ಗುರುವಾರ , ಜುಲೈ 29, 2021
20 °C
ವಿಜಯನಗರದ ಕಾಲುವೆ ಆಧುನೀಕರಣ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಚಾಲನೆ

ಕಾಲುವೆ ನಿರ್ಮಾಣಕ್ಕೆ ₹ 371 ಕೋಟಿ ಟೆಂಡರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ 15ಕ್ಕೂ ಹೆಚ್ಚು ಕಾಲುವೆಗಳ ಆಧುನೀಕರಣಕ್ಕೆ ₹ 371 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಹೇಳಿದರು. 

ತಾಲ್ಲೂಕಿನ ಹುಲಿಗಿಯಲ್ಲಿ ಮಂಗಳವಾರ ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬರುವ ಎಲ್ಲ ಹಳೆಯ ಉಪ ಕಾಲುವೆಗಳಿಗೆ ಕಾಂಕ್ರಿಟ್‌ ಲೈನಿಂಗ್‌ ಮಾಡಿ, ನೀರು ವ್ಯರ್ಥವಾಗುವುದನ್ನು ತಡೆದು ರೈತರಿಗೆ ಹೆಚ್ಚಿನ ನೀರನ್ನು ಒದಗಿಸುವುದು ಕಾಲುವೆ ಆಧುನೀಕರಣ ಯೋಜನೆಯ ಉದ್ದೇಶವಾಗಿದೆ. ಕಳೆದ ವರ್ಷವೇ ಕೆಲ ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಗಂಗಾವತಿ, ರಾಯಬಸವ ಇತ್ಯಾದಿ ಕಡೆಗಳಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಈ ಭಾಗದ ಎಲ್ಲ ಕಾಲುವೆಗಳನ್ನು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಆಧುನೀಕರಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಬಳಿಕ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೂಚನೆಯಂತೆ ಈ ಕಾಮಗಾರಿಗೆ ಟೆಂಡರ್‌ ಕರೆಯಲಾಗಿತ್ತು ಎಂದು ಮಾಹಿತಿ ನೀಡಿದರು.

ಹಿಂದಿನ ವರ್ಷ ಬೆಳೆ ಇತ್ತು. ರೈತರೆಲ್ಲರೂ ಬೆಳೆ ತೆಗೆದ ನಂತರ ಕಾಮಗಾರಿ ಆರಂಭಿಸಲು ಮನವಿ ಮಾಡಿದ್ದರು. ಆದ ಕಾರಣ ಈ ಕಾಮಗಾರಿ ಆರಂಭವನ್ನು ರದ್ದುಗೊಳಿಸಲಾಗಿತ್ತು. ಈಗ ಫಸಲು ತೆಗೆದಿದ್ದು, ಈ ಭಾಗದಲ್ಲಿ ಯಾವುದೇ ಕೃಷಿ ಚಟುವಟಿಕೆಗಳು ಇಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ ರೈತರ ಸಭೆ ಕರೆದು ಅವರೊಂದಿಗೆ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಮಾರು 11 ಕಿ.ಮೀ ಉದ್ದದ ಒಟ್ಟು ಎರಡು ಕಾಲುವೆಗಳ ಈ ಕಾಮಗಾರಿಯಲ್ಲಿ ಒಂದು ಕಾಲುವೆಗೆ ₹ 14.65 ಕೋಟಿ ಹಾಗೂ ಮತ್ತೊಂದು ಕಾಲುವೆಗೆ ₹ 10 ಕೋಟಿ ಸೇರಿದಂತೆ ಒಟ್ಟು ₹ 24 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೊಂಡಿದೆ. ಗುಣಮಟ್ಟದ ಕಾಮಗಾರಿ ನಡೆಯಬೇಕು. ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಟೆಂಡರ್‌ದಾರರಿಗೆ ಸೂಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌, ಕಾರ್ಯನಿರ್ವಾಹಕ ಅಧಿಕಾರಿ ವೆಂಕೋಬಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ, ಜಿಲ್ಲಾ ಕಾಂಗ್ರೆಸ್‌ ಮಾದ್ಯಮ ವಕ್ತಾರ ರವಿ ಕುರಗೋಡ ಇದ್ದರು.          

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.