ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವಿದ್ಯಾರ್ಥಿಗಳಿಗೆ ಇಲ್ಲ ಶುದ್ಧ ನೀರು, ಉಪ್ಪು ನೀರೇ ಗತಿ'

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ: ಬಗೆಹರಿಯದ ಸಮಸ್ಯೆ
Last Updated 20 ಡಿಸೆಂಬರ್ 2018, 13:54 IST
ಅಕ್ಷರ ಗಾತ್ರ

ಕೊಪ್ಪಳ: 'ಅಳವಂಡಿಯಲ್ಲಿ ಆರ್‌ಎಂಎಸ್‍ಎ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಅಲ್ಲಿನ ವಿದ್ಯಾರ್ಥಿಗಳು ನಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿ ನೀರಿನ ಸಮಸ್ಯೆ ಬಗೆ ಹರಿಸಿ' ಎಂದು ಒತ್ತಾಯಿಸಿದ್ದಾರೆ ಸದಸ್ಯ ಸಿದ್ದಲಿಂಗಸ್ವಾಮಿ ಅಳವಂಡಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ,ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ನೀರಿನ ವ್ಯವಸ್ಥೆ ಮಾಡಬೇಕು ಎಂದುಒತ್ತಾಯಿಸಿದರು.

ಇದಕ್ಕೆ ಬಿಇಒ ಶೋಭಾ ಬಾಗೆವಾಡಿ ಅವರು ಪ್ರತಿಕ್ರಿಯಿಸಿ, 'ಅಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಉಪ್ಪು ನೀರು ನಿತ್ಯ ಬಳಕೆ ಮಾಡಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ನಾವು ಗ್ರಾಮ ಪಂಚಾಯಿತಿಗೆ ಪತ್ರ ಬರೆದರೂ ಸ್ಪಂದನೆ ದೊರೆತಿಲ್ಲ' ಎಂದು ಸದಸ್ಯರ ಗಮನಕ್ಕೆ ತಂದರು.

'ಜೆಸ್ಕಾಂ ಇಲಾಖೆಯಎಂಜಿನಿಯರ್‌ಗಳು ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಇನ್ನು ಲೈನ್‍ಮನ್‍ಗಳಂತೂ ಜನರಿಂದ ಹಣ ಪಡೆದು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನೂರೆಂಟು ಸಮಸ್ಯೆಗಳಿದ್ದರೂ ಒಬ್ಬರೂ ಕಣ್ತೆರೆದು ನೋಡುತ್ತಿಲ್ಲ. ಹೀಗಾದರೆ ಜನರ ಸಮಸ್ಯೆ ಕೇಳೋರು ಯಾರು' ಎಂದು ಜೆಸ್ಕಾಂ ವಿರುದ್ದಬಹುತೇಕಸದಸ್ಯರು ಎದ್ದು ನಿಂತು ಇಲಾಖೆಯ ಕಿರಿಯ ಎಂಜಿನಿಯರ್ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಸದಸ್ಯ ನಿಂಗಪ್ಪ ಯತ್ನಟ್ಟಿ ಮಾತನಾಡಿ, 'ವದ್ನಾಳ ಗ್ರಾಮದಲ್ಲಿ ವಿದ್ಯುತ್ ಲೈನ್ ಸಮಸ್ಯೆಯಿದೆ. ಈ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಸ್ಪಂದನೆಯಿಲ್ಲ. ಶಾಸಕರು ಸೇರಿದಂತೆ ನಾವು ಈಚೆಗೆ ಗ್ರಾಮಕ್ಕೆ ತೆರಳಿದ್ದ ವೇಳೆ ಅಲ್ಲಿನ ಜನರು ನಮಗೆ ಬಾಯಿಗೆ ಬಂದಂತೆಬೈದಿದ್ದಾರೆ. ಅಧಿಕಾರಿಗಳು ಮಾಡುವ ವಿಳಂಬಕ್ಕೆ ನಾವು ಜನರಿಂದ ಉಗಿಸಿಕೊಳ್ಳಬೇಕಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೂಪಾಕ್ಷಪ್ಪ ಗುಂಗಾಡಿ ಮಾತನಾಡಿ, 'ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ಉಲ್ಬಣಿಸುತ್ತಿವೆ. ಶಾಲೆಗಳಲ್ಲೇ ಸರಿಯಾದ ನೀರಿನ ವ್ಯವಸ್ಥೆಯಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿಲ್ಲ. ಈ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ಸಮಸ್ಯೆ ಬಗೆ ಹರಿದಿಲ್ಲ. ಬರಿ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಲಾಗುತ್ತಿದೆಯೇ ಹೊರತು ಅಲ್ಲಿನ ಸಮಸ್ಯೆ ಬಗೆ ಹರಿಸಿಲ್ಲ' ಎಂದು ಆರೋಪಿಸಿದರು.

'ಇನ್ನೂ ತಾಲ್ಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದಾರೆ. ಅವುಗಳಲ್ಲಿ ಶುದ್ಧ ನೀರು ಬರುತ್ತಿಲ್ಲ. ಎಲ್ಲವೂ ದುರಸ್ತಿಯಲ್ಲಿವೆ. ಸರಿಯಾದ ನಿರ್ವಹಣೆ ಕೊರತೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ಘಟಕಕ್ಕೂ 7-8 ಲಕ್ಷ ವೆಚ್ಚ ಮಾಡಲಾಗಿದೆ. ಸರ್ಕಾರದ ಹಣ ಸುಮ್ಮನೆ ಪೋಲಾಗುತ್ತಿದೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡಿ ಜನರಿಗೆ ಕುಡಿಯುವ ನೀರು ದೊರೆಯುವಂತೆ ಮಾಡಬೇಕು' ಎಂದು ಆಗ್ರಹಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ರಾಮಾಂಜಿನೇಯ ಮಾತನಾಡಿ, 'ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಈಚೆಗೆ ಜಾರಿಯಾಗಿದ್ದು, ತಾಲ್ಲೂಕಿನ ಜನರು ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ನಂತರ ಚಿಕಿತ್ಸೆ ಅನುಸಾರ ಆಯಾ ಆಸ್ಪತ್ರೆಗಳಿಗೆ ರೋಗಿಗಳನ್ನು ರವಾನೆ ಮಾಡಲಿದ್ದಾರೆ' ಎಂದು ವಿವರಿಸಿದರು.

ತಾಲ್ಲೂಕು ಪಂಚಾಯಿತಿಅಧ್ಯಕ್ಷ ಬಾಲಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಂಕ್ರಮ್ಮ ಉಪಲಾಪುರ, ಸ್ಥಾಯಿ ಸಮಿತಿ ಅಧ್ಯಕ್ಷ ಯಂಕಪ್ಪ ಹೊಸಳ್ಳಿ,ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT