ಸೋಮವಾರ, ಮೇ 23, 2022
22 °C
ಉತ್ತಮ ಲಾಭ ತಂದ ವಾಣಿಜ್ಯ ಬೆಳೆಗಳ ಮಿಶ್ರ ಕೃಷಿ

ಗಂಗಾವತಿ: ಭತ್ತದ ನಾಡಲ್ಲಿ ವಾಣಿಜ್ಯ ಬೆಳೆ ತೋಟ, 16 ಎಕರೆ ಜಮೀನಿನಲ್ಲಿ ಕೃಷಿ

ಎನ್‌.ವಿಜಯ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಕಣ್ಣು ಹಾಯಿಸಿದಷ್ಟು ದೂರ ಅಚ್ಚ ಹಸಿರು, ಒಂದು ಕಡೆ ಬಾಳೆ, ಅಡಿಕೆ ಬೆಳೆ, ಮತ್ತೊಂದು ಕಡೆ ನಿಂಬೆ, ಪಕ್ಕದಲ್ಲಿ ಪೇರಲ, ಸಪೋಟ. ತೋಟದ ಸುತ್ತ ತೆಂಗಿನ ಮರಗಳು. ತೋಟಕ್ಕೆ ಹೊಕ್ಕರೆ ಸಾಕು ಕಣ್ಣಿಗೆ ತಂಪು.

ಇದು ಮಲೆನಾಡಿನ ಕೃಷಿ ತೋಟವಲ್ಲ. ಭತ್ತದ ನಾಡು ಎಂದೇ ಪ್ರಸಿದ್ಧಿ ಪಡೆದ ಗಂಗಾವತಿ ತಾಲ್ಲೂಕಿನ ಮಲಕನಮರಡಿ ಗ್ರಾಮದ ವೀರನಗೌಡ ಕುಲಕರ್ಣಿ ಅವರ ಕೃಷಿ ತೋಟ.

ಒಟ್ಟು 16 ಎಕರೆಯಲ್ಲಿ ಕೃಷಿ ತೋಟ ಮಾಡಿದ್ದು, ಇದರಲ್ಲಿ ಬಹು ಬೆಳೆಗಳಿಂದ ಕೂಡಿದ ವಾಣಿಜ್ಯ ಬೆಳೆಗಳಿವೆ. ಹಾಗಾಗಿಯೇ ಈ ವಿಧಾನವನ್ನು ವಾಣಿಜ್ಯ ಬೆಳೆಗಳ ಮಿಶ್ರ ಕೃಷಿ ಎನ್ನಬಹುದು.

ವೀರನಗೌಡ ಕುಲಕರ್ಣಿ ಪ್ರಥಮ ಪಿಯುಸಿ ಸೈನ್ಸ್ ಶಿಕ್ಷಣ ಪೂರೈಸಿ, ಕುಟುಂಬದ ಆರ್ಥಿಕ ಸಮಸ್ಯೆಗಳಿಂದ ಬೇಸಾಯದತ್ತ ಮುಖ ಮಾಡಿದರು. ಆರಂಭದಲ್ಲಿ ಗುತ್ತಿಗೆ ರೂಪದಲ್ಲಿ ಬೇಸಾಯ ಮಾಡಿ, ನಂತರ 16 ಎಕರೆ ಜಮೀನು ಖರೀದಿಸಿ ತೋಟ ಮಾಡಿದ್ದಾರೆ. ಇವರಿಗೆ ಮಗ ಶರಣಬಸವ ಕೃಷಿ ಚಟುವಟಿಕೆಯಲ್ಲಿ ನೆರವಾಗುತ್ತಾರೆ.

ತೋಟದಲ್ಲೇನಿದೆ: ಕಳೆದ 20 ವರ್ಷಗಳಿಂದ 6 ಎಕರೆಯಲ್ಲಿ ಹಸಿರು ಬಾಳೆ, 4 ಎಕರೆ ಏಲಕ್ಕಿ ಬಾಳೆ, 2 ಎಕರೆಯಲ್ಲಿ ಮಿಶ್ರ ಪೇರಲ, ಸಪೋಟ, 1 ಎಕರೆಯಲ್ಲಿ ಮಿಶ್ರ ಕರಿಬೇವು, ಪೇರಲ ಜೊತೆಗೆ 150 ತೆಂಗು, 160 ಸಿಲ್ವರ್ ರೋಕ್, 100 ಸಾಗವಾನಿ, 300 ಅಡಿಕೆ ಮರಗಳನ್ನು ಬೆಳೆಯಲಾಗಿದೆ.

ತೆಂಗುದಿಂದ ಆರಂಭ: ತೋಟದ ಸುತ್ತ 40 ಅಡಿಗೆ ಒಂದಂತೆ 4 ವರ್ಷದ ವರೆಗೆ ತೆಂಗು ಬೆಳೆದು, ನಡುವಿನ ಭೂಮಿಯಲ್ಲಿ ನುಗ್ಗೆ ಬೆಳೆ ತೆಗೆಯಲಾಗಿದೆ. ನಂತರ ಇದೀಗ 6 ಅಡಿಗೆ ಒಂದರಂತೆ ಬಾಳೆ, 8 ಅಡಿಗೆ ಒಂದರಂತೆ ಅಡಿಕೆ ಸಸಿ ಹಾಕಿದ್ದಾರೆ. ತೋಟದಲ್ಲಿ ಖಾಲಿ ಇರುವ ಎಲ್ಲೆಲ್ಲಿಯೂ, ಸಾಗವಾನಿ, ಟೇಕ್, ಹುಂಚಿಗಿಡ ಬೆಳೆಸಿ ಸಮೃದ್ಧಿ ಮಾಡಿದ್ದಾರೆ. ಇದೀಗ ಸ್ವತಃ ತಮ್ಮ ಜಮೀನಿನಲ್ಲೇ ಅಡಿಕೆ ಗಿಡದ ಸಸಿಗಳನ್ನು ಬೆಳೆದು ನಾಟಿ ಮಾಡುತ್ತಿದ್ದಾರೆ.

ಸಮಗ್ರ ಒಳಸುರಿ ಪೂರೈಕೆ: ತೋಟದಲ್ಲಿ 5 ಸೋಲಾರ್ ಚಾಲಿತ, 2 ವಿದ್ಯುತ್ ಚಾಲಿತ ಬೋರ್‌ವೆಲ್ ಇದ್ದು, ಬಾಳೆ, ನಿಂಬು, ಪೇರಲ, ಅಡಿಕೆ, ಸಾಗವಾನಿ ಗಿಡಿಗಳಿಗೆ ಡ್ರಿಪ್ ಪೈಪ್ ಮೂಲಕ ನೀರು ಹರಿಸಲಾಗುತ್ತದೆ. ಸಸಿಗಳಿಗೆ ಜೀವ ಅಮೃತವು ಸಹ ಡ್ರಿಪ್ ಪೈಪ್ ಮೂಲಕವೇ ಹರಿಯುವಂತೆ ಮಾಡಲಾಗಿದೆ.

ಆದಾಯ: ಸದ್ಯ ಬಾಳೆಹಣ್ಣು ಕೆಜಿ ₹10 ಇದ್ದು ವರ್ಷಕ್ಕೆ ₹2.5 ಲಕ್ಷ, ತೆಂಗು ₹1.30 ಲಕ್ಷ, ಅಡಿಕೆ ಕ್ವಿಂಟಲ್ ₹17 ಸಾವಿರ ಇದ್ದು, ಸದ್ಯಕ್ಕೆ ₹50 ಸಾವಿರ, ನುಗ್ಗೆ ₹45 ಸಾವಿರ, ಲಿಂಬೂ, ಸಪೋಟದಿಂದ ₹50 ಸಾವಿರ, ಕರಿಬೇವು ₹15 ಸಾವಿರ ಆದಾಯ ಬರುತ್ತಿದೆ. ಅಡಿಕೆ ಬೆಳೆ 10 ವರ್ಷಕ್ಕೆ ಬಂದರೆ, ಸಾಗವಾನಿ, ಟೇಕ್, ಸಿಲ್ವರ್ ರೋಕ್ ಮರಗಳು 15 ವರ್ಷಕ್ಕೆ ಬರಲಿದ್ದು, ಸದ್ಯ7ರಿಂದ 8 ವರ್ಷದ ಮರಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು