ವಿದ್ಯಾರ್ಥಿಗಳಿಗೆ ಸಂಸತ್ತಿನ ಪರಿಕಲ್ಪನೆ ಅವಶ್ಯ

7
ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಉಪನ್ಯಾಸಕ ಎಸ್.ವಿ.ಮೇಳಿ

ವಿದ್ಯಾರ್ಥಿಗಳಿಗೆ ಸಂಸತ್ತಿನ ಪರಿಕಲ್ಪನೆ ಅವಶ್ಯ

Published:
Updated:
Deccan Herald

ಕೊಪ್ಪಳ: ದೇಶದ ಭವಿಷ್ಯದ ನಾಯಕರಾಗಿ ರೂಪುಗೊಳ್ಳಲಿರುವ ವಿದ್ಯಾರ್ಥಿಗಳಗೆ ಪ್ರಜಾಪ್ರಭುತ್ವದ ಬಗ್ಗೆ ಮಾಹಿತಿ ಹಾಗೂ ಸಂಸತ್ತಿನ ಪರಿಕಲ್ಪನೆ ಅವಶ್ಯವಾಗಿದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ವಿ.ಮೇಳಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ 'ಯುವ ಸಂಸತ್ ಸ್ಪರ್ಧೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಸಂಸತ್ತಿನ ಕಲಾಪಗಳ  ವಿವಿಧ ವಿದ್ಯಮಾನಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಶಾಲಾ ಸಂಸತ್ ರಚಿಸಲಾಗುತ್ತದೆ ಎಂದರು.

ಯುವಶಕ್ತಿಯು ರಾಷ್ಟ್ರದ ಮಹತ್ವದ ಶಕ್ತಿಯಾಗಿದೆ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದ್ದಾರೆ. ಸದನದಲ್ಲಿ ಸಭಾ ಅಧ್ಯಕ್ಷರ ಸ್ಥಾನವು ಪ್ರಮುಖವಾಗಿದ್ದು, ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸಭಾ ಅಧ್ಯಕ್ಷರು ಪ್ರಮಾಣ ಬೋಧಿಸುವರು. ಸಭಾಪತಿಗಳ ಆಸನದ ಎದುರಗಡೆಯ ಬಲಭಾಗದಲ್ಲಿ ಆಡಳಿತ ಪಕ್ಷದವರು, ಎಡಭಾಗದಲ್ಲಿ ವಿರೋಧ ಪಕ್ಷದವರು ಕುಳಿತುಕೊಳ್ಳುವರು. ಸಭಾಧ್ಯಕ್ಷರು ಆಗಮಿಸುವಾಗ ಸದಸ್ಯರೆಲ್ಲರು ಎದ್ದು ನಿಂತು ಗೌರವಿಸಬೇಕು. ಅಧ್ಯಕ್ಷರು ತಮ್ಮ ಆಸನ ಸ್ವೀಕರಿಸುವವರೆಗೆ ಸದಸ್ಯರೆಲ್ಲ ನಿಲ್ಲಬೇಕು ಎಂದು ಮಾಹಿತಿ ನೀಡಿದರು.

ಸದಸ್ಯರು ಯಾವುದೇ ಪ್ರಶ್ನೆಗಳನ್ನು ಕೇಳಬೇಕಾದರೆ ಮಾನ್ಯ ಸಭಾ ಅಧ್ಯಕ್ಷರೆ ಎಂದೇ ಕೇಳಬೇಕಾಗುತ್ತದೆ. ಇದಲ್ಲದೇ ವಿವಿಧ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ 'ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ' ಸಹಕಾರಿ ಆಗಲಿದೆ ಎಂದರು.

ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮದಲ್ಲಿ ನಾಲ್ಕು ತಂಡಗಳು ಭಾಗಿಯಾಗಿದ್ದು, ಆರೋಗ್ಯ, ಶಿಕ್ಷಣ, ಕೃಷಿ, ಕ್ಷೇಮಾಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ಒಂದು ತಂಡವನ್ನು ಜಿಲ್ಲೆಯ ವತಿಯಿಂದ ಆಯ್ಕೆ ಮಾಡಿ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯುವ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ತಾಲ್ಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಂಸತ್ ತಂಡದ ಸಭಾಪತಿ ಐಶ್ವರ್ಯ ಬೆಟಗೇರಿ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಆರ್.ಎಚ್.ಪತ್ತಾರ ಅಧ್ಯಕ್ಷತೆ ವಹಿಸಿದ್ದರು.

ಫ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಗೌಡರ, ಕೋಳೂರು ಸರ್ಕಾರಿ ಫ್ರೌಢಶಾಲೆ ಮುಖ್ಯ ಶಿಕ್ಷಕ ಅಶೋಕ ಕುಲಕರ್ಣಿ, ಶಿಕ್ಷಣ ಇಲಾಖೆ ಕನ್ನಡ ವಿಷಯ ಪರಿವೀಕ್ಷಕ ನೀಲಕಂಠಪ್ಪ ಕಂಬಳಿ ಇದ್ದರು.

ವೀರಣ್ಣ ಮೇಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !