ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುವೈದ್ಯೆ ಮೇಲಿನ ಅತ್ಯಾಚಾರಕ್ಕೆ ಖಂಡನೆ

ಆರೋಪಿಗಳಿಗೆ ಶಿಕ್ಷೆ ವಿಧಿಸಲು ವಿದ್ಯಾರ್ಥಿಗಳ ಪ್ರತಿಭಟನೆ
Last Updated 3 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕೊಪ್ಪಳ: ಹೈದರಾಬಾದ್‌ನ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರನಡೆಸಿ ಕ್ರೂರವಾಗಿ ಕೊಲೆ ಮಾಡಿದಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ಮತ್ತು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಓ)ನ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳುನಗರದ ಅಶೋಕ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟದೂರ ಮಾತನಾಡಿ, ಪಶುವೈದ್ಯೆ ದಿನನಿತ್ಯದ ಕೆಲಸ ಮುಗಿಸಿ ಮನೆಗೆ ತೆರಳುವಾಗ ನಾಲ್ಕು ಜನ ದುಷ್ಕರ್ಮಿಗಳು ಸಹಾಯ ಮಾಡುವ ನೆಪವೊಡ್ಡಿ ದುಷ್ಕೃತ್ಯ ಎಸಗಿದ್ದಾರೆ. ಉಸಿರುಗಟ್ಟಿಸಿ ಸಾಯಿಸಿ ಸುಟ್ಟಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥಘನಘೋರವಾದ ಕೃತ್ಯ ಎಂದು ಖಂಡಿಸಿದರು.

ಭಾರತ ಒಂದು ಮಹಾನ್ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹೊಂದಿರುವ ಸ್ತ್ರೀಯರನ್ನು ಗೌರವದಿಂದ ಕಾಣುವಂತಹ ನಾಡಾಗಿದ್ದು, ಇಂಥ ಘಟನೆಗಳು ಮರುಕಳಿಸುತ್ತಿರುವುದು ನೋವಿನ ಸಂಗತಿ. ಇದಕ್ಕೆಲ್ಲಾ ಇವತ್ತಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿರುವುದು. ಸ್ವಹಿತಾಸಕ್ತಿಗಳಿಗಾಗಿ ಪವಿತ್ರ ರಾಜಕೀಯ ವ್ಯವಸ್ಥೆಗೆ ದ್ರೋಹ ಬಗೆದು ನೊಂದವರ ನೋವಿನ ಸಮಸ್ಯೆಗಳಿಗೆ ಸ್ಪಂದಿಸದೆ ತಮ್ಮ ಅಧಿಕಾರದ ಲಾಲಸೆಗೆ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕಿರುಕುಳ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದರೂ ಶಿಕ್ಷೆ ಪ್ರಮಾಣ ಮಾತ್ರ ಕಡಿಮೆ ಇದೆ. ಮಹಿಳೆಯರ ಅಭದ್ರತೆಗೆ ಕಾರಣವಾದ ಅಶ್ಲೀಲ ಸಿನಿಮಾ, ಜಾಹೀರಾತುಗಳನ್ನು ನಿಷೇಧಿಸದೆ ವ್ಯಾಪಕ ಪ್ರಚಾರಕ್ಕೆ ಅನುಮತಿ ನೀಡುತ್ತಿರುವ ಪರಿಣಾಮ ಮಹಿಳೆಯರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ಹಾಗಾಗಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಜೂಡೋ, ಕರಾಟೆ ಕಲಿಸಿ ಸ್ತ್ರೀಯರ ರಕ್ಷಣೆಗೆ ಶಕ್ತಿ ತುಂಬಲು ಕ್ರಮ ಕೈಗೊಳ್ಳಬೇಕು ಎಂದುಎಐಡಿವೈಒ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ಒತ್ತಾಯಿಸಿದರು.

ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಸಂಚಾಲಕ ರಮೇಶ್ ವಂಕಲಕುಂಟಿ, ದೇವರಾಜ್, ಎಐಡಿವೈಓ ಸಂಘಟನೆಯ ಜಿಲ್ಲಾ ಸಂಘಟನಾಕಾರ ಶರಣಬಸವ ಪಾಟೀಲ್, ಕಾರ್ಯಕರ್ತರಾದ ರಾಯಣ್ಣ ಗಡ್ಡಿ, ಹುಲ್ಲೇಶ್, ಪ್ರಭು, ರಾಜಾಬಕ್ಷಿ, ಮಂಜುನಾಥ್, ಭೀಮೇಶ್, ಪ್ರಶಾಂತ್, ಅಫ್ರೀನ್, ಶಾಹಿದಾ, ಕೀರ್ತಿ, ಉಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT