ಕಾಗಿ ಈ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಸಮಾಜ ವಿಜ್ಞಾನ ವಿಷಯದ ಸಹ ಅಧೀಕ್ಷಕ ಬಸವಂತಪ್ಪ.

ವಸತಿ ವ್ಯವಸ್ಥೆ ಇಲ್ಲ: ಮೌಲ್ಯಮಾಪನದ ಸಮಯ ಬೆಳಿಗ್ಗೆ 9.30ರಿಂದ ಸಂಜೆ 5.30ರ ವರೆಗೆ ಮಾತ್ರ ಇದೆ. ಆದರೆ ಮೊದಲನೇ ದಿನವಾದ ಬುಧವಾರ ಸಂಜೆ 6ಕ್ಕೆ ಕಳೆದರೂ ಕೆಲಸ ಮುಗಿದಿಲ್ಲ. ಮೌಲ್ಯಮಾಪನಕ್ಕಾಗಿ ಬೇರೆ ಬೇರೆ ಕಡೆಗಳಿಂದ ಬಂದಿದ್ದೇವೆ. ತಡವಾಗಿದ್ದರಿಂದ ಬಸ್‌ ತಪ್ಪಿದೆ. ಆದರೆ, ಸಮರ್ಪಕ ವಸತಿ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡರು.

ನೀರಿನ ವ್ಯವಸ್ಥೆ ಇಲ್ಲ: ಮೌಲ್ಯಮಾಪನಕ್ಕಾಗಿ ಸರ್ಕಾರ ಅನುದಾನವನ್ನು ಮೀಸಲಿಟ್ಟಿರುತ್ತದೆ. ಆದರೆ ಮೌಲ್ಯಮಾಪನಕ್ಕೆ ಬಂದ ಶಿಕ್ಷಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ರಸ್ತೆ ಬದಿಗಳಲ್ಲಿನ ಹೊಟೇಲ್‌ಗಳಲ್ಲಿ ಹೋಗಿ ನೀರು ಕುಡಿದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿಕ್ಷಕರು ತಿಳಿಸಿದರು.

'ಆರಂಭದ ದಿನ ಆಗಿರುವುದರಿಂದ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸಲು ಆಗಿಲ್ಲ. ಗುರುವಾರದಿಂದ 500 ಲೀಟರ್‌ನ ಟ್ಯಾಂಕರ್‌ ತರಿಸಲಾಗುತ್ತದೆ. ಮೌಲ್ಯಮಾಪನಕ್ಕೆ ಬಂದ ಶಿಕ್ಷಕರಿಗೆ ವಸತಿ ವ್ಯವಸ್ಥೆಗೆ ಕಲ್ಪಿಸಲು ಅವಕಾಶ ಇಲ್ಲ' ಎನ್ನುತ್ತಾರೆ ಇಂಗ್ಲೀಷ್‌ ವಿಷಯದ ಸಹ ಅಧೀಕ್ಷಕ ಟಿ.ಎಫ್.ನೂರಬಾಷಾ ಹೇಳಿದರು   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !