ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆ: ‘ಕಲ್ಯಾಣ ರಾಜ್ಯ’ಕ್ಕೆ ವಿಸ್ತರಣೆಯ ಸವಾಲು

ಸವಾಲು ಎದುರಿಸಲು ತೆರೆಮರೆಯ ಕಸರತ್ತು
Published 24 ಮೇ 2023, 19:30 IST
Last Updated 24 ಮೇ 2023, 19:30 IST
ಅಕ್ಷರ ಗಾತ್ರ

ಕೊಪ್ಪಳ: ಪಕ್ಷ ಸ್ಥಾಪನೆ ಮಾಡಿ ಐದು ತಿಂಗಳುಗಳ ಅವಧಿಯಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ (ಕೆಆರ್‌ಪಿಪಿ) ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೊತ್ತಿಗೆ ಪಕ್ಷವನ್ನು ವಿಸ್ತರಿಸುವ ಮತ್ತು ತಳಮಟ್ಟದಿಂದ ಸಂಘಟಿಸುವ ಸವಾಲು ಇದೆ.

ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕೆಆರ್‌ಪಿಪಿ ರಾಜ್ಯದ 46 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೂ ಗಂಗಾವತಿ ಕ್ಷೇತ್ರದಲ್ಲಿ ಮಾತ್ರ ’ಫುಟ್‌ಬಾಲ್‌’ ಗೆಲುವಿನ ಖಾತೆ ತೆರೆದಿದೆ. ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಸ್ಪರ್ಧೆ ಮಾಡಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಈ ಪಕ್ಷ 48,577 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿ ಗಮನ ಸೆಳೆದಿದೆ.

ಇದೇ ಪಕ್ಷದಿಂದ ಹುನಗುಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಲಿ ಹಿರೇಮಠ 33,790, ನಾಗಠಾಣ ಅಭ್ಯರ್ಥಿಯಾಗಿದ್ದ ಬಂಡಿ ಹನುಮಂತಪ್ಪ 10,770, ಲಿಂಗಸೂರು ಕ್ಷೇತ್ರದ ಆರ್‌. ರುದ್ರಯ್ಯ 13,764 ಮತ್ತು ಸಂಡೂರು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಕೆ.ಎಸ್‌. ದಿವಾಕರ್‌ 31,375 ಮತಗಳನ್ನು ಪಡೆದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ಒಡ್ಡಿದರು.

ವಿಧಾನಸಭಾ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಈಗಿನಿಂದಲೇ ಅಖಾಡ ಸಜ್ಜುಗೊಳಿಸುತ್ತಿರುವ ಕೆಆರ್‌ಪಿಪಿ ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ ಇತ್ತೀಚೆಗೆ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಮೊದಲ ಕಾರ್ಯಕಾರಿಣಿ ಸಭೆ ನಡೆಸಿತ್ತು. ಈಗಾಗಲೇ ಕಿನ್ನಾಳ, ಆನೆಗೊಂದಿ ಮತ್ತು ಇರಕಲ್‌ಗಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕಾರಿಣಿ ಸಭೆಗಳನ್ನು ನಡೆಸಿದೆ.

ಅಭಿವೃದ್ಧಿಯ ನಿರೀಕ್ಷೆ ಬೆಟ್ಟದಷ್ಟು: ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್‌ ಸದಸ್ಯರಾಗಿ ಪ್ರವಾಸೋದ್ಯಮ ಖಾತೆ ನಿರ್ವಹಿಸಿದ್ದ ಜನಾರ್ದನ ರೆಡ್ಡಿ 12 ವರ್ಷಗಳ ಬಳಿಕ ಮೊದಲ ಬಾರಿಗೆ ಜನರಿಂದ ಆಯ್ಕೆಯಾಗಿ ವಿಧಾನಸೌಧದ ಮೆಟ್ಟಿಲು ತುಳಿದಿದ್ದಾರೆ.

ಅವರ ಮುಂದೆ ತಮ್ಮ ಕ್ಷೇತ್ರದಲ್ಲಿ ಮಾಡಬೇಕಾದ ಸಾಲು ಸಾಲು ಸವಾಲುಗಳು ಇವೆ. ಚುನಾವಣಾ ಪ್ರಚಾರದ ಸಮಯದಲ್ಲಿ ಬಡವರು ಹಾಗೂ ನಿರ್ಗತಿಕರಿಗೆ ಎರಡು ಬೆಡ್‌ ರೂಂಗಳ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದ್ದರು. ರೆಡ್ಡಿ ಅವರ ಈ ಭರವಸೆ ಮಾತು ಜನರನ್ನು ಬಹಳಷ್ಟು ಆಕರ್ಷಿಸಿತ್ತಲ್ಲೇ ಮತಗಳನ್ನಾಗಿ ಪರಿವರ್ತನೆ ಮಾಡಿತ್ತು. ವಿಧಾನಸೌಧದದಲ್ಲಿ ಅಂಜನಾದ್ರಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕಾರಣ ಆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಇಲ್ಲಿನ ಜನ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹120 ಕೋಟಿ ಅನುದಾನ ಘೋಷಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಚುನಾವಣೆ ಘೋಷಣೆ ಪೂರ್ವದಲ್ಲಿ ಅಂಜನಾದ್ರಿಗೆ ಬಂದು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದ್ದರಿಂದ ಅಂಜನೇಯನ ಈ ಕ್ಷೇತ್ರ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದು, ಈಗ ಸರ್ಕಾರದ ಬದಲಾಗಿದೆ. ಕ್ಷೇತ್ರದಲ್ಲಿ ಹಿಂದೆ ಇದ್ದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಪರಾಭವಗೊಂಡಿದ್ದಾರೆ. ಹೀಗಾಗಿ ಪಕ್ಷದ ಏಕಾಂಗಿ ಆಟಗಾರ ರೆಡ್ಡಿ ಹೇಗೆ ’ಅಭಿವೃದ್ಧಿ ಕೆಲಸಗಳ ಗೋಲು’ ಹೊಡೆಯುತ್ತಾರೆ ಎನ್ನುವ ಪ್ರಶ್ನೆಯೂ ಇಲ್ಲಿನ ಜನರಲ್ಲಿದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT