ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಶಾಸಕರ ಕಚೇರಿ ಬಳಿ ವಿದ್ಯಾರ್ಥಿಗಳ ಧರಣಿ, ಮನವಿ ಸಲ್ಲಿಕೆ
Last Updated 17 ಫೆಬ್ರುವರಿ 2021, 12:34 IST
ಅಕ್ಷರ ಗಾತ್ರ

ಕುಷ್ಟಗಿ: ಸಮರ್ಪಕ ಸಾರಿಗೆ ವ್ಯವಸ್ಥೆ, ಹಾಸ್ಟೆಲ್‌ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಘಟಕದ ವಿದ್ಯಾರ್ಥಿ ಫೆಡರೇಶನ್ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ಬರೆದ ಮನವಿಯನ್ನು ಶಾಸಕರ ಅನುಪಸ್ಥಿತಿಯಲ್ಲಿ ಕಚೇರಿಯಲ್ಲಿದ್ದ ಸಿಬ್ಬಂದಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು,‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಕಾಲೇಜುಗಳು ಆರಂಭವಾಗಿ ತಿಂಗಳು ಕಳೆದಿದೆ. ತಾಲ್ಲೂಕಿನ ಬಹಳಷ್ಟು ಹಳ್ಳಿಗಳಿಂದ ಸಾಕಷ್ಟು ಸಂಖ್ಯೆ ವಿದ್ಯಾರ್ಥಿಗಳು ಬಸ್‌ಗಳನ್ನೇ ಅವಲಂಬಿಸಿ ಶಾಲೆ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಆದರೆ ಬಸ್‌ಗಳ ವ್ಯವಸ್ಥೆ ಇಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಶೈಕ್ಷಣಿಕ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಬಸ್‌ಗಳಿಗಾಗಿ ಕಾದು, ಕಾದು ಮರಳಿ ಮನೆಗೆ ಹೋಗುವ ಅನಿವಾರ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳು ನಿತ್ಯ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಶಾಲೆ ಕಾಲೇಜುಗಳ ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಬಸ್‌ ವ್ಯವಸ್ಥೆಯನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಬಹಳಷ್ಟು ಬಡ ಕುಟುಂಬಗಳಿಗೆ ಸೇರಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅನಿವಾರ್ಯತೆ ಇದ್ದರೂ ಹಾಸ್ಟೆಲ್‌ಗಳನ್ನು ತೆರೆಯುವುದಕ್ಕೆ ಇನ್ನೂ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ. ಹಾಸ್ಟೆಲ್‌ಗಳನ್ನು ಶೀಘ್ರದಲ್ಲಿ ಆರಂಭಿಸುವುದರ ಜತೆಗೆ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಬೇಕು’ ಎಂದರು.

‘ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರ ಕೊರತೆ ಇದೆ, ಕುಷ್ಟಗಿ ಪಟ್ಟಣದ ಜೂನಿಯರ್‌ ಕಾಲೇಜಿನಲ್ಲಿಯೂ ಇದೇ ಪರಿಸ್ಥಿತಿ ಇದೆ. ಇಂಗ್ಲಿಷ್ ಉಪನ್ಯಾಸಕರು ಇಲ್ಲವೇ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿಕೊಡಬೇಕು’ ಎಂದರು.

ಸ್ನಾತಕೋತ್ತರ ಪದವಿ ಕಾಲೇಜುಗಳು ಇಲ್ಲದ ಕಾರಣ ಶಿಕ್ಷಣ ಪಡೆಯುವುದಕ್ಕೆ ಈ ತಾಲ್ಲೂಕಿನ ಸಹಸ್ರ ಸಂಖ್ಯೆ ವಿದ್ಯಾರ್ಥಿಗಳು ದೂರದ ನಗರ ಪ್ರದೇಶಗಳಿಗೆ ಹೋಗುವಂತಾಗಿದೆ. ಇದು ಬಹಳಷ್ಟು ವಿದ್ಯಾರ್ಥಿಗಳಿಗೆ ಸಾಧ್ಯವಾಗದೆ ಉನ್ನತ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಹಾಗಾಗಿ ಪಟ್ಟಣದಲ್ಲಿ ಸ್ನಾತಕೋತ್ತರ ಪದವಿ ಕಾಲೇಜು ಮಂಜೂರು ಮಾಡಿಸಬೇಕು ಎಂಬುದನ್ನು ಮನವಿಯಲ್ಲಿ ವಿವರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಸಾರಿಗೆ ಬಸ್‌ ವ್ಯವಸ್ಥೆಗೆ ಸಂಬಂಧಿಸಿದ ಪಟ್ಟಣದ ಈಶಾನ್ಯ ಸಾರಿಗೆ ಬಸ್‌ ನಿಲ್ದಾಣ ನಿಯಂತ್ರಕ ಕಾಸೀಂಸಾಬ್‌ ಕಾಯಿಗಡ್ಡಿ ಈ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಎಸ್‌ಎಫ್‌ಐ ರಾಜ್ಯ ಘಟಕದ ಸಂಚಾಲಕ ಅಮರೇಶ ಕಡಗದ, ತಾಲ್ಲೂಕು ಘಟಕದ ಸಂಚಾಲಕ ಬಸವರಾಜ ಸಾರಥಿ, ಹುಸೇನ ಬನ್ನಿಗೋಳ, ಎಚ್‌.ಹನುಮಂತ, ಮೈನುದ್ದೀನ್‌ ಮುಲ್ಲಾ, ಮಂಜುನಾಥ ಕುರಿ, ನಾಗನಗೌಡ ಪೊಲೀಸಪಾಟೀಲ, ರವಿಕುಮಾರ ತುಪ್ಪದ, ಹನುಮೇಶ, ರಮೇಶ, ಶಂಕರಲಿಂಗ ಸೇರಿದಂತೆ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT