ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು | ಶಿಲಾ ಶಾಸನಗಳಿಗೆ ಬೇಕಿದೆ ರಕ್ಷಣೆ

ಕನ್ನಡ ನಾಡು, ನುಡಿ ಬಿಂಬಿಸುವ ಲಿಪಿ–ಕುರುಹುಗಳ ಅವಗಣನೆ
Last Updated 23 ಜುಲೈ 2020, 19:30 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಅಲ್ಲಲ್ಲಿ ಹಿಂದಿನ ಕಾಲದ ಶಿಲಾ ಶಾಸನಗಳು ಹಾಗೂ ಲಿಪಿಗಳು ಪತ್ತೆಯಾಗಿವೆ. ಆದರೆ, ಚರಿತ್ರೆಯ ಮಹತ್ವದ ಭಾಗವಾಗಿ ಪುರಾತನ ಕಾಲದಲ್ಲಿ ರಚಿಸಲಾಗಿರುವ ‌ಈ ಕನ್ನಡ ಶಾಸನಗಳು, ದತ್ತಿ ಶಾಸನ, ಲಿಪಿಗಳು ರಕ್ಷಣೆ ಇಲ್ಲದೆ ಸೊರಗುತ್ತಿವೆ.

ಹಳೆಗನ್ನಡ ಸಾಹಿತ್ಯ ಹೊತ್ತ ಈ ಶಿಲಾ ಬರಹಗಳು ಕನ್ನಡಿಗರ ಸೌಭಾಗ್ಯದ ಸಂಕೇತ. ವೀರಗಲ್ಲುಗಳು ಪರಾಕ್ರಮದ ದ್ಯೋತಕ. ಅಂದಿನ ಆಡಳಿತಗಾರರು ಗ್ರಾಮದ ವಿಸ್ತೀರ್ಣ ಹಾಗೂ ದಾನಪತ್ರಗಳ ಒಕ್ಕಣೆಗಳನ್ನು ಅಕ್ಷರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ತಾಲ್ಲೂಕಿನಲ್ಲಿ ನಡೆಯುತ್ತಿಲ್ಲ ಎಂಬುದು ಜನರ ಬೇಸರ.

ಗ್ರಾಮೀಣ ಹಾಗೂ ಹಳ್ಳಿ ಪಟ್ಟಣದ ಭಾಗಗಳಲ್ಲಿರುವ ಕೆಲವು ದೇವಾಲಯದ ಕಂಬಗಳಲ್ಲಿ ಇರುವ ಕನ್ನಡ ಬರಹಗಳ ಮೇಲೆ ಬಣ್ಣ ಬಳಿಯಲಾಗಿದೆ. ಕೆಲವೆಡೆ ಶಾಸನಗಳನ್ನು ಉಜ್ಜಿ ವಿರೂಪಗೊಳಿಸಲಾಗಿದೆ. ಹಲವು ಕಲ್ಲಿನ ಮೂರ್ತಿಗಳು, ರಾಜ ವಿಗ್ರಹಗಳು ಮತ್ತು ಶಿಲೆಯಲ್ಲಿ ಅರಳಿದ ದ್ವಾರಪಾಲಕರ ಮೇಲೆ ಸುಣ್ಣ ಹಚ್ಚಿ ಐತಿಹಾಸಿಕ ದಾಖಲೆಗಳನ್ನು ಮರೆಮಾಚಲಾಗಿದೆ. ದೇವರ ಕೆಲ ಮೂರ್ತಿಗಳನ್ನು ಕಳವು ಮಾಡಲಾಗಿದೆ ಎಂದು ಸಾಹಿತಿ ಕೆ. ಬಿ ಬ್ಯಾಳಿ ಬೇಸರ ವ್ಯಕ್ತಪಡಿಸಿದರು.

ದ್ರಾವಿಡ, ಹೊಯ್ಸಳ ಮತ್ತು ಕಲ್ಯಾಣ ಚಾಲುಕ್ಯರ ಅರಸರ ಕಾಲದ ಶಾಸನಗಳೂ ಕೂಡ ಇಲ್ಲಿ ನೋಡಲು ಸಿಗುತ್ತವೆ. ಆಯಾ ಸಾಮ್ರಾಜ್ಯದ ಚಕ್ರವರ್ತಿಗಳ ಪರಾಕ್ರಮದ ವರ್ಣನೆಗಳನ್ನು ಆ ಶಾಸನಗಳಲ್ಲಿ ವಿವರಿಸಲಾಗಿದೆ. ಇವು ಹಳೆಗನ್ನಡ ಬರಹದಲ್ಲಿವೆ.

ಲಭ್ಯ ಇರುವ ಕನ್ನಡದ ಶಾಸನಗಳು ಮತ್ತು ಸ್ಮಾರಕಗಳನ್ನು ಇತಿಹಾಸ ಸಂಶೋಧಕರು ಪತ್ತೆಹಚ್ಚಿ ಬೆಳಕು ಚೆಲ್ಲಬೇಕು ಎನ್ನುತ್ತಾರೆ ಕನ್ನಡ ಭಾಷಾ ಅಭಿಮಾನಿಗಳು.

ಇತಿಹಾಸದ ಆಕರ: ಅಲ್ಲಲ್ಲಿ ಕಾಣಸಿಗುವ ಕನ್ನಡ ಶಾಸನಗಳು ವೈಶಿಷ್ಟ್ಯಪೂರ್ಣವಾಗಿವೆ. ಕನ್ನಡದ ಜೊತೆಗೆ ಸಂಸ್ಕೃತ ಭಾಷೆಯ ಹತ್ತಾರು ಕಲ್ಲಿನ ರಚನೆಗಳು ನಾಡಿನ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಭಾಷಾ ಸಾಮರಸ್ಯ, ಪ್ರಾಚೀನತೆ ಮತ್ತು ಲಿಪಿಗಳ ಅಧ್ಯಯನಕ್ಕೆ ಇವು ಪ್ರಮುಖ ಆಕರವಾಗಿವೆ.

ಪಟ್ಟಣದ ನವಲಿಂಗೇಶ್ವರ ದೇವಸ್ಥಾನದ ನಿರ್ಮಾಣದಲ್ಲಿ ಕಲ್ಯಾಣ ಚಾಲುಕ್ಯರ ಪ್ರಭಾವ, ತಾಲ್ಲೂಕಿನ ಇಟಗಿ ಗ್ರಾಮದ ಮಹಾದೇವ ದೇವಾಲಯದಲ್ಲಿ ಚಾಲುಕ್ಯರ ಪ್ರಭಾವವನ್ನು ಪ್ರತಿ ಕಂಬದಲ್ಲಿ ಕಾಣಬಹುದು ಎಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT