ಶನಿವಾರ, ಜುಲೈ 24, 2021
22 °C
ಜಿಲ್ಲಾಮಟ್ಟದ ಪ್ರಾಣಿ ದಯಾ ಸಂಘದ ಸಮಿತಿ ಸಭೆಯಲ್ಲಿ ಸೂಚನೆ

ಅಕ್ರಮ ಪ್ರಾಣಿ ಸಾಗಣೆ ತಡೆಗೆ ಕ್ರಮವಹಿಸಿ: ಡಿಸಿ ವಿಕಾಸ್ ಕಿಶೋರ್ ಸುರಳ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜು.21 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಪ್ರಾಣಿಗಳ ಸಾಗಾಣಿಕೆ ಹಾಗೂ ವಧೆಯಾಗುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಾಣಿ ದಯಾ ಸಂಘದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನುವಾರು ಸಾಗಾಣಿಕೆ ಕಾಯ್ದೆ-2006 ರನ್ವಯ ಅಕ್ರಮವಾಗಿ ಪ್ರಾಣಿಗಳ ಸಾಗಾಣಿಕೆ ನಿಯಮ ಬಾಹಿರವಾಗಿದ್ದು, ಎಲ್ಲ ವಯಸ್ಸಿನ ಆಕಳು, ಆಕಳು ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣ ಹಾಗೂ ಉಚ್ಚ ನ್ಯಾಯಾಲಯದ ಆದೇಶದನ್ವಯ ಒಂಟೆಗಳನ್ನು ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಅತ್ಯವಶ್ಯಕತೆ ಇದ್ದು, ಈ ಕುರಿತು ಸಂಬಂಧಿಸಿದ ತಂಡಗಳು ಸೂಕ್ತ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನಿರ್ದಿಷ್ಟ ಪಡಿಸಿದ ಪ್ರಾಣಿ, ಗೋವುಗಳ ವಧೆಗೆ ನಿಷೇಧವಿದೆ. ಅದೇ ರೀತಿ ನಿರ್ದಿಷ್ಟ ಪಡಿಸಿದ ಪ್ರಾಣಿ, ಗೋವುಗಳ ವಧೆಗೆ ವಿನಾಯ್ತಿ ನೀಡಲಾಗಿದೆ. ವಿನಾಯ್ತಿ ಇರುವ ಪ್ರಾಣಿಗಳನ್ನು ಹೊರತುಪಡಿಸಿ ನಿಷೇಧ ಇರುವ ಪ್ರಾಣಿಗಳ ವಧೆಯನ್ನು ತಡೆಯಬೇಕಾಗಿದೆ. ಒಂಟೆಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಒಂಟೆಗಳನ್ನು ತಂದು ವಧೆ ಮಾಡುವ ಸಂಭವವಿದೆ. ಆದ್ದರಿಂದ ಒಂಟೆಗಳ ಸಾಗಾಣಿಕೆ ಮತ್ತು ವಧೆಯನ್ನು ತಡೆಯಲು ಅಗತ್ಯ ಕ್ರಮ ವಹಿಸುವಂತೆ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಿರ್ದಿಷ್ಟಪಡಿಸಿದ ವಧಾ ಸ್ಥಳದಲ್ಲಿಯೇ ಮಾತ್ರ ವಧೆ ಮಾಡಬೇಕು. ಆದರೆ ಜಿಲ್ಲೆಯ ಕೊಪ್ಪಳ ನಗರದಲ್ಲಿ ಮಾತ್ರ ಒಂದು ನೋಂದಾಯಿತ ಸರ್ಕಾರಿ ವಧಾಗಾರವಿದೆ. ಉಳಿದ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಧಾಗಾರಗಳಿಲ್ಲ. ವಧಾಗಾರಗಳು ಇಲ್ಲದಿರುವ ನಗರ/ಗ್ರಾಮಗಳಲ್ಲಿ ಸ್ಥಳೀಯ ಆಡಳಿತ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ನಿಯಮಾನುಸಾರ ವಧೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಇರುವ, ವಧೆ ನಡೆಸಬಹುದಾದಂತಹ ಸ್ಥಳಗಳನ್ನು ಸ್ಥಳೀಯ ಆಡಳಿತ ಗುರುತಿಸಿ, ಪಟ್ಟಿಮಾಡಿ ನೀಡುವಂತೆ ಹಾಗೂ ಇದೇ ಜು.19 ರೊಳಗಾಗಿ ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಿ ಕ್ರಮವಹಿಸಲು ತಿಳಿಸಿದರು.

ಬಕ್ರೀದ್ ಹಬ್ಬದ ಮುಂಚಿತವಾಗಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಗ್ರಾಮವಾರು ಜನಪ್ರತಿನಿಧಿಗಳ ಹಾಗೂ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ಕರೆಯಬೇಕು. ಪ್ರಾಣಿ ಕಲ್ಯಾಣ ಕಾಯ್ದೆ, ಕಾನೂನು ಮತ್ತು ನಿಯಮಗಳ ಕುರಿತು ಹಾಗೂ ನಿಯಮ ಬಾಹಿರ ಪ್ರಾಣಿ ಸಾಗಾಣಿಕೆ ಮತ್ತು ವಧೆಗೆ ಇರುವ ದಂಡನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಿಯಮಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ಕಂದಾಯ, ಪೊಲೀಸ್, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಶುಸಂಗೋಪನಾ ಇಲಾಖೆ ಕ್ರಮವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಸಿಪಿಒ ಟಿ.ಕೃಷ್ಣಮೂರ್ತಿ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ನಾಗರಾಜ್ ಎಚ್., ಸಮಿತಿ ಸದಸ್ಯರು, ಗೋಶಾಲೆಯ ಪ್ರತಿನಿಧಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು