ಕುಷ್ಟಗಿ: ಶೇ 68.74ರಷ್ಟು ಮತ ಚಲಾವಣೆ

7

ಕುಷ್ಟಗಿ: ಶೇ 68.74ರಷ್ಟು ಮತ ಚಲಾವಣೆ

Published:
Updated:
Deccan Herald

ಕುಷ್ಟಗಿ: ಇಲ್ಲಿಯ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿ ಶುಕ್ರವಾರ ಶೇಕಡ 68.74ರಷ್ಟು ಶಾಂತಿಯುತ ಮತದಾನ ನಡೆದಿದೆ.

ಒಂದು ವಾರ್ಡ್‌ನಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 22 ವಾರ್ಡ್‌ಗಳಿಗೆ ಚುನಾವಣೆ ನಡೆಯಿತು. 27 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆವರೆಗೂ ತುರುಸಿನಿಂದ ಮತದಾನ ನಡೆಯಿತು. ಮತದಾನ ಅವಧಿ ಮುಗಿಯುವ ಸಮಯದಲ್ಲಿ ಮತಗಟ್ಟೆ ಆವರಣಗಳಲ್ಲಿ ಬೆರಳೆಣಿಕೆ ಮತದಾರರು ಇದ್ದರು.

4ನೇ ವಾರ್ಡ್ 7ನೇ ಮತಗಟ್ಟೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ, ಪತ್ನಿ ಶಶಿಕಲಾ ಮತ ಚಲಾಯಿಸಿದರು. 19ನೇ ವಾರ್ಡ್‌ನಲ್ಲಿ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಮತದಾನ ಮಾಡಿದರು. ಯುವಕರು, ಮಹಿಳೆಯರು ಸೇರಿದಂತೆ ಹಕ್ಕು ಚಲಾಯಿಸುವವರಲ್ಲಿ ಉತ್ಸಾಹ ಎದ್ದುಕಂಡಿತು.

ಎಲ್ಲ ಮತಗಟ್ಟೆಗಳಲ್ಲಿ  ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಸುರೇಶ ತಳವಾರ ತಿಳಿಸಿದರು.

15ನೇ ವಾರ್ಡ್‌ನ ಮತಗಟ್ಟೆಗಳಲ್ಲಿ ಏಜೆಂಟರು ಮತ್ತು ಮತದಾರರ ಮಧ್ಯೆ ಪದೇಪದೇ ವಾಗ್ವಾದ ನಡೆಯಿತು. ಬೇರೆ ಊರಿನ ಮತದಾರರು ಬಂದಿದ್ದಾರೆ ಎಂದು ಕೆಲವರು ವಾದಿಸಿ ಅವರ ಗುರುತಿನ ಚೀಟಿ ಬದಲು ಇತರೆ ಗುರುತಿನ ದಾಖಲೆಗಳನ್ನು ತೋರಿಸುವಂತೆ ಕೆಲ ಏಜೆಂಟರು ಒತ್ತಾಯಿಸಿದರು. ಇದರಿಂದಾಗಿ ಕೆಲಕಾಲ ಮತದಾನಕ್ಕೆ ಅಡ್ಡಿಯಾಗಿತ್ತು. ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಎಂ.ಗಂಗಪ್ಪ ಪರಿಸ್ಥಿತಿ ತಿಳಿಗೊಳಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಬೂತ್‌ನಲ್ಲಿ ಮತಯಾಚನೆ:  ಬಹುತೇಕ ಮತಗಟ್ಟೆಗಳಲ್ಲಿ ಠಿಕಾಣಿ ಹೂಡಿದ್ದ ವಿವಿಧ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ನಿಯಮ ಬಾಹಿರವಾಗಿ ಅಲ್ಲಿಯೇ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದುದು ಸಾಮಾನ್ಯವಾಗಿತ್ತು. ಪೊಲೀಸರು, ಚುನಾವಣಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ಅನೇಕ ಮತದಾರರ ವಾರ್ಡ್‌ಗಳು ಬದಲಾಗಿದ್ದರಿಂದ ಮತ ಚಲಾಯಿಸುವುದಕ್ಕೆ ವಾರ್ಡ್‌ಗಳಿಗೆ ಅಲೆದಾಡುತ್ತಿದಿದ್ದು ಕಂಡುಬಂದಿತು. 

ಸಿಂಧನೂರು ತಾಲ್ಲೂಕಿನವರಿಂದ ಮತದಾನ: ಪಟ್ಟಣದ 8ನೇ ವಾರ್ಡ್ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಸಿಂಧನೂರು ತಾಲ್ಲೂಕಿನ ಮತದಾರರು ಬಂದು ಮತಹಾಕಿದ್ದಾರೆ ಎಂದು ಸ್ಥಳೀಯರು ದೂರಿದರು. ಅಭ್ಯರ್ಥಿಯೊಬ್ಬರು ವಾಹನ ವ್ಯವಸ್ಥೆ ಮಾಡಿ ಅವರನ್ನು ಕರೆತಂದಿದ್ದರು ಎನ್ನಲಾಗಿದೆ.

ರಾಯಚೂರು ಜಿಲ್ಲೆಯ ಮತದಾರರ ಹೆಸರು ಸೇರ್ಪಡೆ ಮಾಡಿರುವ ವಿಷಯ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನ ವಹಿಸುವ ಮೂಲಕ ಅಕ್ರಮಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದ್ದಾರೆ ಎಂದು ಸ್ಥಳೀಯ ಮತದಾರರು ಆರೋಪಿಸಿದರು.

ಬೆಳ್ಳಿನಾಣ್ಯ ವಿತರಣೆ: ಆರೋಪ

ಪಟ್ಟಣದ 2ನೇ ವಾರ್ಡ್‌ನಲ್ಲಿ ಅಭ್ಯರ್ಥಿಯೊಬ್ಬರು ಮತದಾರರಿಗೆ ಬೆಳ್ಳಿ ನಾಣ್ಯ ಮತ್ತು ನಗದು ವಿತರಿಸುತ್ತಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದರು. ಆದರೆ, ಅಂತಹ ಯಾವುದೇ ಪ್ರಕರಣ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !