ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬಿಸಿಲಿಗೆ ಹೈರಾಣದ ಜನ

ಅಂತರ್ಜಲ ಕುಸಿತ: ತೋಟಗಾರಿಕೆ ಬೆಳೆಗಳಿಗೆ ಹಾನಿ
Last Updated 30 ಏಪ್ರಿಲ್ 2022, 2:28 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ತಾಪಮಾನ ದಿನೇ ದಿನೇ ಏರುತ್ತಿದೆ. ಬೇಸಿಗೆಯ ಧಗೆಯೂ ಹೆಚ್ಚುತ್ತಿದೆ. ಬಹುತೇಕ ಎಲ್ಲ ತಾಲ್ಲೂಕುಗಳಲ್ಲಿ ತಾಪಮಾನ 38 ರಿಂದ39 ಡಿಗ್ರಿ ಸೆಲ್ಸಿಯಸ್ಸ್‌ ಆಸುಪಾಸಿನಲ್ಲಿದೆ.

ಜಿಲ್ಲೆಯಲ್ಲಿಶುಕ್ರವಾರ 40.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಒಂದು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದೆ.

ಪಕ್ಕದಲ್ಲಿಯೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಸದಾ ಬರಗಾಲ, ಬಿಸಿಲು ನಾಡು ಎಂಬ ಹಣೆಪಟ್ಟಿಯನ್ನು ಜಿಲ್ಲೆ ಹಚ್ಚಿಕೊಂಡಿದೆ. ಕೊಪ್ಪಳ ತಾಲ್ಲೂಕು ಅರ್ಧ ಭಾಗ, ಗಂಗಾವತಿ, ಕಾರಟಗಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ರಕ್ತನಾಳಗಳಂತೆ ಹರಡಿಕೊಂಡಿದ್ದರು. ದಾರಿಯುದ್ದಕ್ಕೂ ನೆರಳು ಕಂಡು ಬರುವುದಿಲ್ಲ.

ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದ ಕಾರಣ ಕಣ್ಣಿಗೆ ಕಾಣಿಸುವಷ್ಟು ಹಸಿರು ಕಂಡರೂ ಮೈಮನಕ್ಕೆ ಮುದ ನೀಡುವುದಿಲ್ಲ. ಧಗೆ, ಶಕೆಯಿಂದ ದಣಿವಾರಿಸಿಕೊಳ್ಳಲು ಗಿಡ-ಮರಗಳ ಕೊರತೆ ಇದೆ. ಮರದ ನೆರಳಿನಲ್ಲಿ ಭತ್ತ ಬೆಳೆಯುವುದಿಲ್ಲ ಎಂಬ ಕಾರಣಕ್ಕೆ ಇದ್ದ ಗಿಡಗಳನ್ನು ಕಡಿದು ಹಾಕುವುದರಿಂದ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚುವಂತೆ ಮಾಡುತ್ತದೆ.

ಒಣಬೇಸಾಯದ ಮತ್ತು ಎರೆ ಮಣ್ಣಿನ ಭಾಗಗಳಾದ ಕುಕನೂರು, ಯಲಬುರ್ಗಾ, ಮಸಾರಿ
ಭಾಗದ ಕುಷ್ಟಗಿ, ಕನಕಗಿರಿಯಲ್ಲಿ ಬಿಸಿಲಿನ ರೌದ್ರನರ್ತನ ಇನ್ನೂ ಜೋರಾಗಿಯೇ ಇರುತ್ತದೆ. ಬಿಸಿಲಿನಲ್ಲಿ ಪ್ರಯಾಣ ಮಾಡುವುದು ಈ ಭಾಗದಲ್ಲಿ ಪ್ರಯಾಸದ ಕೆಲಸ. ಮಾರ್ಚ್‌ ತಿಂಗಳಲ್ಲಿ ಶಿವರಾತ್ರಿ ಎಂದು ಶಿವ, ಶಿವ ಎಂದು ಆರಂಭವಾಗುವ ಬಿಸಿಲು ಜೂನ್‌ 15ರವರೆಗೆ ತನ್ನ ಪ್ರಖರತೆಯನ್ನು ಉಳಿಸಿಕೊಳ್ಳುವುದರಿಂದ ಇದಕ್ಕೆ ಬಿಸಿಲು ನಾಡು ಎಂಬ
ಅನ್ವರ್ಥ ಇದೆ.

ಅಲ್ಪಸ್ವಲ್ಪ ಅಕಾಲಿಕ ಮಳೆಯಾದರೂ ಇಳೆ ತಂಪಾಗುವುದಿಲ್ಲ. ಅರಣ್ಯ ಇದ್ದರೂ ಅತ್ಯಂತ ಕಡಿಮೆ ಪ್ರಮಾಣದ ಕುರುಚಲು ಕಾಡು ಇದೆ. ಬೆಟ್ಟ, ಗುಡ್ಡಗಳು ಬಿಸಿಲು ಹೀರಿಕೊಂಡು ಸಂಜೆ ಬಿಸಿಯನ್ನು ಉಗುಳುವುದರಿಂದ ಮತ್ತಷ್ಟು ತೊಂದರೆಯಾಗುತ್ತದೆ.

ತಂಪು ಪಾನೀಯ ಭರಾಟೆ: ಬಿಸಿಲಿನ ಧಗೆಯಿಂದ ಕಂಗೆಟ್ಟ ಜನ ಮೊಸರು, ಮಜ್ಜಿಗೆ, ಎಳನೀರು, ಕಲ್ಲಂಗಡಿ, ಕರಬೂಜ ಹಣ್ಣಿನ ರಸಾಯಣದ ಮೊರೆ ಹೋಗುತ್ತಾರೆ. ಬೇಸಿಗೆಯಲ್ಲಿ ತಾತ್ಕಾಲಿಕವಾಗಿ ತಲೆ ಎತ್ತುವ ತರೇವಾರಿ ಶರಬತ್ತು ಮಾರಾಟ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ.

ಶರಬತ್ತು, ಲಿಂಬು ಸೋಡಾ, ಜೀರಾ, ಐಸ್‌ಕ್ರಿಮ್ ಮಾರಾಟದ ಸುಗ್ಗಿ. ಬೇಸಿಗೆಯಲ್ಲಿ ಕೃಷಿ ಕಾರ್ಯ ಕಡಿಮೆ ಇದ್ದರೂ ಹೊಲ ಹರಗುವುದು, ಕಳೆ ಸುಡುವುದು ಸೇರಿದಂತೆ ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸಲು ರೈತರು ಬೆಳಗಿನ ಜಾವವೇ ಹೊಲಗಳಿಗೆ ತೆರಳುವುದು ಕಂಡು ಬರುತ್ತದೆ.ಸೂರ್ಯ ನೆತ್ತಿ ಮೇಲೆ ಬಂದರೆ ದಿನದ ಕಾರ್ಯ ಮುಗಿಸಿ ಮನೆಯತ್ತ ತೆರಳುವ ರೈತಾಪಿ ವರ್ಗವನ್ನು
ಕಾಣಬಹುದು.

ಅರವಟಿಗೆ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಲುವಾಗಿ ಪ್ರಮುಖ ವೃತ್ತ, ದೊಡ್ಡ ಅಂಗಡಿ, ದೇವಸ್ಥಾನ, ಪೊಲೀಸ್‌ ಠಾಣೆಗಳಲ್ಲಿ ಅರವಟಿಗೆಗಳನ್ನು ಇಟ್ಟು ನೀರು ನೀಡುವ ಕಾಯಕ ಮಾಡುವುದು ಕಂಡು ಬರುತ್ತದೆ. ಕೆಲವು ಉತ್ಸವ, ಜಾತ್ರೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳವರು ತಂಪು ಪಾನೀಯ ಹಂಚುವ ಮಾದರಿ ಕೆಲಸವನ್ನು ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT