ಶುಕ್ರವಾರ, ಮೇ 7, 2021
26 °C

ಬಿರುಗಾಳಿ ಮಳೆ; ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ರಾತ್ರಿ ಬಿರುಗಾಳಿ ಸಮೇತ ಮಳೆ ಸುರಿದಿದೆ. ಮನೆಗೆ ಹೊಂದಿಸಿದ್ದ ತಗಡು ಹಾರಿ ಮಹಿಳೆಗೆ ತಾಗಿದ್ದರ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ಜರುಗಿದೆ.

ತಾಲ್ಲೂಕಿನ ಬಳೂಟಗಿ ಗ್ರಾಮದ ಶಿವಲೀಲವ್ವ ಶೇಖರಗೌಡ ದುಗ್ಗಲದ್ ಮೃತ ದುರ್ದೈವಿ. ಘಟನೆ ನಡೆದ ಕೂಡಲೇ ಯಲಬುರ್ಗಾ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿ ಮೃತರಾಗಿದ್ದಾರೆ.

ಗೆದಗೇರಿ ಗ್ರಾಮದ ಹೊರವಲಯದಲ್ಲಿ ಅನೇಕ ಶೆಡ್ಡಿನ ತಗಡುಗಳು ಹಾರಿಹೋಗಿವೆ. ಭಾರಿ ಪ್ರಮಾಣದಲ್ಲಿ ಗಾಳಿ ಬೀಸಿದ್ದರಿಂದ ಅನೇಕ ಮನೆಗಳ ತಗಡಿನ ಸೀಟುಗಳು ಹಾರಿ ಹೋಗಿವೆ. ಹೊಲದಲ್ಲಿ ಹಾಕಿದ್ದ ತಗಡಿನ ಶೆಡ್‍ಗಳು ಕೂಡಾ ನಾಶವಾಗಿವೆ. ರಸ್ತೆ ಮೇಲೆ ಮರಗಳು ಉರುಳಿವೆ. ಅನೇಕ ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ತಾಲ್ಲೂಕಿನ ಗೆದಗೇರಿ ಮತ್ತು ಕುದ್ರಿಕೊಟಗಿ ರಸ್ತೆ ಮಧ್ಯೆ ಮರ ಉರುಳಿಬಿದ್ದಿದ್ದು ರಸ್ತೆ ಸಂಚಾರಕ್ಕೆ ಅಡೆತಡೆಯಾಗಿದ್ದು ಕಂಡು ಬಂತು.

ಶಾಸಕ ಭೇಟಿ: ತಾಲ್ಲೂಕಿನ ಬಳೂಟಗಿ ಗ್ರಾಮದಲ್ಲಿ ಗುರುವಾರ ರಾತ್ರಿ ಹೊತ್ತಿನಲ್ಲಿ ಬಿರುಗಾಳಿ ಮಳೆ ಅವಾಂತರದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ಶಾಸಕ ಹಾಲಪ್ಪ ಆಚಾರ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಮನೆಗೆ ಹೊಂದಿಸಿದ್ದ ತಗಡುಗಳು ಗಾಳಿಗೆ ಹಾರಿ ಹತ್ತಿರದಲ್ಲಿ ಕುಳಿತಿದ್ದ ಶಿವಲೀಲವ್ವ ಅವರ ಮೇಲೆ ಬಿದ್ದಿವೆ. ತೀವ್ರ ಗಾಯವಾಗಿದ್ದನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದೆವು. ಆದರೆ ದಾರಿಯಲ್ಲಿಯೇ ಮೃತರಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಶಾಸಕರಿಗೆ ವಿವರಿಸಿದರು.

ರೋಧಿಸುತ್ತಿದ್ದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು, ಪ್ರಕೃತಿ ವಿಕೋಪದಿಂದಾಗುವ ಈ ರೀತಿಯ ಘಟನೆಗಳಿಗೆ ಯಾರನ್ನೂ ದೂಷಿಸಲಾಗದು. ಸರ್ಕಾರದಿಂದ ಸಿಗಬಹುದಾದ ಪರಿಹಾರಗಳನ್ನು ತ್ವರಿತವಾಗಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಇಲಾಖೆಯಿಂದ ಕೈಗೊಳ್ಳಬಹುದಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ಸರ್ಕಾರ ನಿಗದಿಪಡಿಸಿದಷ್ಟು ಪರಿಹಾರದ ಮೊತ್ತವನ್ನು ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು
ಭರವಸೆಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.