ಶುಕ್ರವಾರ, ಮೇ 20, 2022
21 °C
ಕುಷ್ಟಗಿ: ರಾಜ್ಯ ಸರ್ಕಾರಿ ನೌಕರರಿಗೆ ಶಾಸಕ ಅಮರೇಗೌಡ ಬಯ್ಯಾಪುರ ಸಲಹೆ

ಜನರ ನಿರೀಕ್ಷೆಯಂತೆ ಪ್ರಾಮಾಣಿಕ ಸೇವೆ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಉತ್ತಮ ಸೇವೆಯ ನಿರೀಕ್ಷೆಯಲ್ಲಿರುವ ಜನರನ್ನು ಭ್ರಮನಿರಸ ಗೊಳಿಸದೆ ಸರ್ಕಾರಿ ನೌಕರರು ಪ್ರಾಮಾಣಿಕ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡದ ಭೂಮಿಪೂಜೆ ನೆರವೇರಿಸಿ ಹಾಗೂ ತಾಲ್ಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳು ಅಭಿವೃದ್ಧಿ ಬಂಡಿಯ ಎರಡು ಚಕ್ರಗಳು ಇದ್ದಹಾಗೆ. ಸರ್ಕಾರದ ಆಡಳಿತ ಯಂತ್ರ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾದರೆ ಈ ಎರಡೂ ವರ್ಗಗಳ ಜವಾಬ್ದಾರಿ ಮುಖ್ಯ. ಸರ್ಕಾರ ಯಶಸ್ಸು ನೌಕರರನ್ನು ಅವಲಂಬಿಸಿರುತ್ತದೆ ಎಂಬುದನ್ನು ಅರಿತು ಸೇವೆ ಸಲ್ಲಿಸಬೇಕು ಎಂದರು.

ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಮಾತನಾಡಿ, ಕೇಂದ್ರದ ವೇತನ ಆಯೋಗದ ಮಾದರಿಯಲ್ಲಿ ರಾಜ್ಯ ಸರ್ಕಾರದ ವೇತನಕ್ಕೆ ಸಂಬಂಧಿಸಿದ ಆದೇಶ ಹೊರಡಿಸುವುದು ಮತ್ತು ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸುವ ಎರಡು ಪ್ರಮುಖ ಬೇಡಿಕೆಗಳು ಸರ್ಕಾರದ ಮುಂದೆ ಇವೆ. ಪ್ರಾರಂಭದಲ್ಲಿ ಕೇಂದ್ರದ ಮಾದರಿ ವೇತನ ಆಯೋಗದ ನೀತಿ ಅನುರಿಸುವುದಕ್ಕೆ ಆದ್ಯತೆ ನೀಡಲು ಸರ್ಕಾರ ಒಲವು ತೋರಿದೆ. ನಂತರದ ಅವಧಿಯಲ್ಲಿ ಎನ್‌ಪಿಎಸ್‌ ರದ್ದತಿಗೆ ಒತ್ತಾಯಿಸೋಣ ಎಂದರು.

ರಾಜ್ಯದಲ್ಲಿ ಪ್ರಕೃತಿ ವಿಕೋಪ, ಕೋವಿಡ್‌ ಸಂದರ್ಭದಲ್ಲಿ ಸರ್ಕಾರಿ ನೌಕರರು ನೀಡಿದ ಸೇವೆ ಅತ್ಯುತ್ತಮವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದ 25 ಆದೇಶಗಳು ಹೊರಬೀಳುವುದಕ್ಕೆ ಬಿ.ಎಸ್‌.ಯಡಿಯೂರಪ್ಪ ನೌಕರರ ಬಗ್ಗೆ ಹೊಂದಿರುವ ಕಳಕಳಿಯನ್ನು ಪ್ರತಿಬಿಂಬಿ ಸುತ್ತದೆ. ನಮ್ಮನ್ನು ಸರ್ಕಾರ ಉತ್ತಮ ರೀತಿಯಲ್ಲಿ ನಡೆಸಿಕೊಂಡಿದ್ದಕ್ಕಾಗಿ ಈವರೆಗೂ ನೌಕರರು ಹೋರಾಟದ ಹಾದಿ ತುಳಿದಿಲ್ಲ ಎಂದು ಹೇಳಿದರು.‌

ಷಡಕ್ಷರಿ ಅವರು ವೇದಿಕೆಯನ್ನು ಬಿ.ಎಸ್‌.ಯಡಿಯೂರಪ್ಪ ಅವರನ್ನು ಹೊಗಳುವುದಕ್ಕೆ ಬಳಸಿ ಕೊಂಡರು.

ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ಮಾತನಾಡಿ, ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಜನಪರ ಮತ್ತು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಾಗ ಅವುಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಟಾನಗೊಳಿಸುವ ಮೂಲಕ ನೌಕರರು ಯೋಜನೆಗಳ ಯಶಸ್ವಿಗೆ ಕಾರಣರಾಗುತ್ತಾರೆ ಎಂದರು.

ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಮಹೇಶ ಜೋಷಿ, ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಇತರರು ಮಾತನಾಡಿದರು. ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ನೌಕರರ ಸಂಘದ ಪ್ರತಿನಿಧಿಗಳು ಇದ್ದರು

ನೌಕರರ ಭವನ ಕಟ್ಟಡಕ್ಕೆ ನಿವೇಶನ ಗುರುತಿಸುವಲ್ಲಿ ಶ್ರಮವಹಿಸಿದ ನಿವೃತ್ತ ಮುಖ್ಯಶಿಕ್ಷಕ ಎಸ್‌.ಎಚ್‌.ಹಿರೇಮಠ ಮತ್ತಿತರರನ್ನು ಸನ್ಮಾನಿಸಲಾಯಿತು. ಜೀವನಸಾಬ ವಾಲಿಕಾರ ನಿರೂಪಿಸಿದರು. ವಿರುಪಾಕ್ಷಪ್ಪ ಅಂಗಡಿ ಸ್ವಾಗತಿಸಿದರು. ಪ್ರಾರಂಭದಲ್ಲಿ ನೂರಾರು ನೌಕರರು ಬೈಕ್‌ ಜಾಥಾ ಮೂಲಕ ಸಾರೋಟ ಮಾದರಿ ವಾಹನದಲ್ಲಿ ಷಡಕ್ಷರಿ ಮತ್ತು ಮಹೇಶ ಜೋಷಿ ಅವರನ್ನು ವೇದಿಕೆಗೆ ಕರೆತಂದರು. ಕಂದಾಯ, ಪೊಲೀಸ್‌ ಇಲಾಖೆ ಅಧಿಕಾರಿಗಳು ಗೈರುಹಾಜರಿ ಎದ್ದುಕಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.