ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಕ, ರೈತ, ಸೈನಿಕರು ದೇಶದ ಸಂಪತ್ತು’: ಶಾಸಕ ಪರಣ್ಣ ಮುನವಳ್ಳಿ

ಪಿಯು ಕಾಲೇಜು ನೌಕರರ ಒಕ್ಕೂಟದ ಜಿಲ್ಲಾ ಶೈಕ್ಷಣಿಕ ಸಮ್ಮೇಳನಕ್ಕೆ ಚಾಲನೆ
Last Updated 22 ಜನವರಿ 2023, 6:57 IST
ಅಕ್ಷರ ಗಾತ್ರ

ಗಂಗಾವತಿ: ಯೋಗ್ಯ ಶಿಕ್ಷಣ ಪ್ರತಿಯೊಂದು ಕ್ಷೇತ್ರಕ್ಕೂ ಭದ್ರ ಬುನಾದಿ. ಶಿಕ್ಷಕ, ರೈತ, ಸೈನಿಕರು ಈ ದೇಶದ ದೊಡ್ಡ ಆಸ್ತಿ. ಸಾಧಕರನ್ನು ಸೃಷ್ಟಿಸಿ, ಭವ್ಯ ಭಾರತ ನಿರ್ಮಿಸಲು ಶ್ರಮಿಸುವ ಏಕೈಕ ವ್ಯಕ್ತಿಯೆಂದರೆ ಅದು ಶಿಕ್ಷಕ ಮಾತ್ರ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ‌ರು.

ನಗರದಲ್ಲಿ ಶನಿವಾರ ನಡೆದ ಅರಿವಿನೆಡೆಗೆ ಹೊಸ ಹೆಜ್ಜೆ ತತ್ವದಡಿಯ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ನೌಕರರ ಒಕ್ಕೂಟದ ಜಿಲ್ಲಾ ಶೈಕ್ಷಣಿಕ ಸಮ್ಮೇಳನ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಒಂದು ಪವಿತ್ರವಾದ ಕ್ಷೇತ್ರ. ಶಿಕ್ಷಣದಿಂದ ಮಾತ್ರ ವ್ಯಕ್ತಿ‌ಯಲ್ಲಿ ಬದಲಾವಣೆ ಕಾಣಲು ಸಾಧ್ಯ. ಗುರುವಿಗೆ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬ ಮಾತಿನಂತೆ ಶಿಕ್ಷಣ ಪಡೆದ ಪ್ರತಿವ್ಯಕ್ತಿ ಶಿಕ್ಷಕರನ್ನು ಗೌರವ ದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಕೊಪ್ಪಳ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯೆಂದು ಪರಿಗಣಿಸಲಾಗುತ್ತಿದೆ. ರಾಜ್ಯದ ಪಿಯುಸಿ ಫಲಿತಾಂಶದಲ್ಲಿ ಕೊಪ್ಪಳ 16ನೇ ಸ್ಥಾನದಲ್ಲಿದ್ದು, ಉಪನ್ಯಾಸಕರು ಹೆಚ್ಚಿನ ಫಲಿತಾಂಶ ಪ್ರಗತಿ ಸಾಧಿಸಬೇಕಿದೆ. ಸದ್ಯದ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಂತೆ ಮುಂದಿನ 3 ವರ್ಷ‌ಗಳ ಜಿಲ್ಲಾ ಶಿಕ್ಷಣ ಸಮ್ಮೇಳದ ಎಲ್ಲ ಖರ್ಚು ವಿದ್ಯಾನಿಕೇ‌ತನ ಸಂಸ್ಥೆ ಭರಿಸಲಿದ್ದು,‌ ಎಲ್ಲ ಉಪನ್ಯಾಸ‌ಕರು 2025ರ ವೇಳೆಗೆ ಕೊಪ್ಪಳ ಜಿಲ್ಲೆ ರಾಜ್ಯಕ್ಕೆ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿ ತಾಂಶದಲ್ಲಿ ಪ್ರಥಮ ಸ್ಥಾನ ಬರುವಂತೆ ಶ್ರಮಿಸಬೇಕು ಎಂದರು.

ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಮಾತನಾಡಿ, ಜಗತ್ತಿನಲ್ಲಿ ಬೋಧಕರಗಿಂತ ಉತ್ತಮ ಕೆಲಸ ಮಾಡುವ ವ್ಯಕ್ತಿ ಬೇರೊ‌‌ಬ್ಬರಿಲ್ಲ. ಭವ್ಯ ಭಾರತ ನಿರ್ಮಾಣಕ್ಕೆ ಬೇಕಾದ ಯುವಜನತೆ ಕಟ್ಟುವಲ್ಲಿ ಶಿಕ್ಷಕರ ಶ್ರಮ ಅಪಾರ. ಅಂತ ಶಿಕ್ಷಕರಿಗೆ ಇಂದಿನ ದಿನಗಳಲ್ಲಿ ಮನ್ನಣೆ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಶಿವಾನಂದ ಮೇಟಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತು ಉಪನ್ಯಾಸ ನೀಡಿದರು.

ನಂತರ ನಿವೃತ್ತ ಉಪನ್ಯಾಕಸರಿಗೆ, ಸಾಹಿತಿಗಳಿಗೆ, 2022ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಅತ್ಯುತ್ತಮ ಅಂಕಗಳಿಸಿದ ಅನುದಾನಿತ, ಅನುದಾನ ರಹಿತ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ₹2 ಸಾವಿರ ನಗದು ಬಹುಮಾನ ಜೊತೆಗೆ ಪ್ರಶಸ್ತಿ ವಿತರಿಸಿ, ಸನ್ಮಾನಿಸಲಾಯಿತು.

ಜಿಲ್ಲಾ ಉಪನಿ‌ರ್ದೇಶಕ ಮೃಣಾಲ್ ಸಾಹುಕಾರ,ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀಕಂಠೇಗೌಡ, ನಿಂಗೇಗೌಡ, ಪ್ರಾಚಾರ್ಯರಾದ ಶಾಂತಪ್ಪ ಟಿ.ಸಿ, ಬಸಪ್ಪ ನಾಗೋಲಿ, ಅನಿಲ್ ಕುಮಾರ್, ಜಿ.ಎಂ ಭೂಸನೂರಮಠ, ಶರಣಪ್ಪ ಬೇಲೇರಿ, ರವಿ ಚವ್ಹಾಣ, ಎಚ್.ಬಿ ಜಗ್ಗಲ್, ಶರತ್ ಚಂದ್ರ ಸೇರಿ ಜಿಲ್ಲೆಯ ಉಪನ್ಯಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT